ಹಣ ಕೊಟ್ಟರೆ ಗಾಡಿ ಬಿಡ್ತೀನಿ ಎಂದು ಲಾರಿ ಚಾಲಕರಿಂದ ಹಣ ಪೀಕಿಸುತ್ತಿದ್ದ ಅರಣ್ಯ ಇಲಾಖೆಯ ಅಧಿಕಾರಿ ಅಮಾನತು | ಲಂಚ ಪಡೆಯುವ ವಿಡಿಯೋ ವೈರಲ್ ಆಗುವ ಮೂಲಕ ಬೆಳಕಿಗೆ ಬಂದಿದ್ದ ಪ್ರಕರಣ
ದುಡ್ಡು ಕೊಟ್ಟರೆ ಗಾಡಿ ಬಿಡ್ತೀನಿ ಎಂದು ಲಾರಿ ಚಾಲಕರಿಂದ ಹಣ ಪೀಕಿಸುತ್ತಿದ್ದ ಸಂಪಾಜೆ ವಲಯ ದಬ್ಬಡ್ಕ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಉಪ ವಲಯ ಅರಣ್ಯಾಧಿಕಾರಿ ಹಾಗೂ ಮೋಜಣಿದಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಕ್ಷಿತ್ ಅವರನ್ನು ಲಂಚ ಸ್ವೀಕಾರದ ಆರೋಪದ ಮೇರೆಗೆ ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿಯವರು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಮೇ. 24ರಂದು ತನಿಖಾ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ರಕ್ಷಿತ್ ಅವರು ಲಾರಿ ಚಾಲಕನಿಂದ ಲಂಚಕ್ಕೆ ಬೇಡಿಕೆಯಿಟ್ಟು ಹಣವನ್ನು ಪಡೆದುಕೊಂಡಿದ್ದನ್ನು ಸ್ವತಃ ಲಾರಿ ಚಾಲಕನೇ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದರು.
ಈ ವೀಡಿಯೋ ಎಲ್ಲೆಡೆ ಸಾಮಾಜಿಕ ಜಾಲತಾಣದ ಮೂಲಕ ವೈರಲ್ ಆಗಿತ್ತು.
ಈ ಕುರಿತು ತನಿಖೆ ನಡೆಸಿದ ಇಲಾಖಾಧಿಕಾರಿಗಳು ರಕ್ಷಿತ್ ಅವರ ವಿರುದ್ದ ಕರ್ತವ್ಯ ಲೋಪ, ನಂಬಿಕೆ ದ್ರೋಹ ಹಾಗೂ ವಹಿಸಿದ ಜವಾಬ್ದಾರಿಯನ್ನು ನಿರ್ವಹಿಸಲು ವಿಫಲತೆ ಸಾಬೀತಾದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಇಂತಹ ಲಂಚಗುಳಿತನದ ಘಟನೆ ಹಲವೆಡೆ ನಡೆಯುತ್ತಿದೆ.ಆಗೊಮ್ಮೆ ಈಗೊಮ್ಮೆ ಹೊರ ಬರುವ ವಿಚಾರಗಳಿಂದ ವಿಷಯ ಸಾರ್ವಜನಿಕರ ಗಮನಕ್ಕೆ ಬರುತ್ತದೆ.