ಚಿಕ್ಕಮಗಳೂರು | ಹಾಲಿನ ಡೈರಿಯಿಂದ ಫೀಡ್ಸ್ ಕೊಂಡು ಕೊಳ್ಳುವುದಿಲ್ಲ ಎಂಬ ಒಂದೇ ಕಾರಣಕ್ಕೆ ರೈತನ ಹಾಲನ್ನೇ ಖರೀದಿ ಮಾಡುತ್ತಿಲ್ಲ
ಚಿಕ್ಕಮಗಳೂರು: ಹಾಲಿನ ಡೈರಿಯಿಂದ ದನಗಳ ಫೀಡ್ ತೆಗೆದುಕೊಳ್ಳುವುದಿಲ್ಲ ಎಂಬ ಒಂದೇ ಕಾರಣಕ್ಕೆ ರೈತನ ಹಾಲನ್ನೇ ಖರೀದಿಸಲು ಹಿಂದೇಟು ಹಾಕುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ತಾಲೂಕಿನ ಗವನಹಳ್ಳಿ ರೈತ ತಿರುಮಲೇಶ್ ಕಳೆದ ಆರು ವರ್ಷಗಳಿಂದ ಹೈನುಗಾರಿಕೆಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. 2016ರಿಂದಲೂ ತೇಗೂರು ಗ್ರಾಮದಲ್ಲಿರುವ ಡೈರಿಗೆ ಹಾಲು ಹಾಕುತ್ತಿದ್ದಾರೆ. ಆದರೆ, ಕಳೆದೊಂದು ತಿಂಗಳಿಂದ ಡೈರಿಯವರು ತಿರುಮಲೇಶ್ ಅವರ ಹಾಲನ್ನ ಹಾಕಿಸಿಕೊಳ್ಳುತ್ತಿಲ್ಲ. ಕಾರಣ ಕೇಳಿದರೆ, ನೀವು ನಮ್ಮ ಡೈರಿಯಲ್ಲಿ ಹಸುವಿಗೆ ಫೀಡ್ಸ್ ತೆಗೆದುಕೊಳ್ಳುವುದಿಲ್ಲ. ಹಾಗಾಗಿ, ಸದ್ಯಕ್ಕೆ ಹಾಲು ಬೇಡ. ಬೇಕಾದಾಗ ಫೋನ್ ಮಾಡುತ್ತೇವೆ, ತಂದು ಹಾಕಿ ಎಂದು ಹೇಳಿದ್ದಾರೆ. ಇದರಿಂದ ರೈತ ತಿರುಮಲೇಶ್ ಕಂಗಾಲಾಗಿ ಹೋಗಿದ್ದಾರೆ.
ಮೊದಲೇ ಕಳೆದೊಂದು ವರ್ಷದಿಂದ ರೈತ ಸಮುದಾಯ ಕೊರೋನಾದ ಅಬ್ಬರದಲ್ಲಿ ಸಂಕಷ್ಟಕ್ಕೀಡಾಗಿದೆ. ಹೀಗಿರುವಾಗ ಡೈರಿ ಸಿಬ್ಬಂದಿ ತಮ್ಮ ಡೈರಿಯಲ್ಲಿ ಫೀಡ್ಸ್ ತೆಗೆದುಕೊಳ್ಳಲಿಲ್ಲ ಎಂಬ ಕಾರಣಕ್ಕೆ ಹಾಲನ್ನು ಹಾಕಿಸಿಕೊಳ್ಳದಿರುವುದರಿಂದ ರೈತ ತಿರುಮಲೇಶ್ ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ.
ತೇಗೂರು ಗ್ರಾಮದ ಡೈರಿಯಿಂದ ಫೀಡ್ಸ್ ತಂದರೆ ಹಸುಗಳು ತಿನ್ನಲ್ಲ. ಕೆಲವು ದನಗಳು ಮೂಸಿ ಕೂಡಾ ನೋಡಲ್ಲ. ಹಲವು ಬಾರಿ ಮರಳು ಕೂಡ ಸಿಕ್ಕಿದ್ದು ಉಂಟು. ಈ ರೀತಿಯ ಕಳಪೆ ಫೀಡನ್ನು ಯಾವ ದನ ತಾನೇ ತಿನ್ನಬಲ್ಲದು ?? ಅದಕ್ಕೆ ತಿರುಮಲೇಶ್ ಬೇರೆಡೆಯಿಂದ ಫೀಡ್ಸ್ ತಂದು ರಾಸುಗಳಿಗೆ ಕೊಡುತ್ತಾರೆ. ಆದರೆ, ತೇಗೂರಿನ ಡೈರಿಯವರು ತಮ್ಮ ಡೈರಿಯಿಂದ ಫೀಡ್ಸ್ ತೆಗೆದುಕೊಳ್ಳುವುದಿಲ್ಲ ಎಂಬ ಒಂದೇ ಕಾರಣಕ್ಕೆ ಅವರ ಹಾಲು ತಗೊಳ್ಳೊದನ್ನೇ ನಿಲ್ಲಿಸಿಬಿಟ್ಟಿದ್ದಾರೆ.
ಈ ಡೈರಿ ಇರೋದೆ ತೇಗೂರು, ಗವನಹಳ್ಳಿ ಹಾಗೂ ನಲ್ಲೂರು ಗ್ರಾಮದ ರೈತರಿಗಾಗಿ. ಆದರೆ, ಎಂಟತ್ತು ಕಿ.ಮೀ. ದೂರದ ಹಾಗೂ ಈ ಡೈರಿಗೆ ಸಂಬಂಧವೇ ಇಲ್ಲದ ಊರುಗಳ ಹಾಲನ್ನೂ ಖರೀದಿ ಮಾಡುವ ಡೈರಿ ಸಿಬ್ಬಂದಿ ಈ ರೈತನ ಹಾಲನ್ನ ಮಾತ್ರ ತೆಗೆದುಕೊಳ್ಳುತ್ತಿಲ್ಲ.
ಬೇರೆ ದಾರಿ ಇಲ್ಲದ ಈ ಹೈನುಗಾರ ಬೆಳಗ್ಗೆ-ಸಂಜೆ ಸುಮಾರು ಎಂಟತ್ತು ಲೀಟರ್ ಹಾಲನ್ನ ಗಿಡಕ್ಕೆ ಸುರಿಯುತ್ತಿದ್ದಾರೆ. ಇದು ಇವರೊಬ್ಬರ ಸಮಸ್ಯೆಯಲ್ಲ. ಈ ರೀತಿ ಹಲವು ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ.
ಒಂದೆಡೆ ಕೂಲಿ ಇಲ್ಲ. ಮತ್ತೊಂದೆಡೆ ಡೈರಿಯಲ್ಲಿ ಹಾಲು ಖರೀದಿಸಲ್ಲ. ಇತ್ತ ಹೊಲದಲ್ಲಿ ಉತ್ತಮ ಬೆಳೆಯೂ ಇಲ್ಲ. ಈ ಎಲ್ಲಾ ಕಾರಣಗಳಿಂದ ಕೈಯಲ್ಲಿ ದುಡ್ಡೂ ಇಲ್ಲದಂತಾಗಿದ್ದು, ರೈತ ತನ್ನ ಬದುಕಿನ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಹುಸುಗಳನ್ನ ತಂದ ಲೋನ್ ಕೂಡ ಕಟ್ಟಬೇಕು ಎಂಬುದು ಇನ್ನೊಂದು ರೀತಿಯ ತಲೆನೋವು. ಹೀಗಾಗಿ ದಾರಿ ಕಾಣದೆ ಹೈನುಗಾರರು ತಲೆಮೇಲೆ ಕೈಹೊದ್ದು ಕೂರುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ, ಕೂಡಲೇ ಡೈರಿಯವರು ಎಲ್ಲಾ ರೈತರ ಹಾಲನ್ನ ಖರೀದಿಸಿ ರಾಸುಗಳ ಜೊತೆ ನಮ್ಮ ಹೊಟ್ಟೆಯನ್ನೂ ತುಂಬಿಸಬೇಕೆಂದು ಮನವಿ ಮಾಡಿದ್ದಾರೆ. ಡೈರಿ ಅಧಿಕಾರಿಗಳು ಆದಷ್ಟು ಬೇಗ ಇತ್ತ ಗಮನ ಹರಿಸಬೇಕಿದೆ.