ಎರಡು ತಿಂಗಳು ಕೋಮಾದಲ್ಲಿದ್ದು, ಪವಾಡ ಸದೃಶ ಬದುಕುಳಿದ ಭಾರತೀಯ ಮೂಲದ ವೈದ್ಯೆ
ಹುಟ್ಟು ಮತ್ತು ಸಾವನ್ನು ಮಾನವನಿಂದ ನಿಯಂತ್ರಿಸಲು ಸಾಧ್ಯವಿಲ್ಲ. ಒಂದೊಮ್ನೆ ನಾವೆಷ್ಟೇ ಪ್ರಯತ್ನಪಟ್ಟರೂ ನಮಗೆ ಬೇಕಾದವರನ್ನು ಬದುಕಿಸಲು ಸಾಧ್ಯವಾಗುವುದಿಲ್ಲ. ಅದೇ ರೀತಿ ಕೆಲವೊಮ್ಮೆ ಪವಾಡಸದೃಶ ರೀತಿಯಲ್ಲಿ ಬದುಕುಳಿದ ಉದಾಹರಣೆಗಳಿವೆ. ಇದಕ್ಕೆ ನಿದರ್ಶನವೆಂಬಂತೆ ಬ್ರಿಟನ್ನಲ್ಲಿ ಒಂದು ಘಟನೆ ನಡೆದಿದೆ.
ಬ್ರಿಟನ್ ನಲ್ಲಿ ಕಳೆದ ಎರಡು ತಿಂಗಳಿನಿಂದ ಕೋವಿಡ್ ಸೋಂಕಿತ ಭಾರತೀಯ ಮೂಲದ ವೈದ್ಯೆಯೊಬ್ಬರು ಕೋಮಾದಲ್ಲಿದ್ದು, ಇದೀಗ ಪವಾಡ ಸದೃಶ ರೀತಿಯಲ್ಲಿ ಚೇತರಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ತನ್ನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಹಾಗೂ ತೀರಾ ಹದಗೆಟ್ಟಿರುವುದರಿಂದ ತಾನಿನ್ನು ಬದುಕುವುದಿಲ್ಲ ಎಂದು ವೈದ್ಯೆ ಕುಟುಂಬಸ್ಥರಿಗೆ ಹೇಳಿದ್ದರು. ಇಸಿಎಂಒ-ಎಕ್ಟ್ರಾ ಕಾರ್ಪೊರಾಲ್ ಅಕ್ಸಿಜನ್ ಯಂತ್ರದ ನೆರವಿನಲ್ಲಿದ್ದು, ಇದು ಜೀವದ ಕೊನೆಯ ಘಟ್ಟವೆಂದು ವೈದ್ಯಕೀಯವಾಗಿ ಪರಿಗಣಿಸಲಾಗುತ್ತಿದೆ. ಆದರೆ 35 ದಿನಗಳ ನಂತರ ನಡೆದದ್ದು ಅಲ್ಲಿ ಪವಾಡವೇ ಸರಿ. ಕೋಮಾ ಸ್ಥಿತಿಯಲ್ಲಿದ್ದ ವೈದ್ಯೆ ವೈದ್ಯಕೀಯ ಜಗತ್ತಿಗೆ ಸವಾಲು ಎಂಬಂತೆ ಪುನಃ ಚೇತರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳೆದ ವರ್ಷ ಮಾರ್ಚ್ ನಲ್ಲಿ ಡಾ.ಗುಪ್ತಾ 40ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ನಂತರ ಕೆಲವು ವಾರಗಳಲ್ಲಿಯೇ ಗುಪ್ತಾಗೆ ಕೋವಿಡ್ 19 ಸೋಂಕು ತಗುಲಿತ್ತು. ದಿಢೀರನೆ ಅವರ ಆರೋಗ್ಯ ಹದಗೆಟ್ಟಿತ್ತು. ಆಮ್ಲಜನಕದ ಪ್ರಮಾಣ ಶೇ.80ಕ್ಕಿಂತ ಕಡಿಮೆಯಾಗಿತ್ತು. ನಂತರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೆಂಟಿಲೇಟರ್ ನಲ್ಲಿ ಇರಿಸಿದ್ದರು. ಹಲವು ದಿನಗಳ ನಂತರ ಇಸಿಎಂಒಗೆ ಸ್ಥಳಾಂತರಿಸಿದ್ದರು. ಸಂಪೂರ್ಣವಾಗಿ ಕೋಮಾದಿಂದ ಹೊರಬಂದ ನಂತರ ಆಕೆ ಮತ್ತೆ ನಿಲ್ಲುವುದನ್ನು ಮತ್ತು ನಡೆಯುವುದನ್ನು ಕಲಿಯಬೇಕಾಗಿತ್ತು.
ಪವಾಡಸದೃಶ ಚೇತರಿಕೆ ಕಂಡು ನನ್ನ ಕುಟುಂಬ ನಿಜಕ್ಕೂ ಅಚ್ಚರಿಗೊಳಗಾಗಿದೆ. ನನ್ನ ಮಗಳು, ನನ್ನ ಪತಿ ಪ್ರತಿ ಹಂತದಲ್ಲಿಯೂ ನನ್ನೊಂದಿಗಿದ್ದರು. ಅದೇರೀತಿ ಇಸಿಎಂಒ ಅತ್ಯುತ್ತಮ ಜೀವರಕ್ಷಕ ವ್ಯವಸ್ಥೆಯಾಗಿದೆ. ಇದು ರೋಗಿಯ ಜೋಡಿ ಶ್ವಾಸಕೋಶದಂತೆ ಕಾರ್ಯನಿರ್ವಹಿಸುತ್ತದೆ. ಇದರಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ರೋಗಿಯ ಪ್ರಾಣ ರಕ್ಷಿಸಲು ನೆರವಾಗುತ್ತದೆ ಎಂದು ಡಾ. ಅನುಷಾ ಗುಪ್ತಾ ತಿಳಿಸಿದ್ದಾರೆ.
ಏನೇ ಆಗಲಿ ಭಾರತ ಮೂಲದ ವೈದ್ಯೆ ಮತ್ತೆ ವೈದ್ಯಕೀಯ ಸೇವಾ ಲೋಕಕ್ಕೆ ಕಾಲಿಡುವಂತೆ ಆಗಿದ್ದು ನಮಗೆ ಸಂತಸದ ವಿಷಯ.