ಕರ್ನಾಟಕದಲ್ಲಿ ಇನ್ನು 2 ದಿನ ಭಾರೀ ಮಳೆ ನಿರೀಕ್ಷೆ | 17 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಣೆ

ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ತೀವ್ರಗೊಂಡ ಕಾರಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ 2 ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಇನ್ನೂ 4 ದಿನಗಳ ಕಾಲ ರಾಜ್ಯಾದ್ಯಂತ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಮತ್ತು ನಾಳೆ ಗುಡುಗು ಸಿಡಿಲು ಸಹಿತ ಮಳೆಯಾಗುವುದರಿಂದ ಒಟ್ಟು 17 ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ಜೂನ್ 6ರವರೆಗೆ ಕರ್ನಾಟಕದಲ್ಲಿ ಮಳೆ ಮುಂದುವರೆಯಲಿದೆ.

ಇಂದು ನೈಋತ್ಯ ಮುಂಗಾರು ಕೇರಳವನ್ನು ಪ್ರವೇಶಿಸಲಿದೆ. ಹೀಗಾಗಿ, ಕರ್ನಾಟಕದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ. ಕರ್ನಾಟಕಕ್ಕೆ ಜೂನ್ 6 ಅಥವಾ 7ರಂದು ಮುಂಗಾರು ಆಗಮನವಾಗುವ ನಿರೀಕ್ಷೆಯಿದೆ. ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಜಾಸ್ತಿಯಾದ ಹಿನ್ನೆಲೆ ಮಳೆಯಾಗುತ್ತಿದೆ. ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆ ಹಾಗೂ ಇನ್ನು ಕೆಲವೆಡೆ ತುಂತುರು ಮಳೆಯಾಗುವ ಸಾಧ್ಯತೆಗಳಿವೆ. ಈಗಾಗಲೇ ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೀದರ್, ಗದಗ, ಬೆಂಗಳೂರು ನಗರ, ಕಲಬುರ್ಗಿ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ಕೊಡಗು, ಕೋಲಾರ, ತುಮಕೂರು, ಹಾಸನ, ಕೊಪ್ಪಳ, ದಾವಣಗೆರೆ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಹಳದಿ ಅಲರ್ಟ್ ಘೋಷಿಸಲಾಗಿದೆ.

ಕರ್ನಾಟಕದಲ್ಲಿ ಇನ್ನು ಮೂರು ದಿನಗಳೊಳಗೆ ಮುಂಗಾರು ಪ್ರವೇಶವಾಗಲಿದ್ದು, ಮಳೆಗಾಲ ಶುರುವಾಗಲಿದೆ ಎಂದು ಕರ್ನಾಟಕ ಪ್ರಾದೇಶಿಕ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಣೆ ಆಗಿರುವುದರಿಂದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಇಂದು ಕರ್ನಾಟಕ ಮಾತ್ರವಲ್ಲದೆ ಕೇರಳ, ಗುಜರಾತ್, ಮಹಾರಾಷ್ಟ್ರ, ಅರುಣಾಚಲ ಪ್ರದೇಶದಲ್ಲಿ ಮಳೆಯ ಅಬ್ಬರ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಜೂನ್ 6 ಅಥವಾ 7ರಂದು ಕರ್ನಾಟಕದಲ್ಲಿ ಮುಂಗಾರು ಮಳೆಯಾಗಲಿದೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೆಎಸ್‌ಎನ್‌ಡಿಎಂಸಿ ಸೈಂಟಿಫಿಕ್ ಆಫೀಸರ್ ಎಸ್.ಎಸ್.ಎಂ. ಗವಾಸ್ಕರ್, ಒಂದು ಬಾರಿ ಮುಂಗಾರು ಆರಂಭವಾದ ನಂತರ ಅದರ ಪರಿಣಾಮ ಯಾವ ರೀತಿ ಇರಬಹುದು ಎಂದು ನಾವು ಅಂದಾಜಿಸಬಹುದು. ಜೂನ್ ನಿಂದ ಸೆಪ್ಟೆಂಬರ್‌ವರೆಗೆ ಮಳೆಯ ಆರ್ಭಟವಿರಲಿದೆ ಎಂದು ತಿಳಿಸಿದ್ದಾರೆ. ಈ ವರ್ಷ ಸಾಧಾರಣದಿಂದ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

Leave A Reply

Your email address will not be published.