ದುಡ್ಡು ಕೇಳಿದರೆಂದು ಹೊಟೇಲ್ಗೆ ನುಗ್ಗಿ ದಾಂಧಲೆ |ಮತ್ತೆ ಹಣ ಕೇಳಿದರೆ ಕೊಲ್ಲುವ ಬೆದರಿಕೆ , ಪೊಲೀಸರಿಗೆ ದೂರು
ಹೋಟೆಲ್ ಗೆ ನುಗ್ಗಿದ ತಂಡವೊಂದು ದಾಂಧಲೆ ನಡೆಸಿ ವ್ಯಕ್ತಿಯೊಬ್ಬರಿಗೆ ಹಲ್ಲೆ ಮಾಡಿ,ಹೋಟೆಲ್ ಗೆ ಹಾನಿ ಮಾಡಿದ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಮುನ್ನೂರು ಗ್ರಾಮದ ಕುತ್ತಾರ್ ಸಮೀಪದ ಮದನಿ ನಗರ ಎಂಬಲ್ಲಿ ರವಿವಾರ ನಡೆದಿದೆ.
ಕುತ್ತಾರಿನ ಮದನಿನಗರದ ‘ಕ್ಯಾಲಿಕಟ್ ಕಿಚನ್’ ಎಂಬ ಹೊಟೇಲಿಗೆ ನುಗ್ಗಿದ ತಂಡವೊಂದು ದಾಂಧಲೆ ನಡೆಸಿದೆ.ಆರೋಪಿಗಳಾದ ಲುಕ್ಮಾನ್, ಅಝ್ಮಾಲ್, ರಿಝ್ವಾನ್, ಇಮ್ರಾನ್, ಫವಾಝ್, ನಿಝಾಮ್, ಇರ್ಫಾನ್, ತೌಫಿಕ್ ಎಂಬವರು ಈ ಹೊಟೇಲ್ ಬಳಿ ಹೋಗಿ ತಿಂಡಿಗೆ ಆರ್ಡರ್ ಮಾಡಿದ್ದಾರೆ.
ಈ ವೇಳೆ ಕ್ಯಾಶ್ ಕೌಂಟರ್ನಲ್ಲಿದ್ದ ಸತೀಶ್ ಚಂದ್ರ ಎಂಬವರು ಈ ಬಾರಿಯ ಹಣ ಕೊಡಿ ಎಂದು ವಿನಂತಿಸಿದರು.
ಇದರಿಂದ ಸಿಟ್ಟುಗೊಂಡ ಆರೋಪಿಗಳು ಇತರರನ್ನು ಸೇರಿಸಿಕೊಂಡು ಕಲ್ಲು ದೊಣ್ಣೆಗಳನ್ನು ಹಿಡಿದುಕೊಂಡು ಬಂದು ಹೋಟೆಲ್ ಒಳಗಡೆ ಅಕ್ರಮವಾಗಿ ಪ್ರವೇಶ ಮಾಡಿ ಅವಾಚ್ಯ ಶಬ್ದದಿಂದ ಬೈದು ‘ನಾವು ಕೇಳುವಾಗ ಉಚಿತವಾಗಿ ತಿಂಡಿಗಳನ್ನು ಕೊಡಲು ನಿಮಗೆ ಆಗುವುದಿಲ್ಲವಾ ? ನಾವು ನಿಮಗೆ ಹಣ ಕೊಡಬೇಕಾ ? ಎಂದು ಕೇಳಿ ಕೌಂಟರ್ನಲ್ಲಿದ್ದ ಸತೀಶ್ ಚಂದ್ರರಿಗೆ ದೊಣ್ಣೆಯಿಂದ ಹೊಡೆದು, ಕಿಟಕಿ ಪಾತ್ರೆಗಳು, ಮೇಜು-ಕುರ್ಚಿಗಳಿಗೆ ಹಾನಿಗೈದು ಸುಮಾರು 20 ಸಾವಿರ ರೂ. ನಷ್ಟ ಮಾಡಿದ್ದಾರೆ ಎಂದು ಫೈಝಲ್ ಪಿ.ಕೆ. ಎಂಬವರು ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.
ಆರೋಪಿಗಳು ಕಲ್ಲು ದೊಣ್ಣೆಗಳನ್ನು ಹೊಟೇಲ್ ಬಳಿಯಲ್ಲೇ ಎಸೆದು ನಾವು ಕೋರ್ಟ್, ಸ್ಟೇಷನ್ಗೆ ಹೋಗಿ ಬಂದವರು. ನಾವು ಯಾರಿಗೂ ಹೆದರುವುದಿಲ್ಲ.
ನಾಳೆಯಿಂದ ಮತ್ತೆ ಹಣ ಕೇಳಿದರೆ ನಿಮ್ಮಲ್ಲಿ ಯಾರಾನ್ನಾದರೂ ಕೊಲೆ ಮಾಡಲಾಗುವುದು ಎಂದು ಬೆದರಿಸಿದ್ದಾರೆ. ಅಲ್ಲದೆ ಕೋವಿಡ್ ನಿಯಾಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.