Brutal Murder: 8 ವರ್ಷದ ಮಗಳ ಕತ್ತು ಸೀಳಿ ಕೊಂದು ಆತ್ಮಹತ್ಯೆ ಮಾಡಿಕೊಂಡ ವಿಜ್ಞಾನಿ
Haryana : ಹರಿಯಾಣದ ಹಿಸಾರ್ ಲುವಾಸ್ನ ಶಸ್ತ್ರಚಿಕಿತ್ಸಾ ವಿಭಾಗದ ವಿಜ್ಞಾನಿ ಡಾ.ಸಂದೀಪ್ ಗೋಯಲ್ ಅವರು ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ತಮ್ಮ 8 ವರ್ಷದ ಮಗಳು ಸನಾಯಾಳನ್ನು ತಮ್ಮ ಕಚೇರಿಯಲ್ಲಿ ಸರ್ಜಿಕಲ್ ಬ್ಲೇಡ್ನಿಂದ ಬರ್ಬರವಾಗಿ ಹತ್ಯೆ ಮಾಡಿದ್ದು, ನಂತರ ಅವರು ತಮ್ಮ ರಕ್ತನಾಳವನ್ನು ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರ ಶವಗಳು ಕಚೇರಿಯಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಮಾಹಿತಿ ಪಡೆದ ಪೊಲೀಸ್ ವರಿಷ್ಠಾಧಿಕಾರಿ ಮೋಹಿತ್ ಹಂಡಾ, ಎಎಸ್ಪಿ ರಾಜೇಶ್ ಮೋಹನ್, ಸಿವಿಲ್ ಲೈನ್ ಪೊಲೀಸ್ ಠಾಣೆ ಪ್ರಭಾರಿ ರಾಜೀಂದ್ರ ಅವರು ಸ್ಥಳಕ್ಕೆ ಧಾವಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Crime News: ಹೈದರಾಬಾದ್ ಮಹಿಳೆಯ ಶವ ಆಸ್ಟ್ರೇಲಿಯಾದ ಕಸದ ತೊಟ್ಟಿಯಲ್ಲಿ ಪತ್ತೆ, ಪತಿ ಮೇಲೆ ಕೊಲೆ ಆರೋಪ
ರಾತ್ರಿ 9 ಗಂಟೆ ಸುಮಾರಿಗೆ ಇಬ್ಬರ ಮೃತದೇಹಗಳನ್ನು ಸಿವಿಲ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಮೃತ ದೇಹಗಳ ಮರಣೋತ್ತರ ಪರೀಕ್ಷೆ ಸೋಮವಾರ (ಇಂದು) ನಡೆಯಲಿದೆ. ಪೊಲೀಸರು ಪ್ರತಿಯೊಂದು ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಖಿನ್ನತೆಯಿಂದ ಈ ಕೃತ್ಯ ಎಸಗಲಾಗಿದೆ ಎಂದು ಹೇಳಲಾಗುತ್ತಿದೆ.
ಪೊಲೀಸರ ಪ್ರಕಾರ, ಡಾ.ಸಂದೀಪ್ ಗೋಯಲ್ ಮೂಲತಃ ನರ್ವಾನಾ ನಿವಾಸಿಯಾಗಿದ್ದು, ಲುವಾಸ್ನಲ್ಲಿ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ವಿಜ್ಞಾನಿಯಾಗಿದ್ದರು. ಅವರ ಎಂಟು ವರ್ಷದ ಮಗಳು ಸನಾಯಾ ಮತ್ತು ಪತ್ನಿ ನೀತು ಗೋಯಲ್ ಅವರೊಂದಿಗೆ HAU ನ ಹಳೆಯ ಕ್ಯಾಂಪಸ್ನಲ್ಲಿ ವಾಸಿಸುತ್ತಿದ್ದರು. ಭಾನುವಾರ ಸಂಜೆ ಅವರು ತಮ್ಮ ಮಗಳು ಸನಯಾಳೊಂದಿಗೆ ರಿಜಿಸ್ಟ್ರಾರ್ ಕಛೇರಿಗೆ ಬಂದಿದ್ದು, ಇದಾದ ಬಳಿಕ ತನ್ನ ಕಚೇರಿಗೆ ತೆರಳಿ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಾರೆ. ಬಳಿಕ ಸರ್ಜಿಕಲ್ ಬ್ಲೇಡ್ ನಿಂದ ಮಗಳನ್ನು ಬರ್ಬರವಾಗಿ ಕೊಲೆ ಮಾಡಿ ನಂತರ ತನ್ನ ಕೈಯ ನಾಳವನ್ನೇ ಕತ್ತರಿಸಿಕೊಂಡಿದ್ದಾರೆ.
ಬಹಳ ಹೊತ್ತಾದರೂ ವಿಜ್ಞಾನಿ ಹೊರಬರದಿದ್ದಾಗ ನೌಕರರು ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಬರದಿರುವುದರಿಂದ, ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು. ಲುವಾಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಬಾಗಿಲು ಒಡೆದು ನೋಡಿದಾಗ ಒಳಗಿದ್ದ ಸೋಫಾ ಸೆಟ್ನಲ್ಲಿ ಮಗಳ ಶವ ಬಿದ್ದಿರುವುದು ಮತ್ತು ಡಾ.ಸಂದೀಪ್ ಗೋಯಲ್ ಅವರ ಮೃತದೇಹ ನೆಲದ ಮೇಲೆ ಬಿದ್ದಿರುವುದು ಕಂಡು ಬಂದಿದೆ. ಪೊಲೀಸರು ಘಟನಾ ಸ್ಥಳಕ್ಕೆ ಬಂದಿದ್ದು, ಮರಣೊತ್ತರ ವರದಿ ಬಂದ ಬಳಿಕವೇ ಎಲ್ಲಾ ಮಾಹಿತಿ ಲಭ್ಯವಾಗಲಿದೆ ಎಂದಿದ್ದಾರೆ.