ಮೈನ್‌ಸ್ವಿಚ್ ಬೋರ್ಡ್ ಪರಿಶೀಲಿಸುವಾಗ ವಿದ್ಯುತ್ ಶಾಕ್ | ಇಲೆಕ್ಟ್ರಿಷಿಯನ್ ಮೃತ್ಯು

ವಿದ್ಯುತ್ ಆಘಾತಕ್ಕೆ ಸಿಲುಕಿ ಯುವಕನೋರ್ವ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಉದ್ಯಾವರ ಕನಕೋಡ ಎಂಬಲ್ಲಿ ಬುಧವಾರ ಸಂಜೆ ನಡೆದ ಬಗ್ಗೆ ವರದಿಯಾಗಿದೆ.

 

ಮಲ್ಪೆ‌ ಕೊಡವೂರು ನಿವಾಸಿ ಮನೋಜ್‌ ಕರ್ಕೇರ ಮತ್ತು ಶಶಿಕಲಾ ದಂಪತಿಯ ಪುತ್ರ ಮೋಕ್ಷಿತ್ ಕರ್ಕೇರ (25 ವ) ಮೃತಪಟ್ಟ ದುರ್ದೈವಿ.

ಉದ್ಯಾವರ ಕನಕೋಡದಲ್ಲಿ ಆತನ ಚಿಕ್ಕಪ್ಪ ಶಂಕರ ಎಂಬವರ ಮನೆಯಲ್ಲಿದ್ದಾಗ ಜೋರಾಗಿ ಬೀಸಿದ ಗಾಳಿ ಮಳೆಗೆ ವಿದ್ಯುತ್ ಕೈ ಕೊಟ್ಟಿದ್ದು, ಈ ವೇಳೆ ಮೈನ್‌ ಸ್ವಿಚ್ ಬೋರ್ಡ್ ಪರಿಶೀಲಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ವಿದ್ಯುತ್ ಶಾಕ್ ನಿಂದ ಗಂಭೀರ ಗಾಯಗೊಂಡ ಆತನನ್ನು‌ ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಇಲೆಕ್ಟ್ರೀಷಿಯನ್ ವೃತ್ತಿ ನಡೆಸುತ್ತಿದ್ದ ಮೋಕ್ಷಿತ್ ಕರ್ಕೇರ ಮೆಕ್ಯಾನಿಕ್ ಆಗಿ, ಡೆಕೋರೆಟ್ ಮೊದಲಾದ ಕೆಲಸಗಳನ್ನು ನಡೆಸುತ್ತಿದ್ದನು. ಬಿಡುವಿನ ವೇಳೆಯಲ್ಲಿ ತಾಯಿಯೊಂದಿಗೆ ಮೀನು‌ ಮಾರಾಟದ ವ್ಯವಹಾರದಲ್ಲೂ ಸಹಕರಿಸುತ್ತಿದ್ದನು.

ಮನೋಜ್ ಕರ್ಕೇರ ಮತ್ತು ಶಶಿಕಲಾ ದಂಪತಿಯ ಇಬ್ಬರು ಪುತ್ರರಲ್ಲಿ ಮೋಕ್ಷಿತ್ ಹಿರಿಯವನಾಗಿದ್ದು, ಮ‌ನೆಗೆ ಆಧಾರವಾಗಿ ಬೆಳೆಯುತ್ತಿದ್ದನು. ಮಗನ ಅಗಲುವಿಕೆಯಿಂದ ಮನೆಯವರ ಆಕ್ರಂಧನ ಮುಗಿಲು ಮುಟ್ಟಿದೆ.

ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿ ಕೊಂಡು ತನಿಖೆ ಮುಂದುವರಿಸಿದ್ದಾರೆ

Leave A Reply

Your email address will not be published.