ಮುಗ್ಧ ಜನರನ್ನು ಮರುಳು ಮಾಡುವ ಸಿಂಗಂ, ಸಿಂಹಿಣಿ, ಸನ್ನಿ ಲಿಯೋನ್ ಇತ್ಯಾದಿ ಪೇಪರ್ ಟೈಗರ್ ಗಳ ಬಗ್ಗೆ ಒಂದು ಎಚ್ಚರದ ಮಾತು !
ಬೆಂಗಳೂರು: ಹಿರಿಯ ಪೊಲೀಸ್ ಅಧಿಕಾರಿ ಬಿ.ಆರ್. ರವಿಕಾಂತೇಗೌಡ ಅವರು ಚಿನ್ನದಂತಹ ಮಾತಾಡಿದ್ದಾರೆ. ಇನ್ನಾದರೂ ಅಂಧ ಶ್ರದ್ಧೆಯ, ವಿನಾಕಾರಣದ ಅಭಿಮಾನದ, ಸ್ಸಾರಿ, ದುರಭಿಮಾನದ ಜನರಿಗೆ ಒಂದಷ್ಟು ಅರ್ಥ ಆಗಲಿ ಎಂದು ಈ ವರದಿ.
ಪೊಲೀಸ್ ಅಧಿಕಾರಿ ರವಿಕಾಂತೇಗೌಡ ಅವರು ಮೊನ್ನೆ ಮಾತನಾಡಿ, ಐಎಎಸ್, ಐಪಿಎಸ್ ಹಾಗೂ ಇತರೆ ಉನ್ನತ ಹುದ್ದೆಯಲ್ಲಿರುವ ಕೆಲ ಅಧಿಕಾರಿಗಳು, ‘ಸಿಂಗಂ’ ಹಾಗೂ ‘ಸಿಂಹಿಣಿ’ ಎಂಬ ಬಿರುದು ಪಡೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ವರ್ಚಸ್ಸು ಬೆಳೆಸಿಕೊಳ್ಳುತ್ತಿದ್ದಾರೆ. ಜನರನ್ನು ಬೆಪ್ಪು ಮಾಡುತ್ತಿರುವ ಇಂಥ ಬೆಳವಣಿಗೆ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸ್ ಹಿರಿಯ ಅಧಿಕಾರಿ ಬಿ.ಆರ್. ರವಿಕಾಂತೇಗೌಡ ಕಿವಿಮಾತು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಬೆಂಗಳೂರು ಸಂಚಾರ ವಿಭಾಗದ ಜಂಟಿ ಕಮಿಷನರ್ ರವಿಕಾಂತೇಗೌಡ, ‘ಕಪ್ಪು-ಬಿಳುಪು ಚಿತ್ರಗಳ ಮೂಲಕ ಜನರನ್ನು ಬೆಪ್ಪು ಮಾಡುವ ಅಪಾಯಕಾರಿ ಅಧಿಕಾರಿಗಳಿಗೆ ಲಿಂಗ ಬೇಧವಿಲ್ಲ. ಈ ವಿಷಯದಲ್ಲಿ ನಾವೆಲ್ಲರೂ ಎಚ್ಚರದಿಂದ ಇರುವುದು ಒಳಿತು’ ಎಂದಿದ್ದಾರೆ.
‘ಅಧಿಕಾರಿಶಾಹಿ, ಬ್ರಿಟಿಷಶಾಹಿ ಮನೋಭಾವದಿಂದ ಆಚೆ ಬಾರದೆ ವಿಜೃಂಭಿಸುತ್ತಿರುವುದು ಹಾಗೂ ಸಾರ್ವಜನಿಕ ಹಣವನ್ನು ದುಂದು ಮಾಡಿದರೂ ಕೆಲವರು ಭೇಷ್ ಎನಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಒಬ್ಬ ಅಧಿಕಾರಿಯಾಗಿ ನಿಮ್ಮೊಂದಿಗೆ ಈ ಮಾತು ಹಂಚಿಕೊಳ್ಳುತ್ತಿದ್ದೇನೆ. ಕಳೆದ ದಶಕದಲ್ಲಿ ಆದ ಒಂದು ಬೆಳವಣಿಗೆಯನ್ನು ನಾವೆಲ್ಲ ಗಮನಿಸಬೇಕು. ತಂತ್ರಜ್ಞಾನದ ಅರಿವುಳ್ಳವರು ಅಧಿಕಾರಶಾಹಿಯಲ್ಲಿ ಹೆಚ್ಚಾಗುತ್ತಿದ್ದಂತೆ, ಸಾಮಾಜಿಕ ಜಾಲತಾಣ ಮೂಲಕ ವೈಯಕ್ತಿಕ ವರ್ಚಸ್ಸು ಬೆಳೆಸಿಕೊಳ್ಳಲು, ತಾವಷ್ಟೇ ಪ್ರಾಮಾಣಿಕರು ಎಂಬುದಾಗಿಯೂ ತಾವು ಸಿಂಗಂ, ಸಿಂಹಿಣಿಯರೆಂದೂ ಬಿಂಬಿಸಿಕೊಳ್ಳಲು ಪ್ರಾರಂಭಿಸಿದರು.
‘ಕೆಲವರು, ತಮ್ಮದೇ ಅಭಿಮಾನಿಗಳ ಫೇಸ್‌ಬುಕ್ ಪುಟಗಳನ್ನು ಆರಂಭಿಸಿದರು. ತಾವು ಮಾಡಬೇಕಾದ ಕೆಲಸಗಳನ್ನು ತಮ್ಮ ಹೊಣೆಗಾರಿಕೆಯೆಂದು ಭಾವಿಸದೆ, ತಮ್ಮ ವಿಶಿಷ್ಟತೆಯೆಂದು ಪ್ರಚಾರಕ್ಕಿಳಿದರು. ಆಡಳಿತದ ಹೊರವಲಯದಲ್ಲಿರುವ ಮುಗ್ಧ ಜನರಲ್ಲಿ ತಾವು ಅವರ ಉದ್ಧಾರಕ್ಕೆ ಬಂದ ಅವತಾರ ಪುರುಷರೆಂದು ನಂಬಿಸತೊಡಗಿದರು. ಇವರಿಂದ ಸ್ಫೂರ್ತಿ ಪಡೆದಂತಹ ಸಿನೆಮಾಗಳು ಬಂದು ಹೀರೋಗಳಾಗಿ ವಿಜೃಂಭಿಸಿದರು. ಅಸಲಿಗೆ, ಇಂಥ ಅಧಿಕಾರಿಗಳ ಅವತಾರಗಳನ್ನು ಅವರ ಒಳ–ಹೊರಗು ಬಲ್ಲವರು ಕಂಡು ಹೇಸುತ್ತಾರೆ’ ಎಂದೂ ರವಿಕಾಂತೇಗೌಡ ಅಭಿಪ್ರಾಯಪಟ್ಟಿದ್ದಾರೆ.
‘ಉದಾಹರಣೆಗೆ ಈಶಾನ್ಯ ರಾಜ್ಯದಿಂದ ಬಂದಿದ್ದ ಒಬ್ಬ ಐಪಿಎಸ್ ಅಧಿಕಾರಿಯ ಬಗ್ಗೆ ಹಬ್ಬಿದ್ದ ರೋಚಕ ಕತೆಗಳು ಹಾಗೂ ಸಾಹಸಗಳು ನಿಜವೆಂದು ನಾನು ನಂಬಿದ್ದೆ, ನಾನು ಇಲಾಖೆಗೆ ಬಂದು ಆತನ ಅವತಾರಗಳನ್ನು ಕಂಡು ಗಾಬರಿಯಾದೆ. ಪ್ರಾಮಾಣಿಕರು, ದಕ್ಷರು ಸದ್ದಿಲ್ಲದೆ ಕೆಲಸ ಮಾಡುವುದನ್ನೂ ಕಂಡೆ.’
‘ಅಧಿಕಾರಿಗಳಿಗೆ ಪ್ರಾಮಾಣಿಕತೆ ಹಾಗೂ ದಕ್ಷತೆಯಷ್ಟೇ ಅನಾಮಿಕತೆಯು ಮುಖ್ಯವಾದದ್ದು. ಕೆಲಸ ಯಶಸ್ವಿಯಾದಾಗ ಆ ಗೆಲುವು ಇಡೀ ತಂಡಕ್ಕೆ ನೀಡುವುದು ಮುಖ್ಯ’ ಎಂದೂ ಅವರು ಹೇಳಿದ್ದಾರೆ.
ಕರ್ನಾಟಕದ ಸಿಂಗಂ ಖ್ಯಾತಿಯ ಅಣ್ಣಾ ಮಲೈ ಇಲ್ಲಿನ ಜನಪ್ರಿಯತೆಯನ್ನು ತಮಿಳುನಾಡಿಗೆ ಪಾರ್ಸೆಲ್ ಮಾಡಿ ಅಲ್ಲಿ ಬಿಜೆಪಿ ಸೇರಿ ರಾಜನಾಗಲು ಹೊರಟಿದ್ದಾರೆ. ಇದೀಗ ರೋಹಿಣಿ ಸಿಂಧೂರಿ ಗೆ ಪಟ್ಟ ಕಟ್ಟಲು ಹೊರಟಿದ್ದಾರೆ ಜನ.
ನಾವು ಸನ್ನಿ ಲಿಯೋನ್ ಥರದ ದರಿದ್ರ ವ್ಯಕ್ತಿಯನ್ನೇ, ಆಕೆಯ ಸಾಮಾಜಿಕ ಕಾಳಜಿ ಎಂಬ ನಾಲ್ಕು ಪುಡಿಗಾಸಿನ ಸೇವೆಯ ಸೇವೆಯ ಹೆಸರಿನಲ್ಲಿ ಅಭಿಮಾನಿ ಸಂಘ ಕಟ್ಟಿಕೊಂಡವರು. ಆಕೆ ಮಾತ್ರವಲ್ಲ ಎಷ್ಟೋ ಜನ ಹೆಸರು ಮಾಡಬೇಕು ಎನ್ನುವ ತೆವಳಿನ ಅಧಿಕಾರಿಗಳು, ಹಣವಂತರು, ಸಿನಿಮಾನಟರು ಜುಜುಬಿ ಹಣ ಖರ್ಚುಮಾಡಿ ಬಿಟ್ಟಿ ಪ್ರಚಾರ ಪಡೆಯುತ್ತಿದ್ದಾರೆ. ಅಂಧ ಜನರು ಅವರನ್ನು ಶ್ರದ್ಧಾಭಕ್ತಿಯಿಂದ ಪೂಜಿಸುತ್ತಿದ್ದಾರೆ. ಇಂಥವರ ಬಗ್ಗೆ ಜನ ಎಚ್ಚರ ಇರುವುದು ಮುಖ್ಯ. ಮನಸ್ಸಿನಿಂದ ಯೋಚಿಸಬೇಡಿ, ಬುದ್ದಿಯಿಂದ ಯೋಚಿಸಿ.