ಲಾಕ್ ಡೌನ್ ನ ಮೊದಲ ದಿನದ ಪೊಲೀಸ್ ಲಾಠಿ ಪ್ರಯೋಗದ ವಿರುದ್ಧ ಜನಾಕ್ರೋಶ | ವಿನಾಕಾರಣ ಬಲಪ್ರಯೋಗ ಸಲ್ಲ- ಎಂದು ಸರ್ಕಾರಕ್ಕೆ ಖಡಕ್ ಸೂಚನೆ ಕೊಟ್ಟ ಹೈಕೋರ್ಟ್ !
ರಾಜ್ಯದಲ್ಲಿ ಲಾಕ್ ಡೌನ್ ಮೊದಲ ದಿನ, ಅಂದರೆ ನಿನ್ನೆ ಪೊಲೀಸರು ನಡೆಸಿದ ದೌರ್ಜನ್ಯದ ವಿರುದ್ಧ ತೀವ್ರ ಜನಾಕ್ರೋಶ ವ್ಯಕ್ತವಾಗಿದೆ. ಈಗ ಹೈಕೋರ್ಟ್ ಅನಗತ್ಯ ಬಲಪ್ರಯೋಗ ಮಾಡುವುದು ಬೇಡವೆಂದು ಸರ್ಕಾರಕ್ಕೆ ಸೂಚನೆ ನೀಡಿದೆ.
ಕೋವಿಡ್ ಸಂಬಂಧಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ಪೀಠ ಈ ಕುರಿತು ಸೂಚನೆ ನೀಡಿದೆ.
ಕಳೆದ ವರ್ಷ ಮಾರ್ಚ್ 30 ರಂದು ಅನಗತ್ಯವಾಗಿ ಬಲಪ್ರಯೋಗ ಮಾಡದಂತೆ ಹೈಕೋರ್ಟ್ ನಿರ್ದೇಶನ ನೀಡಿದೆ ಅಲ್ಲವೇ ಎಂದು ಹೈಕೋರ್ಟ್ ಪೀಠ ಹೇಳಿತು. ಆಗ ಅಡ್ವೊಕೇಟ್ ಜನರಲ್ ಆದ ಪ್ರಭುಲಿಂಗ ನಾವದಗಿ ಅವರು, ” ನಾವು ಬಲಪ್ರಯೋಗ ಮಾಡುತ್ತಿಲ್ಲ. ಜಾಗೃತಿ ಮೂಡಿಸಲಾಗುತ್ತಿದೆ. ಪೊಲೀಸ್ ಮಹಾನಿರ್ದೇಶಕರೊಂದಿಗೆ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳಲು ತಿಳಿಸಲಾಗುವುದು ” ಎಂದು ಹೇಳಿದ್ದಾರೆ.
ಅರ್ಜಿದಾರರ ಪರ ವಕೀಲರು, ಪೊಲೀಸರು ಸಾರ್ವಜನಿಕರ ಮೇಲೆ ಅನಗತ್ಯ ಬಲಪ್ರಯೋಗ ಮಾಡುತ್ತಿದ್ದಾರೆ. ಸಿಕ್ಕ ಸಿಕ್ಕವರನ್ನು ಲಾಠಿಯಿಂದ ಹೊಡೆಯುತ್ತಿದ್ದಾರೆ ಎಂದು ದೂರಿದ್ದರು.
‘ ಜನ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಸರ್ಕಾರಕ್ಕೆ ಅಗತ್ಯ ಸಹಕಾರ ಕೊಡಬೇಕು. ಅತ್ತ ಸರ್ಕಾರ ಅನಗತ್ಯವಾಗಿ ಬಲಪ್ರಯೋಗ ಮಾಡದಂತೆ ಪೊಲೀಸರಿಗೆ ನಿರ್ದೇಶಿಸಬೇಕು ಎಂದು ತಿಳಿಸಿದ್ದು, ಮುಂದಿನ ವಿಚಾರಣೆಯನ್ನು ಮೇ 13 ಕ್ಕೆ ಮುಂದೂಡಿದೆ.