Kadaba: ಯುವಕ ನಾಪತ್ತೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ – ಸ್ನೇಹಿತನಿಂದಲೇ ಕೊಲೆ, ಮೃತ ದೇಹ ಕಾಡಿಗೆ ಕೊಂಡೊಯ್ದು ಸುಟ್ಟು ಹಾಕಲು ಯತ್ನ
Kadaba: ಕಡಬದಲ್ಲಿ ಕಳೆದ ಐದು ದಿನಗಳಿಂದ ಸುದ್ದಿಯಲ್ಲಿದ್ದ ಯುವಕ ನಾಪತ್ತೆ ಪ್ರಕರಣಕ್ಕೆ ಇದೀಗ ಬಿಗ್ ಟ್ರಸ್ಟ್ ಸಿಕ್ಕಿದ್ದು ಯುವಕನನ್ನು ಆತನ ಸ್ನೇಹಿತನೇ ಕೊಲೆಗೈದು ಸುಟ್ಟು ಹಾಕಲು ಯತ್ನಿಸಿದ ಅಮಾನವೀಯ ವಿಚಾರ ಬೆಳಕಿಗೆ ಬಂದಿದೆ.
ಹೌದು, ಕಡಬ(Kadaba) ತಾಲೂಕಿನ ಬಿಳಿನೆಲೆ ಗ್ರಾಮದ ಮುಂಗ್ಲಿಮಜಲು ನಿವಾಸಿ ದಿ.ಶಾಂತಪ್ಪ ಗೌಡ ಎಂಬವರ ಪುತ್ರ ಸಂದೀಪ್ ಗೌಡ (29) ಅವರ ಮೃತದೇಹ ಸುಬ್ರಹ್ಮಣ್ಯ ರೈಲು ನಿಲ್ದಾಣದಿಂದ ಸುಮಾರು ಒಂದೂವರೆ ಕಿ.ಮೀ ದೂರದ ನಾರಡ್ಕ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿದೆ. ಯಾವುದುಸಂದೀಪ್‌ನನ್ನು ಆತನ ಸ್ನೇಹಿತ ನೆಟ್ಟಣ ನಿವಾಸಿ ಪ್ರತೀಕ್ ನೆಟ್ಟಣ ಎಂಬಾತ ರೈಲು ನಿಲ್ದಾಣದ ಬಳಿಯ ಗುಡ್ಡೆಯಲ್ಲಿ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆಗೈದು ಮೃತದೇಹವನ್ನು ಕಾಡಿನೊಳಗೆ ಕೊಂಡೊಯ್ದು ಸುಟ್ಟುಹಾಕಲು ಯತ್ನಿಸಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಏನಿದು ಘಟನೆ?
ಮರ್ದಾಳದಲ್ಲಿ ವಿನಯ ಎಂಬವರೊಂದಿಗೆ ಶಾಮಿಯಾನ ಹಾಕುವ ಕೆಲಸ ಮಾಡುತ್ತಿದ್ದ ಸಂದೀಪ್ ನ. 27 ರಂದು ಬೆಳಗ್ಗೆ ಕೆಲಸಕ್ಕೆಂದು ಮನೆಯಿಂದ ತೆರಳಿದ್ದು, ಕೆಲಸ ಮುಗಿಸಿ ಸಂಜೆ ಮನೆಗೆ ವಾಪಸಾಗಿರಲಿಲ್ಲ. ಈ ಬಗ್ಗೆ ವಿನಯ ಅವರಲ್ಲಿ ಸಂದೀಪ್‌ನ ತಾಯಿ ಸರೋಜ ಅವರು ವಿಚಾರಿಸಿದಾಗ ಸಂದೀಪ್ ಸಂಜೆ ಕೆಲಸ ಮುಗಿಸಿ ನೆಟ್ಟಣ ನಿವಾಸಿ ಪ್ರತೀಕ್ ಎಂಬಾತನೊಂದಿಗೆ ಆತನ ಕಾರಿನಲ್ಲಿ ಹೋಗಿರುವುದಾಗಿ ಮಾಹಿತಿ ನೀಡಿದ್ದರು. ಹುಡುಕಾಡಿ ಎಲ್ಲೂ ಪತ್ತೆಯಾಗದ ಹಿನ್ನೆಲೆಯಲ್ಲಿ ಸರೋಜ ಅವರು ಕಡಬ ಠಾಣೆಗೆ ದೂರು ನೀಡಿದ್ದರು.
ಸಂದೀಪ್ ನಾಪತ್ತೆ ಆದ ಮರುದಿನವೇ ಕಾರ್ತಿಕ್ ಎಂಬಾತನ ವಿರುದ್ಧ ಅನುಮಾನ ವ್ಯಕ್ತಪಡಿಸಿ ಸಂದೀಪ್ ನ ತಾಯಿ ಕಡಬ ಠಾಣೆಗೆ ದೂರು ನೀಡಿದ್ದರೂ ಪೊಲೀಸರು ದೂರು ಸ್ವೀಕರಿಸಿಲ್ಲ ಎಂಬ ಆರೋಪ ವ್ಯಕ್ತಪಡಿಸಿ ಸೋಮವಾರ ಮಧ್ಯಾಹ್ನದ ವೇಳೆಗೆ ಬಿಳಿನೆಲೆ ಗ್ರಾಮಸ್ಥರು ಕಡಬ ಠಾಣೆಯ ಬಳಿ ಜಮಾಯಿಸಿದ್ದರಲ್ಲದೆ ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ಅಭಿನಂದನ್ ಹಾಗೂ ಹೆಡ್ ಕಾನ್ಸ್‌ಟೇಬಲ್ ರೋಹಿತಾಕ್ಷ ಎಂಬವರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿದ್ದರು. ಬಳಿಕ ಎಚ್ಚೆತ್ತ ಪೊಲೀಸರು ಮಾಹಿತಿ ಪ್ರಕಾರ ಸಂದೀಪ್‌ನನ್ನು ಕಾರಿನಲ್ಲಿ ಕರೆದೊಯ್ದಿದ್ದ ಪ್ರತೀಕ್ ಹಾಗೂ ಇನ್ನೋರ್ವನನ್ನು ಪೊಲೀಸರು ರವಿವಾರ ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಗಿದೆ.
ಇನ್ನು ಕೊಲೆಗೀಡಾದ ಸಂದೀಪ್‌ನ ಮೃತದೇಹವನ್ನು ಸುಟ್ಟು ಹಾಕಲು ಯತ್ನಿಸಿದ್ದ ಸ್ಥಳಕ್ಕೆ ಸೋಮವಾರ ಸಂಜೆ ಆರೋಪಿ ಪ್ರತೀಕ್‌ನನ್ನು ಪೊಲೀಸರು ಕರೆದೊಯ್ಯುತ್ತಿದ್ದ ವೇಳೆ ಆರೋಪಿಯನ್ನು ನಮ್ಮ ವಶಕ್ಕೆ ನೀಡಿ ಎಂದು ಸ್ಥಳೀಯರು ಪೊಲೀಸ್ ವಾಹನವನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಅಲ್ಲದೆ ಕೊಲೆಗೈದು ಮೃತದೇಹವನ್ನು ಕಾಡಿಗೆ ಸಾಗಿಸಲು ಒಬ್ಬನಿಂದ ಸಾಧ್ಯವಿಲ್ಲ. ಕೃತ್ಯದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಸಾಧ್ಯತೆಗಳಿದ್ದು, ಉಳಿದ ಆರೋಪಿಗಳನ್ನೂ ಬಂಧಿಸುವಂತೆ ಸ್ಥಳೀಯರು ಆಗ್ರಹಿಸಿದರು.