ಸರ್ವೆ : ಕುಸಿಯುವ ಹಂತದಲ್ಲಿದ್ದ ಬಡ ಕುಟುಂಬದ ಮನೆಯ ಮೇಲ್ಛಾವಣಿಯನ್ನು ದುರಸ್ತಿ ಮಾಡಿದ ಶ್ರೀ ಷಣ್ಮುಖ ಯುವಕ ಮಂಡಲ
ಸವಣೂರು: ಕುಸಿಯುವ ಹಂತದಲ್ಲಿದ್ದ ಸರ್ವೆ ಗ್ರಾಮದ ಬಾವಿಕಟ್ಟೆ ನಿವಾಸಿ ಬೊಗ್ಗ ಮೊಗೇರ-ರಾಧಾ ದಂಪತಿಗಳ ಮನೆಯ ಮೇಲ್ಚಾವಣಿಯನ್ನು 15000 ರೂ ವೆಚ್ಚದಲ್ಲಿ ದುರಸ್ತಿ ಮಾಡಿಕೊಡುವ ಮೂಲಕ ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲದ ಸದಸ್ಯರು ಮಾನವೀಯತೆ ಮೆರೆದಿದ್ದಾರೆ.
ಶಿಥಿಲಾವಸ್ಥೆಗೆ ತಲುಪಿದ್ದ ಮನೆಯ ಮೇಲ್ಛಾವಣಿ ಮಳೆಗೆ ಬೀಳುವ ಹಂತದಲ್ಲಿದ್ದು ಮನೆ ಮಂದಿ ಆತಂಕದಲ್ಲಿದ್ದರು. ಅಲ್ಲದೇ ಮನೆಯವರು ತಮ್ಮ ಕಷ್ಟದ ಬಗ್ಗೆ ಸ್ಥಳೀಯ ಷಣ್ಮುಖ ಯುವಕ ಮಂಡಲದ ಸದಸ್ಯರ ಬಳಿ ಹೇಳಿಕೊಂಡಿದ್ದರು. ಇದಕ್ಕೆ ಸ್ಪಂಧಿಸಿದ ಯುವಕ ಮಂಡಲದ ಅಧ್ಯಕ್ಷ ಗೌತಮ್ರಾಜ್ ಕರುಂಬಾರು, ಮುಂಡೂರು ಗ್ರಾ.ಪಂ ಸದಸ್ಯ ಕಮಲೇಶ್ ಸರ್ವೆದೋಳಗುತ್ತು ಹಾಗೂ ಯುವಕ ಮಂಡಲದ ಸದಸ್ಯರು ತಕ್ಷಣ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ನಂತರ ಕೇವಲ ಎರಡೇ ದಿನಗಳಲ್ಲಿ ಛಾವಣಿ ದುರಸ್ತಿಗೊಳಿಸುವ ಮೂಲಕ ಕುಟುಂಬಕ್ಕೆ ನೆರವಾಗಿದ್ದಾರೆ.
ತಮ್ಮ ಸಮಸ್ಯೆಗೆ ಸ್ಪಂಧಿಸಿ ಮನೆಯ ಮೇಲ್ಛಾವಣಿ ನಿರ್ಮಾಣ ಮಾಡಿಕೊಟ್ಟ ಯುವಕ ಮಂಡಲದ ಸದಸ್ಯರಿಗೆ ಬೊಗ್ಗ ಮೊಗೇರ-ರಾಧಾ ದಂಪತಿಗಳು ಕೃತಜ್ಞತೆ ಸಲ್ಲಿಸಿದರು.
ಯುವಕ ಮಂಡಲದ ನಿಕಟಪೂರ್ವ ಅಧ್ಯಕ್ಷರು, ಮುಂಡೂರು ಗಾ.ಪಂ ಸದಸ್ಯರೂ ಆಗಿರುವ ಕಮಲೇಶ್ ಸರ್ವೆದೋಳಗುತ್ತು ಮಾತನಾಡಿ ಯುವಕ ಮಂಡಲ ಸ್ಥಾಪನೆಯಾದಾಗಿನಿಂದ ಸರ್ವೆ ಗ್ರಾಮದ ಶಿಕ್ಷಣ ಸಂಸ್ಥೆಗಳಿಗೆ, ಆಸ್ಪತ್ರೆಗೆ, ಧಾರ್ಮಿಕ ಸಂಸ್ಥೆಗಳಿಗೆ, ಸ್ಥಳೀಯಾಡಳಿತಕ್ಕೆ ನಿರಂತರ ಸಹಕಾರ ನೀಡುತ್ತಾ ಬಂದಿದ್ದು ಇದೀಗ ನೂತನ ಅಧ್ಯಕ್ಷ ಗೌತಮ್ರಾಜ್ ಕರುಂಬಾರು ಅವರ ನೇತೃತ್ವದಲ್ಲಿ ಇನ್ನಷ್ಟು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ಹೇಳಿದರು.
ತಾಲೂಕು ಯುವಜನ ಒಕ್ಕೂಟದ ಗೌರವಾಧ್ಯಕ್ಷ ಸುಬ್ರಹ್ಮಣ್ಯ ಕರುಂಬಾರು, ಸಾಮಾಜಿಕ ಕಾರ್ಯಕರ್ತ ಅರುಣ್ ಕಲ್ಲಮ, ಯುವಕ ಮಂಡಲದ ಅಧ್ಯಕ್ಷ ಗೌತಮ್ರಾಜ್ ಕರುಂಬಾರು, ಖಜಾಂಜಿ ಗುರುರಾಜ್ ಪಟ್ಟೆಮಜಲು, ಜೊತೆ ಕಾರ್ಯದರ್ಶಿ ಚಿರಾಗ್ ರೈ ಮೇಗಿನಗುತ್ತು, ಸುರೇಶ್ ಆಚಾರ್ಯ ಭಕ್ತಕೋಡಿ ಉಪಸ್ಥಿತರಿದ್ದರು. ಯುವಕ ಮಂಡಲದ ಸದಸ್ಯರು ದೇಣಿಗೆ ನೀಡಿ ಸಹಕರಿಸಿದರು.
ಷಣ್ಮುಖ ಯುವಕ ಮಂಡಲವು ಗ್ರಾಮದಲ್ಲಿ ವಿವಿಧ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿದ್ದು ಬಡವರ, ರೋಗಿಗಳ, ಕಷ್ಟದಲ್ಲಿರುವವರ ಕಣ್ಣೀರೊರೆಸುವ ಕಾರ್ಯವನ್ನು ಕೂಡಾ ಮಾಡುತ್ತಿದ್ದೇವೆ. ಆರ್ಥಿಕ ಸಂಕಷ್ಟದಲ್ಲಿದ್ದ ಬೊಗ್ಗ ಮೊಗೇರ ಅವರ ಮನೆಯ ಮೇಲ್ಛಾವಣಿ ದುರಸ್ತಿ ಮಾಡಿಕೊಡುವ ಮೂಲಕ ಯುವಕ ಮಂಡಲದ ಸದಸ್ಯರೆಲ್ಲರೂ ಸೇರಿ ಸಹಾಯ ಮಾಡಿದ್ದೇವೆ. ಮುಂದಕ್ಕೂ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಂಡು ಕಾರ್ಯೋನ್ಮುಖರಾಗಲಿದ್ದೇವೆ ಎಂದು ಯುವಕ ಮಂಡಲದ ಅಧ್ಯಕ್ಷ ಗೌತಮ್ರಾಜ್ ಕರುಂಬಾರು ತಿಳಿಸಿದ್ದಾರೆ.