Earned leave: ಗಳಿಕೆ ರಜೆ ನೀಡಿ ಶಿಕ್ಷಕರ ಅಸಮಾಧಾನ ತಣಿಸಿದ ಸರ್ಕಾರ !!
Earned leave: ಪ್ರೌಢಶಾಲಾ ಶಿಕ್ಷಕರ ಅಸಮಧಾನವನ್ನು ತಣಿಸಲು ಸರ್ಕಾರ ಹೊಸ ಪ್ಲಾನ್ ಮಾಡಿದ್ದು ಅವರಿಗೆ ಗಳಿಕೆ ರಜೆಯನ್ನು(Earned leave) ನೀಡುವುದಾಗಿ ತಿಳಿಸಿದೆ.
ಇದನ್ನೂ ಓದಿ: Bengaluru: ಮನೆಯೊಂದಕ್ಕೆ ಬರೋಬ್ಬರಿ 17 ಕೋಟಿ ವಿದ್ಯುತ್ ಬಿಲ್ : ಬಿಲ್ ನೋಡಿ ಶಾಕ್ ಆದ ಗ್ರಾಹಕ !
ಹೌದು, SSLC ಫಲಿತಾಂಶ ಕಡಿಮೆಯಾದ ಕಾರಣ ಜೂನ್ನಲ್ಲಿ ನಡೆಯುವ ಎಸ್ಸೆಸ್ಸೆಲ್ಸಿ ‘ಪರೀಕ್ಷೆ -2’ಗೆ ನೋಂದಾಯಿಸುವ ವಿದ್ಯಾರ್ಥಿಗಳಿಗೆ ನಿಗದಿಯಂತೆ ಮೇ. 15 ರಿಂದ ಜೂನ್ 5 ರವರೆಗೆ ವಿಶೇಷ ತರಗತಿಗಳನ್ನು ನಡೆಸುವ ಸರ್ಕಾರಿ ಹಾಗೂ ಅನುದಾನಿತ ಶಾಲಾ ಶಿಕ್ಷಕರಿಗೆ ಕಡಿತವಾಗುವ ಬೇಸಿಗೆ ರಜಾದಿನಗಳಿಗೆ ಪರ್ಯಾಯವಾಗಿ ಗಳಿಕೆ ರಜೆ ಪಡೆಯಲು ಸರ್ಕಾರ ಅವಕಾಶ ನೀಡಿದೆ. ಒಟ್ಟಿನಲ್ಲಿ ಬೇಸಿಗೆ ರಜೆ ಕೆಲವು ದಿನಗಳನ್ನು ತ್ಯಾಗ ಮಾಡಿ ಶಾಲೆಗಳಿಗೆ ಆಗಮಿಸುವ ಶಿಕ್ಷಕರಿಗೆ ಗಳಿಕೆ ರಜೆಯನ್ನು ಪಡೆಯಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ.
ಇದನ್ನೂ ಓದಿ: Rain Alert: ಅಬ್ಬರಿಸಿದ ಮಳೆರಾಯ; ಸಿಡಿಲು ಬಡಿದು 12 ಜನರ ಸಾವು
ಅಂದಹಾಗೆ ಎಸ್ಎಸ್ಎಲ್ಸಿ ಪರೀಕ್ಷೆ-2ಕ್ಕೆ ಆಯಾ ಪ್ರೌಢಶಾಲೆಗಳಲ್ಲಿ ವಿಶೇಷ ತರಗತಿ ನಡೆಸುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸೂಚನೆ ನೀಡಿದೆ. ಬೇಸಿಗೆ ರಜೆ ಕಡಿತ ಮಾಡಿರುವುದಕ್ಕೆ ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಗಳಿಕೆ ರಜೆಯನ್ನು ನೀಡಿ ಸರ್ಕಾರ ಶಿಕ್ಷಕರ ಮನವೊಲಿಕೆ ಮಾಡಿದೆ. ಮೇ 15ರಿಂದಲೇ ಕೆಲವು ಶಾಲೆಗಳಲ್ಲಿ ವಿಶೇಷ ತರಗತಿಗಳನ್ನು ಆರಂಭಿಸಲಾಗಿದೆ.
ಇನ್ನು ಯಾವುದಾದರೂ ಶಾಲೆಯಲ್ಲಿ ಒಟ್ಟಾರೆ ಅನುತ್ತೀರ್ಣ ವಿದ್ಯಾರ್ಥಿಗಳ ಸಂಖ್ಯೆ ಕನಿಷ್ಠ 10ಕ್ಕಿಂತ ಕಡಿಮೆ ಇದ್ದರೆ ಸಮೀಪದ ಶಾಲೆಯಲ್ಲಿ ನಡೆಯುವ ವಿಶೇಷ ತರಗತಿಗೆ ವರ್ಗಾಯಿಸಲು ಅವಕಾಶ ಮಾಡಿಕೊಡಲಾಗಿದೆ. ಆದರೆ, ಯಾವುದೇ ಶಾಲೆಯಲ್ಲಿ ಒಂದೇ ವಿಷಯದಲ್ಲಿ ಕನಿಷ್ಠ 10 ಮಕ್ಕಳು ಅನುತ್ತೀರ್ಣರಾಗಿದ್ದಲ್ಲಿ ಅದೇ ಶಾಲೆಯ ಸಂಬಂಧಿಸಿದ ವಿಷಯ ಶಿಕ್ಷಕರಿಂದಲೇ ವಿಶೇಷ ತರಗತಿ ನಡೆಸಬೇಕೆಂದು ಷರತ್ತು ವಿಧಿಸಿದೆ.
ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರ ಆದೇಶದ ಮೇರೆಗೆ ಬುಧವಾರ ಸುತ್ತೋಲೆ ಹೊರಡಿಸಿರುವ ಶಾಲಾ ಶಿಕ್ಷಣ ಇಲಾಖೆಯ ಪ್ರೌಢ ಶಾಲಾ ನಿರ್ದೇಶಕರು, ಪರೀಕ್ಷೆ 1ರಲ್ಲಿ ಫೇಲಾಗಿರುವ ಎಲ್ಲ ಮಕ್ಕಳೂ ಪರೀಕ್ಷೆ 2ಗೆ ನೋಂದಾಯಿಸುವಂತೆ ಆಯಾ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಕ್ರಮ ವಹಿಸಬೇಕು. ಜೊತೆಗೆ ಸಿ ಮತ್ತು ಸಿ+ ಫಲಿತಾಂಶ ಪಡೆದಿರುವ ವಿದ್ಯಾರ್ಥಿಗಳು ಫಲಿತಾಂಶ ಉತ್ತಮಪಡಿಸಿಕೊಳ್ಳಲು ಪರೀಕ್ಷೆಗೆ 2ಗೆ ನೋಂದಾಯಿಸಲು ಉತ್ತೇಜಿಸಬೇಕು. ಯಾವುದಾದರೂ ಅನುತ್ತೀರ್ಣ ವಿದ್ಯಾರ್ಥಿಗಳು ವಸತಿ ಶಾಲೆಯಲ್ಲಿ ಓದಿದ್ದು ಈಗ ತಮ್ಮ ಸ್ವಗ್ರಾಮದಲ್ಲಿ ಇದ್ದರೆ ಆ ಗ್ರಾಮದ ಅಥವಾ ಸಮೀಪದ ಶಾಲೆಯಲ್ಲೇ ವಿಶೇಷ ತರಗತಿಗೆ ಹಾಜರಾಗಲು ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅವಕಾಶ ಕಲ್ಪಿಸಬೇಕು ಎಂದು ಸೂಚಿಸಿದ್ದಾರೆ.
ಸದರಿ ತರಗತಿಗಳನ್ನು ನಡೆಸಲು ಈ ಕೆಳಗಿನ ಸೂಚನೆಗಳನ್ನು ಪಾಲಿಸಲು ತಿಳಿಸಿದೆ.
1. ಸರ್ಕಾರಿ/ಅನುದಾನಿತ ಶಾಲೆಗಳಲ್ಲಿ 2024ರ ಎಸ್.ಎಸ್.ಎಲ್.ಸಿ.ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಎಸ್. ಎಸ್.ಎಲ್.ಸಿ. ಪರೀಕ್ಷೆ-2 ತೆಗೆದುಕೊಳ್ಳಲು ಕಡ್ಡಾಯವಾಗಿ ನೊಂದಾಯಿಸಲು ಕ್ರಮವಹಿಸುವುದು.
2. ಸರ್ಕಾರಿ/ಅನುದಾನಿತ ಶಾಲೆಯಲ್ಲಿ ಆಯಾ ಶಾಲೆಗಳಲ್ಲಿ ಯಾವುದೇ ಒಂದು ವಿಷಯದಲ್ಲಿ ಕನಿಷ್ಠ 10 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಲ್ಲಿ ಅದೇ ಶಾಲೆಯಲ್ಲಿ ಅದೇ ಶಾಲೆಯ ವಿಷಯ ಭೋಧಕ ಶಿಕ್ಷಕರಿಂದ ವಿಶೇಷ ತರಗತಿಗಳನ್ನು ನಡೆಸುವುದು. ಒಂದು ವೇಳೆ ಆಯಾ ಶಾಲೆಗಳಲ್ಲಿ ವಿಷಯವಾರು ಅನುತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆ 10 ಕ್ಕಿಂತ ಕಡಿಮೆ ಇದ್ದಲ್ಲಿ ಸಮೀಪದ ಶಾಲೆಗೆ ಟ್ಯಾಗ್ ಮಾಡುವುದು. ಕೇಂದ್ರಗಳನ್ನು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗುರುತಿಸುವುದು.
3. ಕೇಂದ್ರಗಳಿರುವ ಶಾಲೆಗಳ ಮುಖ್ಯ ಶಿಕ್ಷಕರು ಅರ್ಹ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳ ವೇಳಾಪಟ್ಟಿಯನ್ನು ಸಿದ್ಧಪಡಿಸುವುದು.
4. ಕೇಂದ್ರಗಳಾಗಿ ಗುರುತಿಸುವ ಶಾಲೆಗಳ ಮುಖ್ಯ ಶಿಕ್ಷಕರು ವಿಶೇಷ ತರಗತಿಗಳನ್ನು ನಡೆಸಲು ಎಲ್ಲಾ ಅಗತ್ಯ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುವುದು.
5. ಹಾಜರಾಗುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಊಟದ ವ್ಯವಸ್ಥೆಯನ್ನು ಮುಖ್ಯ ಶಿಕ್ಷಕರು ಮಾಡುವುದು. ಈ ಕುರಿತು ನಿರ್ದೇಶಕರು, ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್, ಇವರು ನೀಡುವ ನಿರ್ದೇಶನಗಳಂತೆ ಕ್ರಮವಹಿಸುವುದು.
6. ದಿನಾಂಕ: 15.05.2024 ರಿಂದ ದಿನಾಂಕ: 05.06.2024ರವರೆಗೆ ರಜಾ ದಿನಗಳನ್ನೂ ಒಳಗೊಂಡಂತೆ ವಿಶೇಷ ತರಗತಿಗಳನ್ನು ನಡೆಸಿ ಪ್ರಕ್ರಿಯೆ ಪೂರ್ಣಗೊಳಿಸುವುದು.
7. ಗುರುತಿಸಿದ ಕೇಂದ್ರಗಳಲ್ಲಿ ಬೋಧನೆಗೆ ಪ್ರತಿ ಕೇಂದ್ರಕ್ಕೆ ಒಂದು ವಿಷಯಕ್ಕೆ ಒಬ್ಬರು ಶಿಕ್ಷಕರಂತೆ ಸದರಿ ಕೇಂದ್ರಕ್ಕೆ ಜೋಡಿಸಿದ ಶಾಲೆಗಳ ವಿಷಯ ಶಿಕ್ಷಕರನ್ನು ಬಳಿಸಿಕೊಳ್ಳುವುದು. ಒಂದು ವೇಳೆ ಗುರುತಿಸಿದ ಕೇಂದ್ರದಲ್ಲಿ ವಿಷಯ ಶಿಕ್ಷಕರ ಕೊರತೆ ಆದರೆ ಸಮೀಪದ ಇತರೆ ಸರ್ಕಾರಿ/ಅನುದಾನಿತ ಶಾಲೆಯ ಅನುದಾನಿತ ಶಿಕ್ಷಕರನ್ನು ನಿಯೋಜನೆಗೊಳಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮವಹಿಸುವುದು. ಒಂದು ವೇಳೆ ಆಯಾ ತಾಲ್ಲೂಕಿನಲ್ಲಿ ಯಾವುದೇ ಸರ್ಕಾರಿ ಅನುದಾನಿತ ಶಾಲಾ ವಿಷಯ ಶಿಕ್ಷಕರು ಲಭ್ಯವಾಗದೆ ಇರುವ ಸಂಧರ್ಭದಲ್ಲಿ ಅತಿಥಿ ಶಿಕ್ಷಕರನ್ನು ಬಳಕೆ ಮಾಡಿಕೊಳ್ಳುವುದು.
8. ವಿಶೇಷ ಪರಿಹಾರ ಬೋಧನಾ ತರಗತಿಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರೀಕ್ಷೆ-2 ರಲ್ಲಿ ಯಶಸ್ವಿಯಾಗಲು ಸಾಧ್ಯವಾಗುವಂತೆ ಆಯಾ ಜಿಲ್ಲೆಯ ವಿಷಯ ಶಿಕ್ಷಕರು ನಿರ್ಮಿಸಿರುವ “ಪಾಸಿಂಗ್ ಪ್ಯಾಕೇಜ್ ಬಳಸಿಕೊಂಡು ಸದರಿ ವಿದ್ಯಾರ್ಥಿಗಳು ಉತ್ತೀರ್ಣರಾಗಲು ತಯಾರಿಗೊಳಿಸುವಲ್ಲಿ ಆಧ್ಯತೆ ನೀಡುವುದು ಹಾಗೂ ಕಲ್ಬುರ್ಗಿ ವಿಭಾಗದ ವಿಷಯ ಶಿಕ್ಷಕರು ನಿರ್ಮಿಸಿರುವ ಕಲಿಕಾ ಸೆರೆ ಪುಸ್ತಕಗಳನ್ನೂ ಸಹ ಬಳಸಿಕೊಳ್ಳಬಹುದು. ಪ್ರತಿ ದಿನ ವಿದ್ಯಾರ್ಥಿಗಳಿಗೆ ಬೋಧನೆಯ ಜೊತೆಗೆ ಅವರ ಬರವಣಿಗೆ ರೂಢಿ ಮಾಡಿಸುವುದು, ವಿದ್ಯಾರ್ಥಿಗಳ ಬರವಣಿಗೆ ಕಾರ್ಯವನ್ನು ಶಿಕ್ಷಕರು ಆ ದಿನವೇ ಪರಿಶೀಲಿಸಿ ಅವರಿಗೆ ಹಿಮ್ಮಾಹಿತಿ ಮತ್ತು ಪರಿಹಾರ ನೀಡಿ ಅಂಧವಾದ ಬರವಣಿಗೆ ರೂಢಿ ಮಾಡಿಸುವುದು.
9. 2024ರ ಎಸ್.ಎಸ್.ಎಲ್.ಸಿ.ಪರೀಕ್ಷೆ-1 ರಲ್ಲಿ c. c+, ಶ್ರೇಣಿ ಪಡೆದ ವಿದ್ಯಾರ್ಥಿಗಳು ಅವರ ಫಲಿತಾಂಶ ಸುಧಾರಣೆಗಾಗಿ ಪರೀಕ್ಷೆ-2ನ್ನು ಬರೆಯಲು ನೊಂದಾಯಿಸಲು ಕ್ರಮವಹಿಸುವುದು ಹಾಗೂ ವಿಶೇಷ ಪರಿಹಾರ ಬೋಧನೆ ತರಗತಿಗೆ ಹಾಜರಾಗಲು ಅವರಿಗೂ ಅವಕಾಶ ಕಲ್ಪಿಸುವುದು.
10. ಆಯಾ ಶಾಲೆಯ ವಿಶೇಷ ತರಗತಿಗಳ ವೇಳಾ ಪಟ್ಟಿಯನ್ನು ಅಯಾ ಜಿಲ್ಲೆಗಳಲ್ಲಿ ಪ್ರಚಲಿತವಿರುವ ಶಾಲಾ ಸಮಯಕ್ಕೆ ಅನುಗುಣವಾಗಿ ವೇಳಾಪಟ್ಟಿಯನ್ನು ತಯಾರಿಸುವುದು.
11. ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಕೇಂದ್ರದ ಮುಖ್ಯ ಶಿಕ್ಷಕರು ಹಾಗೂ ವಿಷಯ ಶಿಕ್ಷಕರು ಧನಾತ್ಮಕವಾಗಿ ಪ್ರೇರೇಪಿಸಿ ಅವರು ವಿಶೇಷ ತರಗತಿಗಳಿಗೆ ಹಾಜರಾಗಲು ಹಾಗೂ ಪರೀಕ್ಷೆ-2 ರಲ್ಲಿ ಉತ್ತೀರ್ಣರಾಗಲು ಕ್ರಮವಹಿಸುವುದು.
12. ಕೇಂದ್ರಗಳನ್ನು ಗುರುತಿಸಿರುವ ಬಗ್ಗೆ ನಮೂನೆ-1 ಮತ್ತು 2 ರಲ್ಲಿ ಮಾಹಿತಿ ನೀಡುವುದು. ಹಾಗೂ ವಿದ್ಯಾರ್ಥಿಗಳ ದಾಖಲಾತಿ/ಹಾಜರಾತಿ ಮಾಹಿತಿಯನ್ನು ನಮೂನೆ-3 ರಲ್ಲಿ ದಿನನಿತ್ಯದ ಕ್ರೋಢೀಕೃತ ಮಾಹಿತಿಯನ್ನು ಉಪನಿರ್ದೇಶಕರು ಪ್ರತಿದಿನ 3.00 ಗಂಟೆ ಒಳಗೆ ಕೇಂದ್ರ ಕಛೇರಿ ಮೇಲ್ est4cpibng@gmail.com ಗೆ ಸಹಿ ಮಾಡಿದ ಪ್ರತಿಯೊಂದಿಗೆ ಕಳುಹಿಸಲು ತಿಳಿಸಿದೆ.
13. ಸರ್ಕಾರಿ ಹಾಗೂ ಅನುದಾನಿತ ಶಾಲಾ ಅನುದಾನಿತ ಶಿಕ್ಷಕರು ವಿಶೇಷ ಪರಿಹಾರ ಬೋಧನಾ ತರಗತಿಗಳಿಗೆ ಹಾಜರಾಗಿ ಬೇಸಿಗೆ ರಜಾ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ ದಿನಗಳಿಗೆ ಕೆ.ಸಿ.ಎಸ್.ಆರ್. ನಿಯಮಾವಳಿ ಪ್ರಕಾರ ಗಳಿಕೆ ರಜೆಯನ್ನು ಮಂಜೂರು ಮಾಡುವುದು.
14. ಸರ್ಕಾರಿ/ಅನುದಾನಿತ ಶಾಲೆಯ ವಿದ್ಯಾರ್ಥಿಗಳು ಯಾವುದೇ ವಿದ್ಯಾರ್ಥಿ ನಿಲಯಗಳಲ್ಲಿ 10ನೇ ತರಗತಿ ಅಭ್ಯಾಸ ಮಾಡಿದ್ದು ಅನುತ್ತೀರ್ಣರಾಗಿದ್ದಲ್ಲಿ ಹಾಗೂ ಈ ವಿದ್ಯಾರ್ಥಿಗಳು ಪ್ರಸ್ತುತ ತಮ್ಮ ಸ್ವಂತ ಸ್ಥಳದಲ್ಲಿ ವಾಸವಾಗಿದ್ದಲ್ಲಿ ಸ್ವಂತ ಸ್ಥಳದ ಸಮೀಪದಲ್ಲಿರುವ ಕೇಂದ್ರದಲ್ಲಿ ಈ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಮುಖ್ಯ ಶಿಕ್ಷಕರು ಕ್ರಮವಹಿಸುವುದು.
15. ತಾಲ್ಲೂಕು ಹಂತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಅವರ ತಂಡದವರು ಸದರಿ ಕಾರ್ಯಕ್ರಮದ ಸಂಪೂರ್ಣ ಮೇಲುಸ್ತುವಾರಿ ನಿರ್ವಹಿಸುವುದು.
16. ಜಿಲ್ಲಾ ಹಂತದಲ್ಲಿ ಎಸ್. ಎಸ್.ಎಲ್.ಸಿ. ನೋಡಲ್ ಅಧಿಕಾರಿಗಳು ಡಯಟ್ ಉಪನ್ಯಾಸಕರು ಹಾಗೂ ವಿಷಯ ಪರಿವೀಕ್ಷಕರುಗಳನ್ನು ತಾಲ್ಲೂಕುವಾರು ನೋಡಲ್ ಅಧಿಕಾರಿಯಾಗಿ ನಿಯುಕ್ತಿಗೊಳಿಸುವುದು.
17. ಉಪನಿರ್ದೇಶಕರು ಹಾಗೂ ಡಯಟ್ ಪ್ರಾಂಶುಪಾಲರು ಜಿಲ್ಲಾ ಹಂತದಲ್ಲಿ ಇಡೀ ಕಾರ್ಯಕ್ರಮದ ಸಂಪೂರ್ಣ ಮೇಲುಸ್ತುವಾರಿ ಮಾಡುವುದು.
18. ಜಿಲ್ಲಾ ನೋಡಲ್ ಅಧಿಕಾರಿಗಳು ತಮಗೆ ನಿಯೋಜಿಸಲ್ಪಟ್ಟಿರುವ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಹಾರ ಬೋಧನಾ ಚಟುವಟಿಕೆಗಳನ್ನು ಅವಲೋಕಿಸಿ ಸಮಗ್ರ ವರದಿ ನೀಡುವುದು.
ವಿಶೇಷ ಸೂಚನೆ:- ಅನುದಾನ ರಹಿತ ಶಾಲೆಗಳಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ. ಫಲಿತಾಂಶ ಸುಧಾರಣೆಗೆ ವಿದ್ಯಾರ್ಥಿಗಳನ್ನು ನೊಂದಾಯಿಸಿ ಆಯಾ ಅನುದಾನ ರಹಿತ ಶಾಲೆಗಳಲ್ಲಿ ವಿಶೇಷ ಪರಿಹಾರ ಬೋಧನಾ ತರಗತಿಗಳನ್ನು ನಡೆಸಲು ಆಡಳಿತ ಮಂಡಳಿಯೇ ಕ್ರಮವಹಿಸುವುದು.
[…] ಇದನ್ನೂ ಓದಿ: Earned leave: ಗಳಿಕೆ ರಜೆ ನೀಡಿ ಶಿಕ್ಷಕರ ಅಸಮಾಧಾನ ತ… […]