ದಲಿತ ಯುವಕನಿಗೆ ಮೂತ್ರ ಕುಡಿಸಿ ಹಲ್ಲೆಗೈದ ಇನ್ಸ್ಪೆಕ್ಟರ್ | ಅಮಾನತಿಗೆ ಒತ್ತಾಯ, ಹೆಚ್ಚಿದ ಪ್ರತಿಭಟನೆ
ಚಿಕ್ಕಮಗಳೂರು ಜಿಲ್ಲೆ ಕಿರುಗುಂದ ಗ್ರಾಮದ ದಲಿತ ಯುವಕನ ಮೇಲೆ ಗೋಣಿಬೀಡು ಪೊಲೀಸ್ ಠಾಣಾಧಿಕಾರಿ ದೌರ್ಜನ್ಯ ಎಸಗಿದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ.
ದೌರ್ಜನ್ಯದ ಸಂದರ್ಭದಲ್ಲಿ ಗೋಣಿಬೀಡು ಪೊಲೀಸ್ ಠಾಣಾಧಿಕಾರಿಯು ದಲಿತ ಯುವಕನಿಗೆ ಮೂತ್ರ ಕುಡಿಸಿದ್ದಲ್ಲದೇ, ಮೂತ್ರವನ್ನು ನಾಲಿಗೆಯಿಂದ ನೆಕ್ಕಿಸಿಸುವ ಮೂಲಕ ಅಮಾನವೀಯ ಕೃತ್ಯ ಎಸಗಿದ್ದಾರೆಂದು ನೊಂದ ಯುವಕ ಹೇಳಿಕೆ ನೀಡಿದ್ದಾನೆ.
ಕಿರುಗುಂದ ಗ್ರಾಮದ ವಿವಾಹಿತ ಮಹಿಳೆ ಹಾಗೂ ಆಕೆಯ ಪತಿಯ ನಡುವಿನ ಜಗಳದ ವಿಚಾರಕ್ಕೆ ಸಂಬಂಧಿಸಿದಂತೆ ಗೋಣಿಬೀಡು ಠಾಣೆಯ ಪಿಎಸ್ಐ ಅರ್ಜುನ್ ಯಾವುದೇ ದೂರು ಇಲ್ಲದೇ ಅದೇ ಗ್ರಾಮದ ದಲಿತ ಸಮುದಾಯದ ಯುವಕ ಪುನೀತ್(22) ಎಂಬ ಯುವಕನ ಮೇಲೆ ಶಂಕೆಗೊಂಡು ಮೇ 10ರಂದು ಆತನನ್ನು ಗೋಣಿಬೀಡು ಠಾಣೆಗೆ ಕರೆದೊಯ್ದಿದ್ದರು.
ಈ ವೇಳೆ ಯುವಕ ಪುನೀತ್ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಆರೋಪ ಹೊರಿಸಿದ ಠಾಣಾಧಿಕಾರಿ ಅರ್ಜುನ್, ಮಹಿಳೆಯೊಂದಿಗಿನ ಸಂಬಂಧವನ್ನು ಒಪ್ಪಿಕೊಂಡು ಆಕೆಯನ್ನು ಬಚ್ಚಿಟ್ಟಿರುವುದಾಗಿ ಒಪ್ಪಿಕೊಳ್ಳುವಂತೆ ಹೇಳಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ಪುನೀತ್ನನ್ನು ಠಾಣೆಯ ಕೊಠಡಿಯೊಂದರಲ್ಲಿ ತಲೆಕೆಳಗೆ ಮಾಡಿ ನೇತು ಹಾಕಿ ಪಿಎಸ್ಐ ಹಲ್ಲೆ ನಡೆಸಿದ್ದರು. ನಂತರ ಜಾತಿ ವಿಚಾರಿಸಿ ಜಾತಿ ನಿಂದನೆ ಮಾಡಿದ್ದಾರೆ. ನಂತರ ಅಂದು ರಾತ್ರಿ 10 ಗಂಟೆಗೆ ಮನೆಗೆ ಕಳುಹಿಸಿದ್ದಾರೆಂದು ಆರೋಪಿಸಿ ನೊಂದ ಯುವಕ ಎಸ್ಪಿ, ಐಜಿ, ಡಿಐಜಿಗೆ ಪತ್ರ ಬರೆದು ತನಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದ್ದರು.
ಈ ದೂರಿನ ಮೇರೆಗೆ ಚಿಕ್ಕಮಗಳೂರು ಎಸ್ಪಿ, ಘಟನೆ ಸಂಬಂಧ ತನಿಖೆ ನಡೆಸಲು ಡಿವೈಎಸ್ಪಿ ಒಬ್ಬರನ್ನು ನೇಮಿಸಿದ್ದರು. ಬಳಿಕ ಗೋಣಿಬೀಡು ಠಾಣಾಧಿಕಾರಿ ಅರ್ಜುನ್ ಅವರನ್ನು ಎಸ್ಪಿ ಕಚೇರಿಗೆ ವರ್ಗಾವಣೆ ಮಾಡಿದ್ದ ಚಿಕ್ಕಮಗಳೂರು ಎಸ್ಪಿ ಎಂ.ಎಚ್ ಅಕ್ಷಯ್, ಗೋಣಿಬೀಡು ಠಾಣೆಗೆ ಮಹಿಳಾ ಪಿಎಸ್ಐ ಒಬ್ಬರನ್ನು ನೇಮಿಸಿದ್ದರು.
ಈ ಬೆಳವಣಿಗೆಗಳ ಬಳಿಕ ಮೂಡಿಗೆರೆ ತಾಲೂಕಿನ ದಲಿತ ಪರ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರು, ಎಸ್ಪಿ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿ ಪಿಎಸ್ಐ ಅರ್ಜುನ್ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದ್ದರು. ಆದರೆ ಈ ಸಂಬಂಧ ಚಿಕ್ಕಮಗಳೂರು ಎಸ್ಪಿ ಯಾವುದೇ ಕ್ರಮಕೈಗೊಂಡಿರಲಿಲ್ಲ.
“ಪೊಲೀಸ್ ಠಾಣಾಧಿಕಾರಿಯನ್ನು ಅಮಾನತು ಮಾಡದೇ ಎಸ್ಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ಪಿಎಸ್ಐ ಹಲ್ಲೆ, ಅಮಾನವೀಯ ಹಿಂಸೆಯಿಂದ ನಾನು ಮಾನಸಿಕವಾಗಿ, ದೈಹಿಕವಾಗಿ ನೊಂದಿದ್ದು, ತನಗೆ ನ್ಯಾಯ ಕೊಡಿಸಿ” ಎಂದು ಪುನೀತ್ ಆಗ್ರಹಿಸಿದ್ದಾನೆ.