ಮಾಧ್ಯಮದಿಂದ ಸರಕಾರದ ಟೀಕೆ ದೇಶದ್ರೋಹ ಅಲ್ಲ: ಸುಪ್ರೀಂ ಕೋರ್ಟ್

 


ಹೊಸದಿಲ್ಲಿ, ಮೇ 31: ಸರಕಾರವನ್ನು ಟೀಕಿಸಿ ಟಿವಿ ವಾಹಿನಿಗಳಲ್ಲಿ ಕಾರ್ಯಕ್ರಮ ಪ್ರಸಾರ ಮಾಡುವುದು ಹಾಗೂ ಮುದ್ರಣ ಮಾಧ್ಯಮದಲ್ಲಿ ನಿಲುವುಗಳನ್ನು ಪ್ರಕಟ ಮಾಡುವುದು ದೇಶದ್ರೋಹ ಅಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.


ಆಂಧ್ರಪ್ರದೇಶದಲ್ಲಿ ಕೊರೋನ ಪರಿಸ್ಥಿತಿಯನ್ನು ಜಗನ್ ರೆಡ್ಡಿ ಸರಕಾರ ನಿರ್ವಹಿಸಿದ ರೀತಿಯ ಬಗ್ಗೆ ವೈಎಸ್ಆರ್ಸಿಪಿಯ ಬಂಡಾಯ ಸಂಸದ ಕೃಷ್ಣಂ ರಾಜು ಅವರ ವಿಮರ್ಶಾತ್ಮಕ ನಿಲುವನ್ನು ಪ್ರಸಾರ ಮಾಡಿರುವುದಕ್ಕೆ ದೇಶದ್ರೋಹದ ಆರೋಪ ಎದುರಿಸುತ್ತಿರುವ ಟಿವಿ ವಾಹಿನಿಗಳ ವಿರುದ್ಧ ಪೊಲೀಸರು ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ.


ವೈಎಸ್ಆರ್ನ ಬಂಡಾಯ ಸಂಸದ ಕೆ. ರಘು ರಾಮ ಕೃಷ್ಣ ರಾಜು ಅವರ ನಿಂದನಾತ್ಮಕ ಭಾಷಣವನ್ನು ಪ್ರಸಾರ ಮಾಡಿರುವುದಕ್ಕೆ ದೇಶದ್ರೋಹದ ಆರೋಪ ಎದುರಿಸುತ್ತಿರುವ ಎರಡು ತೆಲುಗು ಸುದ್ದಿ ವಾಹಿನಿಗಳಾದ ಟಿವಿ5 ಹಾಗೂ ಎಬಿಎನ್ ಆಂಧ್ರಜ್ಯೋತಿ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆ ಸುಪ್ರೀಂ ಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ. ಇದು ದೇಶದ್ರೋಹದ ಮಿತಿಯನ್ನು ವ್ಯಾಖ್ಯಾನಿಸುವ ಸಮಯ ಎಂದು ಕೂಡ ಸುಪ್ರೀಂ ಕೋರ್ಟ್ ತಿಳಿಸಿದೆ.


ದೇಶದ್ರೋಹ ಸೇರಿದಂತೆ ವಿವಿಧ ಕಾಯ್ದೆಗಳ ಅಡಿಯಲ್ಲಿ ಆರೋಪಗಳನ್ನು ಎದುರಿಸುತ್ತಿರುವ ಟಿವಿ ವಾಹಿನಿಗಳ ಮನವಿಗೆ ನಾಲ್ಕು ವಾರಗಳ ಒಳಗೆ ಪ್ರತಿಕ್ರಿಯೆ ನೀಡುವಂತೆ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ನೇತೃತ್ವದ ಪೀಠ ಹೇಳಿದೆ. ಪ್ರಸಾರ ಕುರಿತ ಎಫ್ಐಆರ್ಗೆ ಸಂಬಂಧಿಸಿ ಸುದ್ದಿ ವಾಹಿನಿಗಳ ಉದ್ಯೋಗಿಗಳು ಅಥವಾ ಸಿಬ್ಬಂದಿಗಳ ವಿರುದ್ಧ ಯಾವುದೇ ರೀತಿಯ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಹಾಗೂ ಎಸ್. ರವೀಂದ್ರ ಭಟ್ ಅವರನ್ನು ಕೂಡ ಒಳಗೊಂಡ ನ್ಯಾಯಪೀಠ ಹೇಳಿದೆ.


‘‘124ಎ (ದೇಶದ್ರೋಹ) ಹಾಗೂ 153 (ವರ್ಗಗಳ ನಡುವೆ ದ್ವೇಷದ ಉತ್ತೇಜನ)ದ ನಿಯಮಗಳನ್ನು, ಮುಖ್ಯವಾಗಿ ಮಾಧ್ಯಮ ಹಕ್ಕು ಹಾಗೂ ಅಭಿವ್ಯಕ್ತಿ ಸ್ವಾತಂತ್ರವನ್ನು ವ್ಯಾಖ್ಯಾನಿಸುವ ಅಗತ್ಯತೆ ಇದೆ ಎಂಬ ನಿಲುವನ್ನು ನಾವು ಹೊಂದಿದ್ದೇವೆ’’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.‌

Leave A Reply

Your email address will not be published.