Education: ರಾಜ್ಯದ ಎಲ್ಲಾ ಶಾಲೆಗಳಿಗೆ ಖಡಕ್ ಆದೇಶ! ರಾಜ್ಯದ ಪಠ್ಯಕ್ರಮಗಳನ್ನು ಪಾಲನೆ ಕಡ್ಡಾಯ!
Education: ರಾಜ್ಯದ ಎಲ್ಲಾ ಶಾಲೆಗಳಿಗೆ ಖಡಕ್ ಆದೇಶ ಒಂದನ್ನು ಹೊರಡಿಸಿದ್ದು, ಇನ್ಮುಂದೆ ಕರ್ನಾಟಕ ಶಿಕ್ಷಣ ಕಾಯ್ದೆಯನ್ವಯ ರಾಜ್ಯದ ಎಲ್ಲಾ ಶಾಲೆಗಳು ರಾಜ್ಯ ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಖಾಸಗಿ ಶಾಲೆಗಳು ಸಹ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪಠ್ಯಪುಸ್ತಕಗಳನ್ನು ಖರೀದಿಸಬೇಕು. ಈ ನಿಯಮ ಉಲ್ಲಂಘಿಸುವ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಹೌದು, ಕರ್ನಾಟಕ ಶಿಕ್ಷಣ (Education) ಕಾಯ್ದೆ-1983ರ ಸೆಕ್ಷನ್-36ರಂತೆ ರಾಜ್ಯ ಪಠ್ಯಕ್ರಮದ ಶಾಲೆಗಳಿಗೆ ಮಾನ್ಯತೆ/ಮಾನ್ಯತೆ ನವೀಕರಣ ನೀಡುವಾಗ ಮಾನ್ಯತೆ ಪ್ರಮಾಣ ಪತ್ರದಲ್ಲಿ ‘ಶಾಲೆಯು ಸಂಯೋಜಿತವಾಗಿರುವ ಶೈಕ್ಷಣಿಕ ರಾಜ್ಯ ಪಠ್ಯಕ್ರಮ ಹಾಗೂ ರಾಜ್ಯ ಪಠ್ಯಪುಸ್ತಕಗಳನ್ನು ಅನುಸರಿಸುವುದು ಎಂದು ಷರತ್ತು ವಿಧಿಸಲಾಗಿರುತ್ತದೆ. ಆದರೆ, ಕೆಲವು ಶಾಲೆಗಳು ರಾಜ್ಯದ ಪಠ್ಯಕ್ರಮ ಅನುಸರಣೆ ಮಾಡದಿರುವುದು ಕಂಡುಬಂದಿದ್ದು, ರಾಜ್ಯ ಸರ್ಕಾರದಿಂದ ಖಡಕ್ ಎಚ್ಚರಿಕೆ ನೀಡಲಾಗಿದೆ .
ಕರ್ನಾಟಕ ಶಿಕ್ಷಣ ಕಾಯ್ದೆ- 1983ರ ಕಾಯ್ದೆ, ಕನ್ನಡ ಕಲಿಕಾ ಅಧಿನಿಯಮ-2015 ಮತ್ತು ಕನ್ನಡ ಭಾಷಾ ಕಲಿಕಾ ನಿಯಮಗಳು- 2017ರ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ(1) ರಂತೆ ರಾಜ್ಯ ಸರ್ಕಾರವು ಶಿಕ್ಷಣ ಸಂಸ್ಥೆಗಳ ಸಂಬಂಧದಲ್ಲಿ ಪಾಠಕ್ರಮ, ಪಠ್ಯವಸ್ತು ಹಾಗೂ ಪಠ್ಯಪುಸ್ತಕಗಳನ್ನು ನಿಗದಿಪಡಿಸಬಹುದಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಶಿಕ್ಷಣ ಸಂಸ್ಥೆಗಳು [ವರ್ಗೀಕರಣ, ನಿಯಂತ್ರಣ ಮತ್ತು ಪಠ್ಯಕ್ರಮದ ಪ್ರಿಸ್ಕ್ರಿಪ್ಷನ್ ಇತ್ಯಾದಿ] ನಿಯಮಗಳು-1995ರ 19ನೇ ನಿಯಮದ ಉಪನಿಯಮ-3 ರಂತೆ ರಾಜ್ಯಪಠ್ಯ ಕ್ರಮವನ್ನು ಅನುಸರಿಸುತ್ತಿರುವ ಎಲಾ ಶಿಕ್ಷಣ ಸಂಸ್ಥೆಗಳು ರಾಜ್ಯ ಸರ್ಕಾರದ ಸಕ್ಷಮ ಪ್ರಾಧಿಕಾರವು ನಿಗದಿಪಡಿಸುವ ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳನ್ನೇ ಕಡ್ಡಾಯವಾಗಿ ಅನುಸರಿಸಬೇಕು. ಹೆಚ್ಚುವರಿಯಾಗಿ ಯಾವುದೇ ಇತರ ಪಠ್ಯಕ್ರಮ ಅಥವಾ ಪಠ್ಯಪುಸ್ತಕಗಳನ್ನು ಅನುಸರಿಸುವಂತಿಲ್ಲ.
ಇನ್ನು 2010-11ನೇ ಸಾಲಿನಿಂದ ರಾಜ್ಯ ಪಠ್ಯಕ್ರಮದಂತೆ ಪಠ್ಯಪುಸ್ತಕಗಳ ರಚನೆ, ಉತ್ಪಾದನೆ ಮತ್ತು ವಿತರಣೆಗೆ ಸಂಬಂಧಿಸಿದ ಸಂಪೂರ್ಣ ಕಾರ್ಯವನ್ನು ಕರ್ನಾಟಕ ಪಠ್ಯಪುಸ್ತಕ ಸಂಘ (ರಿ) ಇವರು ನಿರ್ವಹಿಸಲು ಸರ್ಕಾರವು ಆದೇಶಿಸಿರುತ್ತದೆ.
ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖಾ ಅನುಮತಿಯೊಂದಿಗೆ ರಾಜ್ಯದಲ್ಲಿ ನಡೆಯುತ್ತಿರುವ ರಾಜ್ಯ ಪಠ್ಯಕ್ರಮದ ಎಲ್ಲಾ ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು 1 ರಿಂದ 10ನೇ ತರಗತಿಯ SATS ಲ್ಲಿರುವ ವಿದ್ಯಾರ್ಥಿಗಳ ದಾಖಲಾತಿಯಂತೆ ತಂತ್ರಾಂಶದ ಮೂಲಕ ಬೇಡಿಕೆಯನ್ನು ದಾಖಲಿಸಬೇಕು. ಖಾಸಗಿ ಅನುದಾನರಹಿತ ಶಾಲೆಗಳು ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಪಠ್ಯಪುಸ್ತಕಗಳನ್ನು ಖರೀದಿಸಿ ರಾಜ್ಯ ಪಠ್ಯಪುಸ್ತಕಗಳನ್ನೇ ಅನುಸರಿಸಲು ತಮ್ಮ ವ್ಯಾಪ್ತಿಯ ಎಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಲು ತಿಳಿಸಿದೆ.
ಒಂದು ವೇಳೆ ಯಾವುದೇ ರಾಜ್ಯ ಪಠ್ಯಕ್ರಮದ ಖಾಸಗಿ ಶಾಲೆಯು ಸದರಿ ಷರತ್ತನ್ನು ಉಲ್ಲಂಘಿಸಿದಲ್ಲಿ ಅಂತಹ ಶಾಲೆಯ ವಿರುದ್ಧ ನಿಯಮಾನುಸಾರ ಕ್ರಮ ವಹಿಸಲು ತಿಳಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.