Bantwala: ಅಬ್ದುಲ್ ರಹಿಮಾನ್ ಬರ್ಬರ ಹತ್ಯೆ ಪ್ರಕರಣ: 15 ಮಂದಿ ವಿರುದ್ಧ ಪ್ರಕರಣ ದಾಖಲು

Bantwala: ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ಕೊಳತ್ತಮಜಲು ಜುಮ್ಮಾ ಮಸೀದಿ ಕಾರ್ಯದರ್ಶಿ ಹಾಗೂ ಪಿಕಪ್ ಚಾಲಕ ಅಬ್ದುಲ್ ರಹಿಮಾನ್ ಎಂಬುವವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದು, ಈತನ ಜೊತೆಗಿದ್ದ ಕಲಂದರ್ ಶಾಫಿ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆಗೆ ಸಂಬಂಧ ಪಟ್ಟಂತೆ ಸ್ಥಳೀಯರಾದ ದೀಪಕ್, ಸುಮಿತ್ ಸೇರಿ ಒಟ್ಟು 15 ಮಂದಿಯ ವಿರುದ್ಧ ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಕುರಿತು ವರದಿಯಾಗಿದೆ.

ಕುರಿಯಾಳ ಗ್ರಾಮದ ಈರಾಕೋಡಿಯ ರಾಜೀವಿ ಎಂಬುವರ ಮನೆಯ ಬಳಿ ಅಬ್ದುಲ್ ರಹಿಮಾನ್ ಮತ್ತು ಕಲಂದರ್ ಶಾಫಿ ಅವರು ಪಿಕ್‌ಅಪ್ ವಾಹನದಲ್ಲಿ ಮರಳು ತುಂಬಿಕೊಂಡು ಖಾಲಿ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಆರೋಪಿಗಳಾದ ದೀಪಕ್, ಸುಮಿತ್, ಇತರ 13 ಮಂದಿ ಏಕಾಏಕಿ ಸ್ಥಳಕ್ಕೆ ಬಂದು ಚಾಲಕನ ಸೀಟಿನಲ್ಲಿದ್ದ ಅಬ್ದುಲ್ ರಹಿಮಾನ್ ನನ್ನು ಹೊರಗೆಳೆದು ತಲವಾರು, ಚೂರಿ, ರಾಡ್‌ಗಳಂತಹ ಮಾರಕಾಸ್ತ್ರಗಳಿಂದ ತಿವಿದು ಹಲ್ಲೆ ಮಾಡಿದ್ದಾರೆ.
ಶಾಫಿ ಇದನ್ನು ತಡೆಯಲು ಮುಂದಾದಾಗ ಆತನ ಮೇಲೂ ಆರೋಪಿಗಳು ಚೂರಿಯಿಂದ ಎದೆ, ಬೆನ್ನು, ಕೈಗೆ ತಿವಿದು ತಲವಾರದಿನಿಂದ ಕಡಿದು ಗಂಭೀರವಾಗಿ ಗಾಯ ಮಾಡಿದ್ದಾರೆ. ಆಗ ಸ್ಥಳದಲ್ಲಿದ್ದವರು ಬೊಬ್ಬೆ ಹೊಡೆದಿದ್ದರಿಂದ ದುಷ್ಕರ್ಮಿಗಳು ಮಾರಕಾಸ್ತ್ರಗಳೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿರುವ ಕುರಿತು ವರದಿಯಾಗಿದೆ.
ಕಲಂದರ್ ಶಾಫಿ ಯನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಹಲ್ಲೆ ಮಾಡಿದವರ ಪೈಕಿ ದೀಪಕ್, ಸುಮಿತ್ ತಮಗೆ ಪರಿಚಯಸ್ಥರು ಎಂದು ಹೇಳಿದ್ದಾರೆ. ಈ ಮಾಹಿತಿಯನ್ನು ಆಧರಿಸಿ ಕಲಂದರ್ ಶಾಫಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಮುಹಮ್ಮದ್ ನಿಸಾರ್ ಎಂಬುವರು ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.
Comments are closed.