ಇಂದು,ನಾಳೆ ದ.ಕ.ದಲ್ಲಿ ವಾರಾಂತ್ಯ ಕರ್ಫ್ಯೂ, ಸುಮ್ಮನೆ ತಿರುಗಾಡಿದರೆ ವಾಹನ‌ ಸೀಝ್

 

ದ.ಕ. ಜಿಲ್ಲೆಯಾದ್ಯಂತ ಮೇ.8 ಶನಿವಾರ ಮತ್ತು ಮೆ.9ರ ರವಿವಾರ ದಿನವಿಡೀ ವಾರಾಂತ್ಯ ಕರ್ಫ್ಯೂ ಇರಲಿದೆ. ಅದಕ್ಕೆ ಪೂರಕವಾಗಿ ಶುಕ್ರವಾರ ರಾತ್ರಿ 9 ಗಂಟೆಯಿಂದ ಕರ್ಪ್ಯೂ ಆರಂಭಗೊಳ್ಳಲಿದ್ದು, ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ಔಷಧಿ ಅಂಗಡಿಗಳು ಮತ್ತು ಆಸ್ಪತ್ರೆಗಳನ್ನು ಹೊರತುಪಡಿಸಿ ಎಲ್ಲಾ ರೀತಿಯ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಿದೆ.

ಸುಮ್ಮನೆ ತಿರುಗಾಡಿದರೆ ವಾಹನಗಳನ್ನು ಪೊಲೀಸರು ಸೀಝ್ ಮಾಡುವರು.

ತುರ್ತು ಮತ್ತು ಅಗತ್ಯ ಸೇವೆಗಳೊಂದಿಗೆ ವ್ಯವಹರಿಸುವ ಮತ್ತು 24×7 ಕಾರ್ಯಾಚರಣೆಗಳ ಅಗತ್ಯವಿರುವ ಕೈಗಾರಿಕೆಗಳು/ಕಂಪನಿಗಳು/ಸಂಸ್ಥೆಗಳಿಗೆ ಮಾತ್ರ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.

ನಿರ್ಮಾಣ ಚಟುವಟಿಕೆಗಳು ನಡೆಯುವ ಸ್ಥಳದಲ್ಲೇ ಕಾರ್ಮಿಕರು ಲಭ್ಯವಿದ್ದಲ್ಲಿ ಕಾಮಗಾರಿ ನಡೆಸಬಹುದಾಗಿದೆ. ಆದರೆ ಹೊರಗಿನ ಪ್ರದೇಶಗಳಿಂದ ಕಾರ್ಮಿಕರನ್ನು ಕರೆತರಲು ಅವಕಾಶವಿಲ್ಲ.

ರೋಗಿಗಳು ಮತ್ತು ಅವರ ಪರಿಚಾರಕರು/ವೈದ್ಯಕೀಯ ತುರ್ತು ಸಂದರ್ಭ ಜನರಿಗೆ ಕನಿಷ್ಠ ಪುರಾವೆಗಳೊಂದಿಗೆ ಸಂಚರಿಸಲು ಅನುಮತಿಸಲಾಗಿದೆ.

ಮೇ 8 ಮತ್ತು 9ರಂದು ನಿಗದಿಯಾಗಿರುವ ಮದುವೆ ಕಾರ್ಯಕ್ರಮಗಳನ್ನು ಸರಕಾರದ ಮಾರ್ಗಸೂಚಿಯಂತೆ ಜನರ ಪರಿಮಿತಿಗೊಳಪಟ್ಟು ಕೋವಿಡ್-19 ನಿಯಮ ಪಾಲಿಸಿ ನಡೆಸಲು ಅನುಮತಿ ನೀಡಲಾಗಿದೆ.

ಶವಸಂಸ್ಕಾರ /ಅಂತ್ಯಕ್ರಿಯೆಗಳನ್ನು ಗರಿಷ್ಠ 5 ಜನರ ಪರಿಮಿತಿಗೊಳಪಟ್ಟು ಕೋವಿಡ್-19 ನಿಯಮ ಪಾಲಿಸಿ ನಡೆಸಬಹುದಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ವಾರಾಂತ್ಯದ ಕರ್ಫ್ಯೂ ಸಂದರ್ಭ ನಂದಿನಿ ಹಾಲಿನ ಬೂತ್‌ಗಳು, ದಿನಪತ್ರಿಕೆಗಳು ಮತ್ತು ಜಿಲ್ಲೆಯ ಹಾಪ್‌ಕಾಮ್ಸ್‌ಗಳಿಗೆ ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 9 ಗಂಟೆಯವರೆಗೆ ಕಾರ್ಯಾಚರಿಸಲು ಅನುಮತಿಸಲಾಗಿದೆ.

ಆನ್‌ಲೈನ್ ಸೇವಾ ಪೂರೈಕೆದಾರರಾದ ಸ್ವಿಗ್ಗಿ, ರೊಮೇಟೋ ಮತ್ತಿತರ ಆಹಾರ ಪೂರೈಕೆ ಸಂಸ್ಥೆಗೆ ಆಹಾರ ಒದಗಿಸಲು ಹೊಟೇಲ್‌ಗಳು ಮತ್ತು ರೆಸ್ಟೊರೆಂಟ್‌ಗಳ ಅಡುಗೆ ಮನೆಗಳನ್ನು ನಿರ್ವಹಿಸಲು ಅನುಮತಿ ನೀಡಲಾಗಿದೆ.

ಆನ್‌ಲೈನ್‌ಆಹಾರ ಸೇವಾ ಪೂರೈಕೆದಾರರಿಗೆ ರಾತ್ರಿ 11 ಗಂಟೆಯವರೆಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗಿದೆ.

Leave A Reply

Your email address will not be published.