U.P: ತಾಯಿಯ ಸಾವು ಆತ್ಮಹತ್ಯೆ ಎಂದು ಬಿಂಬಿಸಿದ ಅಪ್ಪ; ಮಗಳ ಡ್ರಾಯಿಂಗ್ ಸ್ಕೆಚ್ ನೀಡಿತು ಪೊಲೀಸರಿಗೆ ಮಹತ್ವದ ಸುಳಿವು

U.P: ಉತ್ತರ ಪ್ರದೇಶದ ಝಾನ್ಸಿಯಲ್ಲಿ ಸೋಮವಾರ 27 ವರ್ಷದ ಸೋನಾಲಿ ಬುಧೋಲಿಯಾ ಎಂಬ ಮಹಿಳೆ ಸಾವನ್ನಪ್ಪಿದ್ದು, ಈ ಪ್ರಕರಣಕ್ಕೆ ಸ್ಫೋಟಕ ತಿರುವೊಂದು ದೊರಕಿದೆ. ಮೃತ ಮಹಿಳೆಯ ನಾಲ್ಕು ವರ್ಷದ ಬಾಲಕಿಯು ತನ್ನ ತಾಯಿಯನ್ನು ಕೊಂದಿದ್ದು ಯಾರು, ಹೇಗೆ ಕೊಂದರು ಎನ್ನುವುದನ್ನು ಸ್ಕೆಚ್ ಮೂಲಕ ಬರೆದಿದ್ದು, ಪೊಲೀಸರು ಈ ಮೂಲಕ ತನಿಖೆ ನಡೆಸುತ್ತಿದ್ದಾರೆ.

ಝಾನ್ಸಿಯ ಕೊತ್ವಾಲಿ ಪ್ರದೇಶದ ಪಂಚವಟಿ ಶಿವ ಪರಿವಾರ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ತನ್ನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪತಿ ಸಂದೀಪ್ ಬುಧೋಲಿಯಾ ಆಕೆಯ ಕುಟುಂಬಕ್ಕೆ ತಿಳಿಸಿದ್ದಾನೆ. ಆದರೆ ತನ್ನ ತಾಯಿಯನ್ನು ಕೊಂದಿದ್ದು ಬೇರಾರು ಅಲ್ಲ ತನ್ನ ತಂದೆಯೇ ಎಂದು ಮಗಳು ಸ್ಕೆಚ್ ಮೂಲಕ ತಿಳಿಸಿದ್ದಾಳೆ. ಈ ಮೂಲಕ ಪೊಲೀಸರ ತನಿಖೆಗೆ ಮಹತ್ವದ ಮಾಹಿತಿ ದೊರಕಿದ್ದು, ತಂದೆಯೇ ಕೊಲೆಗಾರ ಎನ್ನುವ ಸುಳಿವು ದೊರಕಿದೆ.
2019 ರಲ್ಲಿ ಮಧ್ಯಪ್ರದೇಶದ ಟಿಕಾಮಘರ್ ಜಿಲ್ಲೆಯ ಸಂಜೀವ್ ತ್ರಿಪಾಠಿ ತಮ್ಮ ಮಗಳು ಸೋನಾಲಿಯನ್ನು ಸಂದೀಪ್ ಬುಧೋಲಿಗೆ ಮದುವೆ ಮಾಡಿ ಕೊಟ್ಟಿದ್ದರು. ಮದುವೆ ಸಂದರ್ಭ 20 ಲಕ್ಷ ರೂಪಾಯಿ ಹಣವನ್ನು ನೀಡಿದ್ದರು. ಆದರೆ ಹಣದ ದಾಹಿಗಳಾದ ಸಂದೀಪ್ ಮನೆಯವರು 20 ಲಕ್ಷಕ್ಕೇ ಸುಮ್ಮನಾಗದೇ ಹೊಸ ಬೇಡಿಕೆಯನ್ನು ಇಟ್ಟಿದ್ದಾರೆ. ಕಾರು ನೀಡುವಂತೆ ಬೇಡಿಕೆ ಇಟ್ಟಿದ್ದರು. ಆದರೆ ಸೋನಾಲಿ ತಂದೆ ಕಾರು ಕೊಡುವ ಶಕ್ತಿ ನನ್ನಲ್ಲಿ ಇಲ್ಲ ಎಂದು ಹೇಳಿದ್ದರು.
ನಂತರ ಗಂಡನ ಮನೆಯಿಂದ ಸೊನಾಲಿಗೆ ನಿರಂತರ ಕಿರುಕುಳ ಪ್ರಾರಂಭವಾಯಿತು. ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಯಿತು, ರಾಜಿ ಸಂಧಾನವಾಯ್ತು. ಅನಂತರ ಸೊನಾಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಆದರೆ ಸಂದೀಪ್ ಮನೆಯವರಿಗೆ ಗಂಡು ಮಗು ಬೇಕಿತ್ತು. ಸೋನಾಲಿಯನ್ನು ಆಸ್ಪತ್ರೆಯಲ್ಲೇ ಬಿಟ್ಟು ಹೋಗಿದ್ದರು. ನರ್ಸಿಂಗ್ ಹೋಮ್ ಬಿಲ್‌ಗಳನ್ನು ಕಟ್ಟಿದ ತಂದೆ, ನಂತರ ಮಗಳನ್ನು ತನ್ನ ಮನೆಗೆ ಕರೆತಂದಿದ್ದರು. ಅನಂತರ ಗಂಡನ ಮನೆಮಂದಿ ಬಂದು ಸೋನಾಲಿ ಮಗಳು ದರ್ಶಿತಾಳನ್ನು ಕರೆದುಕೊಂಡು ಹೋಗಿದ್ದಾರೆ.
ಇತ್ತೀಚೆಗೆ, ಝಾನ್ಸಿಯ ಸಂತಾರ್‌ನಲ್ಲಿ ಸೋನಾಲಿ ತನ್ನ ಸೋದರಸಂಬಂಧಿಯ ಮದುವೆಗೆ ಹೋಗುತ್ತಿದ್ದಾಗ ಸಂದೀಪ್ ಕರೆ ಮಾಡಿ ಮನೆಗೆ ವಾಪಾಸ್ ಬರುವಂತೆ ಹೇಳಿದ್ದ. ಅದಾದ ನಂತರ ಇಂದು ಬೆಳಿಗ್ಗೆ ನನಗೆ ಕರೆ ಬಂದಿತ್ತು. ನನ್ನ ಮಗಳ ಆರೋಗ್ಯ ಹದಗೆಟ್ಟಿದೆ ಎಂದು ಹೇಳಿದರು. ಸ್ವಲ್ಪ ಸಮಯದ ನಂತರ, ನನಗೆ ಮತ್ತೊಂದು ಕರೆ ಬಂದಿತು, ಅವಳು ನೇಣು ಹಾಕಿಕೊಂಡಿದ್ದಾಳೆ ಎಂದು. ನಾನು ಅಲ್ಲಿಗೆ ತಲುಪಿದಾಗ ಅವಳು ಸತ್ತಿದ್ದಾಳೆ ಎಂದು ನನಗೆ ತಿಳಿಯಿತು” ಎಂದು ಸೋನಾಲಿ ತಂದೆ ಪೊಲೀಸರಲ್ಲಿ ಹೇಳಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ ಎಂದು ಕೊತ್ವಾಲಿ ನಗರ ಪೊಲೀಸ್ ಅಧಿಕಾರಿ ರಾಮ್‌ವೀರ್ ಸಿಂಗ್ ತಿಳಿಸಿದ್ದಾರೆ.
Comments are closed.