ಸವಣೂರು ಗ್ರಾ.ಪಂ ವ್ಯಾಪ್ತಿ ಸೀಲ್ ಡೌನ್: ವಾಹನ ಸವಾರರಿಗೆ ಕೋವಿಡ್ ಟೆಸ್ಟ್ ,ನಿರಂತರ ಸೇವೆಯಲ್ಲಿ ಕಾರ್ಯಪಡೆ

ಸವಣೂರು : ಐವತ್ತಕ್ಕಿಂತ ಹೆಚ್ಚು ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸವಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು ಸೋಮವಾರದಿಂದ ಸಂಪೂರ್ಣ ಸೀಲ್‍ಡೌನ್ ಮಾಡಲಾಗಿದ್ದು, ಮಂಗಳವಾರ ಕೋವಿಡ್ ಕಾರ್ಯಪಡೆ ಹಾಗೂ ಪೋಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಜರಗಿಸಿದೆ.

ವಾಹನ ಸವಾರರನ್ನು ತಡೆದು ನಿಲ್ಲಿಸಿ ಕೋವಿಡ್ ಪರೀಕ್ಷೆ ನಡೆಸಲಾಯಿತು.
ಸವಣೂರು, ಪುಣ್ಚಪ್ಪಾಡಿ, ಪಾಲ್ತಾಡಿ ಮೂರು ಗ್ರಾಮಗಳನ್ನೊಳಗೊಂಡ ಸವಣೂರು ಗ್ರಾ,ಪಂ ವ್ಯಾಪ್ತಿಯಲ್ಲಿ ಸುಮಾರು 8379 ಜನ ಸಂಖ್ಯೆ ಇದ್ದು, 1664 ಮನೆಗಳಿವೆ. ಇಲ್ಲಿ ಒಟ್ಟು 89 ಸಕ್ರೀಯ ಕೋವಿಡ್ ಪ್ರಕರಣ ಪತ್ತೆಯಾಗಿದೆ.

ಇಲ್ಲಿನ ಗ್ರಾಮ ಪಂಚಾಯಿತಿ, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಪೋಲೀಸ್ ಇಲಾಖೆಯ ಉತ್ತಮ ಕಾರ್ಯವೈಖರಿಯ ಮಧ್ಯೆಯೂ ಕೋವಿಡ್ ಪ್ರಕರಣ ಹೆಚ್ಚಾಗಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿತ್ತು. ಇದೀಗ ಸಂಪೂರ್ಣ ಲಾಕ್‍ಡೌನ್ ಆದೇಶವಾಗಿರುವುದರಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುವ ಭರವಸೆಯನ್ನು ಹೊಂದಲಾಗಿದೆ. ಸೋಮವಾರ ಜನಗಳಿಗೆ ಸ್ವಲ್ಪಮಟ್ಟಿನ ಲಾಕ್‍ಡೌನ್ ಸಡಿಲಿಕೆ ಮಾಡಿದರೂ ಮಂಗಳವಾರ ಪಂ. ವ್ಯಾಪ್ತಿಯ ಜನ ಮನೆಯಿಂದ ಹೊರ ನಡೆಯದಂತೆ ನೋಡಿಕೊಳ್ಳಲಾಯಿತು. ಯಾರೂ ಸವಣೂರು ಕಡೆ ಮುಖ ಮಾಡದಂತೆ ಕೂಡಾ ಮಾಡಲಾಯಿತು. ಸೋಮವಾರ ಸಂಜೆಯ ವೇಳೆಗೆ ಎಲ್ಲಾ ಸರಕಾರಿ ಕಛೇರಿ, ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‍ಗಳಿಗೆ ಪಂಚಾಯಿತಿ ನೋಟೀಸು ನೀಡಿ ಜೂನ್ 21 ರ ವರೆಗೆ ವ್ಯವಹಾರ ಸ್ಥಗಿತಗೊಳಿಸುವಂತೆ ಆದೇಶಿಸಿತ್ತು, ಪರಿಣಾಮ ಯಾವುದೇ ವಾಣಿಜ್ಯ, ವ್ಯಾಪಾರ, ವ್ಯವಹಾರ ನಡೆಯಲಿಲ್ಲ. ಮೆಡಿಕಲ್, ಇಲ್ಲಿತರ ಆರೋಗ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಅಂಗಡಿಮುಂಗಟ್ಟುಗಳು ಮುಚ್ಚಿದ್ದವು. ಕೋವಿಡ್ ಕಾರ್ಯಪಡೆಯಿಂದ ಪಂ ವ್ಯಾಪ್ತಿಯಲ್ಲಿ ಮೈಕ್‍ನಲ್ಲಿ ಎನೌನ್ಸ್ ಮಾಡಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿತ್ತು. ಮುಖ್ಯವಾಗಿ ಸುಬ್ರಹ್ಮಣ್ಯ-ದರ್ಬೆ ರಾಜ್ಯ ಹೆದ್ದಾರಿಯಲ್ಲಿ ಸವಣೂರು ಹಾದು ಹೋಗುವ ಎಲ್ಲಾ ವಾಹನಗಳನ್ನು ತಪಾಸನೆ ಮಾಡಿ ಅದರಲ್ಲಿರುವವರಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ಸವಣೂರು ಜಂಕ್ಷನ್‍ನಲ್ಲಿ ಚೆಕ್‍ಪೋಸ್ಟ್ ನಿರ್ಮಿಸಿ ಹಾದು ಹೋಗುವ ವಾಹನಗಳನ್ನು ಪೋಲೀಸರು ತಡೆದು ಪಕ್ಕದ ಬಸ್ಸ್ ಪ್ರಯಾಣಿಕರ ತಂಗುದಾಣದಲ್ಲಿ ಕೋವಿಡ್ ತಪಾಸನೆ ಮಾಡಲಾಗುತ್ತಿತ್ತು.

ಅನಗತ್ಯವಾಗಿ ತಿರುಗಾಡುತ್ತಿದ್ದ ವಾಹನಗಳಿಗೆ ಬೆಳ್ಳಾರೆ ಠಾಣಾಧಿಕಾರಿ ಆಂಜನೇಯ ರೆಡ್ಡಿ ಅವರ ನೇತೃತ್ವದ ಪೋಲೀಸ್ ತಂಡ ಬ್ರೇಕ್ ಹಾಕಿ ಕೆಲವರಿಗೆ ದಂಢ ವಿಧಿಸುತ್ತಿದ್ದರು. ಮಾತ್ರವಲ್ಲದೆ ಮಾಂತೂರು, ಹಾಗೂ ಇತರೆಡೆ ಮನೆ ಮನೆಗೆ ತೆರಳಿ ಕೋವಿಡ್ ಪರೀಕ್ಷೆ ನಡೆಸಲಾಯಿತು.

ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಅವರ ಮಾರ್ಗದರ್ಶನದಲ್ಲಿ ಆರೋಗ್ಯ ಸಹಾಯಕಿಯರಾದ ವಾಗೇಶ್ವರಿ,ಸುಧಾಕ್ಷಿಣಿ ಹಾಗೂ ಆಶಾ ಕಾರ್ಯಕರ್ತೆಯರ ಸಹಯೋಗದಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ.

ಮಂಗಳವಾರ 66 ಕ್ಕೂ ಹೆಚ್ಚು ಜನರ ಕೋವಿಡ್ ಪರೀಕ್ಷೆ ನಡೆಸಲಾಯಿತು. ಬುಧವಾರವೂ ಕೋವಿಡ್ ಪರೀಕ್ಷೆ ನಡೆಸಲಾಗಿದೆ.ಕಾರ್ಯಪಡೆಯ ಸದಸ್ಯರೊಂದಿಗೆ ಸೇವಾ ಭಾರತಿಯ ಪ್ರವೀಣ್ ,ಸಂತೋಷ್ ಕೈ ಜೋಡಿಸಿದರು.

ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಮನೆಗಳ ಜನರನ್ನು ಪರೀಕ್ಷೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಪಂಚಾಯಿತಿ ಆಡಳಿತ ಮಂಡಳಿ ಹೇಳಿದೆ. ಪುತ್ತೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಆಗಮಿಸಿ ಪರಿಸ್ಥಿತಿಯ ಅವಲೋಕನ ಮಾಡಿದರು.
ಪಂಚಾಯಿತಿ ಅಧ್ಯಕ್ಷೆ ರಾಜೀವಿ ಶೆಟ್ಟಿ, ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ, ಸದಸ್ಯರಾದ ಸತೀಶ್ ಅಂಗಡಿಮೂಲೆ, ತೀರ್ಥರಾಮ ಕೆಡೆಂಜಿ, ರಝಾಕ್, ರಫೀಕ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇನ್‍ಚಾರ್ಜ್ ಲೆಕ್ಕಿಗ ಮನ್ಮಥ ಅಬೀರ , ಪ್ರಮುಖರಾದ ಸುರೇಶ್ ರೈ ಸೂಡಿಮುಳ್ಳು, ಗಿರಿಶಂಕರ ಸುಲಾಯ, ಕೊರೊನಾ ವಾರಿಯರ್ಸ್ ಮತ್ತಿತರರು ಲಾಕ್‍ಡೌನ್ ಯಶಸ್ಸಿಗೆ ಶ್ರಮಿಸಿದರು.

Leave A Reply

Your email address will not be published.