ಗ್ರಾ.ಪಂ. ಸದಸ್ಯರಿಗೂ ಲಸಿಕೆ ನೀಡಲು ಸಚಿವ ಸಂಪುಟದಲ್ಲಿ ಚರ್ಚೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಕೊರೋನ ಕಾರ್ಯಪಡೆ ಸದಸ್ಯರಾಗಿರುವ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಕೊರೋನಾ ವಾರಿಯರ್ಸ್ ಎಂಬುದಾಗಿ ಪರಿಗಣಿಸಿ ಪ್ರಥಮ ಪ್ರಾಶಸ್ತ್ಯದಲ್ಲಿ ಕೊರೋನ ಲಸಿಕೆ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ನಾಳೆ ನಡೆಯುವ ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಬೈಂದೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸರಕಾರಿ ನೌಕರರಾಗಿರುವ ಗ್ರಾಪಂ ಪಿಡಿಓ ಹಾಗೂ ಇತರ ಸಿಬ್ಬಂದಿಗೆ ಪ್ರಥಮ ಪ್ರಾಶಸ್ತ್ಯದಲ್ಲಿ ಲಸಿಕೆ ನೀಡುವ ಕೆಲಸ ಆಗಿದೆ. ಇದೀಗ ಸದಸ್ಯರಿಗೂ ಲಸಿಕೆ ನೀಡುವ ಬಗ್ಗೆ ಬೇಡಿಕೆ ಬಂದಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ.

ಆದರೆ ರಾಜ್ಯದಲ್ಲಿ ಒಟ್ಟು 99500 ಸದಸ್ಯ ಇರುವುದರಿಂದ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ವಿಳಂಬವಾಗಿದೆ ಎಂದರು.

ಡಯಾಲಿಸಿಸ್ ಸೆಂಟರ್‌ಗೆ ಸ್ಥಳ ಕೊರತೆ

ಬೈಂದೂರಿನಲ್ಲಿ ಕೊಲ್ಲೂರು ದೇವಸ್ಥಾನದಿಂದ 25ಲಕ್ಷ ರೂ. ವೆಚ್ಚದಲ್ಲಿ ಡಯಾಲಿಸಿಸ್ ಸೆಂಟರ್ ಸ್ಥಾಪಿಸಲು ಉದ್ದೇಶಿಸಲಾಗಿತ್ತು. ಆದರೆ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಸೆಂಟರ್ ಸ್ಥಾಪಿಸಲು ಸ್ಥಳಾವಕಾಶದ ಕೊರತೆ ಕಂಡುಬಂದಿದೆ ಎಂದು ಸಚಿವರು ಹೇಳಿದರು.

ಮುಂದೆ ಈ ಕೇಂದ್ರವು ತಾಲೂಕು ಆಸ್ಪತ್ರೆಯಾಗಿ ಪರಿವರ್ತನೆಗೊಂಡು ಹೊಸ ಕಟ್ಟಡ ನಿರ್ಮಾಣವಾಗಲು ಸಾಕಷ್ಟು ಸಮಯ ಬೇಕಾಗಬಹುದು. ಈ ಸಂಬಂಧ ತಾಲೂಕು ಆರೋಗ್ಯ ಅಧಿಕಾರಿ ಜೊತೆ ಮಾತುಕತೆ ನಡೆಸಿದ್ದೇನೆ. ಇದಕ್ಕೆ ಬದಲಿ ವ್ಯವಸ್ಥೆ ಮಾಡಿದರೆ ದೇವಸ್ಥಾನದಿಂದ ಡಯಾಲಿಸಿಸ್ ಸೆಂಟರ್ ಸ್ಥಾಪಿಸಲಾಗುವುದು ಎಂದರು.

ಕೊರೋನ ವಾರಿಯರ್ಸ್‌ಗಳಾಗಿರುವ ಆಶಾಕಾರ್ಯಕರ್ತೆಯರ ಆರೋಗ್ಯ, ಬದುಕಿಗೆ ಬೇಕಾದ ಭದ್ರತೆಯನ್ನು ಸರಕಾರ ಈಗಾಗಲೇ ಸೌಲಭ್ಯ ಒದಗಿಸಿದೆ. ಇದೀಗ ವೇತನ ಪರಿಷ್ಕರಣೆ ಹಾಗೂ ಗೌರವಧನ ಹೆಚ್ಚಿಸುವ ಬಗ್ಗೆ ಶೀಘ್ರವೇ ಸರಕಾರ ತೀರ್ಮಾನ ಮಾಡಲಿದೆ ಎಂದು ಸಚಿವರು ಹೇಳಿದರು.

ಪ್ರತಿ ಗ್ರಾಮ ಪಂಚಾಯತ್‌ಗಳು ಕೊರೋನಾ ಪೀಡಿತರಿಗೆ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಒಂದು ವಾಹನವನ್ನು ತಿಂಗಳ ಮಟ್ಟಿಗೆ ಖರೀದಿಸಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರಿಗೆ ಒದಗಿಸಲು ಸೂಚಿಸ ಲಾಗಿದೆ. ದ.ಕ. ಜಿಲ್ಲೆಯಲ್ಲಿ ಈ ಬಗ್ಗೆ ಈಗಾಗಲೇ ಆದೇಶ ಹೊರಡಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಆದೇಶ ಹೊರಡಿಸಲು ಹೇಳಲಾಗುವುದು ಎಂದರು.

Leave A Reply

Your email address will not be published.