ಸ್ವಾರ್ಥಿಯಾದ ಮನುಕುಲಕ್ಕೆ ಇನ್ನಾದರೂ ಅರ್ಥವಾಗಲಿದೆಯಾ?…ಹೇ ಮನುಜ ಮಣ್ಣಲ್ಲಿ ಮಣ್ಣಾಗಿ ಹೋಗುವಾಗ ನಿನ್ನವರೆಲ್ಲಿ.
ಎತ್ತ ನೋಡಿದರೂ ಲಾಕ್ ಡೌನ್.ಮನುಕುಲಕ್ಕೆ ಇನ್ನಾದರೂ ಅರ್ಥವಾಗಲಿದೆಯಾ ಸಾಮಾಜಿಕತೆ? ಮಾನವೀಯ ಮೌಲ್ಯಗಳೇ ಮರೆಯಾಗಿರುವ ಈ ಮನುಕುಲದಲ್ಲಿ “ನಾನು” “ನನ್ನದೆನ್ನುವ” ಮಾನವನ ಎರಡು ಸ್ವಭಾವ ತರ್ಕಕ್ಕೆ ನಿಲುಕದ್ದು.”ನನ್ನಿಂದಾನೆ ಎಲ್ಲಾ” ಎನ್ನುವ ಮನುಕುಲದ ಅಹಂಕಾರಕ್ಕೆ ಪ್ರಕೃತಿಯ ಸ್ಪಂದನೆ ಹಾಗೂ ಅದರ ಒಳಿತು ಕೆಡುಕುಗಳನ್ನು ಇತ್ತೀಚಿನ ದಿನಗಳಲ್ಲಿ ನಾವೆಲ್ಲರೂ ಕಾಣಬಹುದು.
ಕೋವಿಡ್-19 ಎಂಬ ನಾಮಾಂಕಿತವನ್ನು ಹೊಂದಿದ ಮಹಾಮಾರಿಯು ಮೊದಲು ಅಪರೂಪವಾಗಿದ್ದು, ಎಲ್ಲೋ ಬೇರೊಂದು ದೂರದ ದೇಶದಲ್ಲಿ ಈ ವೈರಸ್ ಇದೆ ಎಂದು ಕೇಳಿದ್ದ ನಮಗಿಂದು ಈ ವೈರಸ್ ನ ನಾಮವು ಚಿರಪರಿಚಿತವಾಗಿದೆ. ಈ ಮಹಾಮಾರಿಯ ಪರಿಣಾಮದಿಂದ ಇಡೀ ರಾಷ್ಟ್ರವೇ ಲಾಕ್ ಡೌನ್ ಎಂಬ ಬೀಗಕ್ಕೆ ಅಂಟಿಕೊಂಡಿದೆ.ಅದರಲ್ಲೂ ಕರ್ನಾಟಕ ರಾಜ್ಯಾದ್ಯಂತ ಲೆಕ್ಕವಿಲ್ಲದಷ್ಟು ಸಾವು ಸಂಭವಿಸುತ್ತಿದೆ.
ಸ್ವಾರ್ಥಿಯಾದ ಮನುಕುಲ ಅವರವರ ಕೆಲಸಗಳಲ್ಲಿ ತೊಡಗಿ ‘ಬ್ಯುಸೀ’ ಎನ್ನುವ ಆಂಗ್ಲಪದಕ್ಕೆ ಒತ್ತು ಕೊಡುತ್ತಿದ್ದ ಕಾಲವದು.ದಿನಬೆಳಗಾದರೆ ಸಾಕು ಹೊಟ್ಟೆಪಾಡಿಗೆ ದುಡಿಮೆ, ಎಲ್ಲೆಡೆಯೂ ಕೆಲಸದ ಒತ್ತಡ, ರಾತ್ರಿಯಲ್ಲಿ ದಣಿದಿದ್ದ ಮೈಗೆ ನಿದ್ದೆಯೊಡನೆ ತುಸು ವಿಶ್ರಾಂತಿಯ ಸಮಯ.ಇದು ನಮ್ಮ ಹಳ್ಳಿಗಳಲ್ಲಿ ಕಾಣಸಿಗುವ ದೃಶ್ಯವಾದರೆ ಇನ್ನೂ ಸಿಟಿಗಳಲ್ಲಂತು ಕೇಳೋದೇ ಬೇಡ ಕೈ ಚಾಚಿದರೆ ಗೋಡೆ ನಿಲುಕುವ ಮನೆ. ಆ ಮನೆಯಲ್ಲಿ ಯಾರಿದ್ದಾರೆ ಎಂದು ತಿಳಿಯಲಾಗದಷ್ಟು ಒತ್ತಡ ಪಾಪ ಆ ಜನರಿಗೆ! ತನ್ನ ಮನೆಯವರೊಡನೆಯೆ ತುಸು ಹೊತ್ತು ಕುಳಿತು ಮಾತನಾಡುವಷ್ಟು ಪುರುಸೊತ್ತಿಲ್ಲದ ಒತ್ತಡದ ಸಮಯವದು! ವಾರದ ಆರು ದಿನಗಳಲ್ಲೂ ಕೆಲಸದಲ್ಲಿ ತೊಡಗಿ ವೀಕೆಂಡ್ ನಲ್ಲಿ ಪಾರ್ಟಿ,ಮೋಜು, ಮಸ್ತಿ ಗಳಲ್ಲಿ ತೇಲಾಡುತ್ತಿದ್ದ ಈ ಸಿಟಿ ಜನರಿಗೆ ಲಾಕ್ ಡೌನ್ ಎಂಬ ಸಂಕೋಲೆಯು ಎಲ್ಲಾ ಕೆಲಸವ ಬ್ರೇಕ್ ಮಾಡಿ ಬಾಯಿಗೆ ಬೀಗಹಾಕಿ ಒಂದೆಡೆ ಮೂಲೆಯಲ್ಲಿ ಕೂರಿಸಿದಂತಾಗಿದೆ.
ತಾನಾಯಿತು ತನ್ನ ಕೆಲಸವಾಯಿತು ಎಂದೆನ್ನುತ್ತಿದ್ದಾತ ತನ್ನವರೊಡನೆ ತುಸು ಮಾತನಾಡಲು ಪುರುಸೊತ್ತಿಲ್ಲದಾತ,ಈ ಲಾಕ್ ಡೌನ್ ನಿಂದ ದಿನಪೂರ್ತಿ ತನ್ನವರೊಡನೆಯೆ ಬೆರೆತು ಕೌಟುಂಬಿಕ ಪ್ರೀತಿಯ ಅರಿತಂತಿದೆ.ಇದೆಲ್ಲದರ ಕಡೆಗೆ ಯೋಚಿಸಿದರೆ ಕೊರೋನ ಒಂದು ವರವಾದರೂ.! ಕೂಡ ಇನ್ನೊಂದೆಡೆ ಹೊಟ್ಟೆಪಾಡಿಗಾಗಿ ದಿನನಿತ್ಯ ದುಡಿಯುತ್ತಿದ್ದ ಕೂಲಿಕಾರ್ಮಿಕರ ಬದುಕಿನ ಬಂಡಿ ಮುಂದೆ ಸಾಗುವುದೇ ಕಷ್ಟಕರವೆನಿಸಿದೆ.ಆದರೂ ಯಾವುದೇ ಸಂಪಾದನೆಯಿಲ್ಲದಿದ್ದರೂ ಆರೋಗ್ಯವೆಂಬ ಸಂಪತ್ತು ಆ ಕಾಸಿನ ಸಂಪಾದನೆಗಿಂತಲೂ ಬಹುದೊಡ್ಡದಲ್ಲವೇ?!. ಎಂಬಂತೆ ಈ ಲಾಕ್ ಡೌನ್ ನಲ್ಲಿ ಬದುಕುತ್ತಿವೆ ಆ ಬಡಜೀವಗಳು. ಪಾಪ!..ಇಲ್ಲಿ ಬಡಜೀವಗಳ ಒಂದುತುತ್ತಿನ ಕಣ್ಣೀರ ಕಥೆ ಒಂದೆಡೆಯಾದರೆ,ಇನ್ನೊಂದೆಡೆ ಕೈ ತುಂಬಿ ತುಳುಕುತ್ತಿರುವ ದುಡ್ಡನ್ನ ಒಂದುದಿನವಷ್ಟೆ ಅನಾಥಾಶ್ರಮಕ್ಕೋ , ವೃದ್ಧಾಶ್ರಮಕ್ಕೊ, ಇಲ್ಲವೇ ಬೀದಿನಾಯಿಗಳಿಗೋ ನೀಡಿ ದಾನವೆಂಬ ಹೆಸರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ ಪಡೆಯ ಬಯಸುವ ಮಹನೀಯರೆಷ್ಟೋ?!!!..
ಸದ್ಯದ ಪರಿಸ್ಥಿತಿಯ ಬಗ್ಗೆ ಹೇಳುವುದಾದರೆ ಮನುಕುಲಕ್ಕೆ ಆರೋಗ್ಯದ ಎದುರು ಎಲ್ಲವೂ ನಶ್ವರ ಎಂದೆನಿಸಿರುವುದಂತು ಅಕ್ಷರಶಃ ಸತ್ಯ. ದುಡ್ಡುಒಂದಿದ್ದರೆ ಸಾಕು ಏನು ಬೇಕಾದರೂ ಕೊಂಡುಕೊಳ್ಳಬಹುದು ಎನ್ನುತ್ತಿದ್ದ ಮನುಕುಲಕ್ಕೆ ಸದ್ಯದ ಸ್ಥಿತಿ ಗತಿಯು ತಿರುಗೇಟು ನೀಡಿದೆ.ಮಾನವನು ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದಿದ್ದರೂ ಆತ ಪ್ರಕೃತಿಯ ಮುಂದೆ ಕೈ ಚೆಲ್ಲಿ ಕೂರುವ ಸನ್ನಿವೇಶ ಬಂದೊದಗಿದೆ.ತನ್ನ ಆಮಿಶಕ್ಕೆ ಅದೆಷ್ಟೋ ಜೀವರಕ್ಷಕ ವೃಕ್ಷಗಳನ್ನು ಬಲಿಕೊಡುತ್ತಿದ್ದ,ಮಾತೇ ಬಾರದ ಅದೆಷ್ಟೋ ಮೂಕಪ್ರಾಣಿಗಳ ರೋದನೆಗೆ ಕಾರಣೀಕರ್ತವಾದ ಮನುಕುಲವು ಎಲ್ಲೋ ಒಂದೆಡೆ ಮಾನವೀಯ ಮೌಲ್ಯಗಳನ್ನೆ ಮರೆತಂತೆ ಕಾಣುತ್ತದೆ! ಸದ್ಯಕ್ಕೆ ಈಗ ಜೀವದ ರಕ್ಷಣೆಗೆ ಕೃತಕ ಆಕ್ಸಿಜನ್ ಗೆ ಮೊರೆ ಹೋಗುವ ಪರಿಸ್ಥಿತಿ ಎದುರಾಗಿದೆ. ಹಕ್ಕಿಯಂತೆ ಆಕಾಶದೆತ್ತರಕ್ಕೆ ಹಾರಬಲ್ಲ,ಮೀನಿನಂತೆ ನೀರಿನೊಳಕ್ಕು ನುಗ್ಗಬಲ್ಲ ಮಾನವ ಈಗ ಬಾವಿಯೊಳಗಿನ ಕಪ್ಪೆಯಂತೆ ನಾಲ್ಕು ಗೋಡೆಯ ಮಧ್ಯೆ ಕುಳಿತುಕೊಳ್ಳಬೇಕಾದ ದೃಶ್ಯವನ್ನ ನಾವು ಎಲ್ಲೆಂದರಲ್ಲಿ ಕಾಣುತ್ತಿದ್ದೇವೆ. ಜಾಬ್,ಸಂಬಳ ಎನ್ನುತ್ತಿದ್ದಾತ ಕೃಷಿಭೂಮಿಯ ಮಹತ್ವವ ಅರಿತಂತಿದೆ.
ಸಿಟಿಗಳಲ್ಲಿ ಫ್ಲ್ಯಾಟ್ಗಳಲ್ಲಿ ಐಷಾರಾಮಿಯಾಗಿ ಬದುಕಬೇಕು ಎಂದೆನ್ನುತ್ತಿದ್ದಾತ ಹಳ್ಳಿಯ ತಂಪಾದ ಗಾಳಿಗೆ ಸೋತಂತೆ ಭಾಸವಾಗುತ್ತಿದೆ. ಫಾಸ್ಟ್ ಫುಡ್ ಹಿತ ಎಂದು ತೇಗುತ್ತಿದ್ದಾತ ತುತ್ತು ಅನ್ನದ ರುಚಿಯ ಬಯಸುವಂತಾಗಿದೆ. ಆರೋಗ್ಯವೇ ಭಾಗ್ಯ ಎನ್ನುತ್ತಾ ಮನೆಯಲ್ಲೇ ಕುಳಿತು ತಪಸ್ಸು ಮಾಡುವಂತ ಸ್ಥಿತಿಯಲ್ಲಿ ಸದ್ಯಕ್ಕೆ ನಾವಿದ್ದೇವೆ. ಸದ್ಯ ಈ ಪರಿಸ್ಥಿತಿಯಲ್ಲಾದರೂ ಮನುಕುಲಕ್ಕೆ ಎಲ್ಲವೂ ಶೂನ್ಯ ಎಂದೆನಿಸಿರುವುದಂತು ಖಚಿತ.
ನಿಧಾರ್ಕ್ಷಿಣ್ಯವಾಗಿ ಜೀವಿಗಳ ಹತ್ಯೆಗೈಯುತ್ತಿದ್ದ ಮನುಕುಲವು ಈಗ ಅವುಗಳಿಗಿಂತ ಕೀಳಾದ ಸ್ಥಿತಿಗತಿಯಲ್ಲಿ ಇಹಲೋಕಕ್ಕೆ ವಿದಾಯ ತಿಳಿಸುತ್ತಿದೆ.ತನ್ನವರನ್ನು ನೋಡಲಾರದೆ, ತನ್ನವರಿಂದ ಉಪಚರಿಸಲ್ಪಡದೆ, ಕೊನೆಕ್ಷಣದಲ್ಲೂ ತನ್ನವರ ಮುಖದರ್ಶನ ಪಡೆಯಲಾಗದೆ ಸಾಲು ಸಾಲಾಗಿ ಚಿರನಿದ್ರೆಯ ಕಾಯಗಳು ಚಿತೆಯ ಮೇಲೆ ಮಲಗಿರುವುದನ್ನು ಕಂಡ ಮೇಲಾದರು ಅರಿವಾಗದೆ ಇದ್ದರೆ ಮನುಷ್ಯನಾಗಿ ಹುಟ್ಟಿರುವುದಕ್ಕೆ ಅರ್ಥವಿಲ್ಲ. ಇನ್ನಾದರೂ ಅರ್ಥೈಸಿಕೊಳ್ಳಿ. “ಹೇ ಮನುಜ ಮಣ್ಣಲ್ಲಿ ಮಣ್ಣಾಗಿ ಹೋಗುವಾಗ ನಿನ್ನವರೆಲ್ಲಿ”.
✍️ ತೇಜಸ್ವಿನಿ.ನೇರ್ಪು