Crime News: RTI ಕಾರ್ಯಕರ್ತನ ಕೊಲೆಗೆ ಸುಪಾರಿ; ಒಂಟಿಯಾಗಿ ತೆರಳುತ್ತಿದ್ದಾಗ ಹಲ್ಲೆ, ಆರೋಪಿಗಳ ಬಂಧನ

Share the Article

ಸುಪಾರಿ ಪಡೆದು ಆರ್‌ಟಿಐ ಕಾರ್ಯಕರ್ತನನ್ನು ಕೊಲೆ ಮಾಡಲು ಯತ್ನಿಸಿದ್ದ ರೌಡಿ ಸೇರಿದಂತೆ ಆರು ಮಂದಿಯನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Bengaluru: ಬೆಂಗಳೂರಿನ ಬಸವೇಶ್ವರ ನಗರದ ವೆಲ್ಡಿಂಗ್ ಅಂಗಡಿಯಲ್ಲಿ ಸ್ಫೋಟ : ನಾಲ್ವರಿಗೆ ತೀವ್ರ ಗಾಯ

ನಾಗರಬಾವಿ ಬಳಿಯ ಭೈರವೇಶ್ವರ ನಗರದ ಮನೀಶ್ ಮೋಹನ್ ಪೂಜಾರಿ, ಶಶಿಕುಮಾರ್‌ ರೆಡ್ಡಿ, ಕೃಷ್ಣ ಸತೀಶ್, ವೇಣುಗೋಪಾಲ್ ಮತ್ತು ಕುಂಬಳ ಗೋಡಿನ ಗೋವಿಂದರಾಜು ಬಂಧಿತರು. ಆರೋಪಿಗಳು ಕುಂಬಳ ಗೋಡು ನಿವಾಸಿಯಾದ ಆರ್‌ಟಿಐ ಕಾರ್ಯಕರ್ತ ನಾಗರಾಜ್ ಎಂಬಾತನನ್ನು ಕೊಲೆ ಮಾಡಲು ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕುಂಬಳಗೋಡು ಗ್ರಾ.ಪಂ. ವ್ಯಾಪ್ತಿಯಲ್ಲಿ ಆರೋಪಿ ಗೋವಿಂದರಾಜುಗೆ ಸೇರಿದ ಜಮೀನು ಇದೆ. ಆ ಜಮೀನಿಗೆ ಸಂಬಂಧಪಟ್ಟಂತೆ ನಾಗರಾಜ್ ಮಾಹಿತಿ ಹಕ್ಕು ಕಾಯಿದೆಯಡಿ ದಾಖಲೆಪತ್ರಗಳನ್ನು ಪಡೆದಿದ್ದ. ಅಲ್ಲದೆ, ಜಮೀನಿನ ಒಡೆತನದ ವಿಚಾರವಾಗಿ ನ್ಯಾಯಾಲಯದಲ್ಲಿ ಅರ್ಜಿ ಹಾಕಿ ತಗಾದೆ ತೆಗೆದಿದ್ದ. ನ್ಯಾಯಾಲಯದಲ್ಲಿ ಗೋವಿಂದರಾಜು ಪರ ಆದೇಶ ಬಂದಿತ್ತು. ಆ ನಂತರವೂ ನಾಗರಾಜ್, ತಗಾದೆ ಮುಂದು ವರಿಸಿದ್ದ. ಇದರಿಂದ ಈ ಕೋಪಗೊಂಡಿದ್ದ ಗೋವಿಂದರಾಜು, ನಾಗರಾಜ್‌ನನ್ನು ಕೊಲ್ಲುವಂತೆ ಇತರೆ ಆರೋಪಿಗಳಿಗೆ 5 ಲಕ್ಷ ರೂ. ಸುಪಾರಿ ಕೊಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

 

ಆರೋಪಿಗಳು ನಾಗರಾಜ್‌ನನ್ನು ಕೊಲೆ ಮಾಡಲು ಹಲವು ದಿನಗಳಿಂದ ಹೊಂಚು ಹಾಕುತ್ತಿದ್ದರು. ಫೆ.29ರಂದು ರಾತ್ರಿ ನಾಗರಾಜ್, ಒಬ್ಬಂಟಿಯಾಗಿ ಬೈಕ್‌ನಲ್ಲಿ ಕೆಂಗೇರಿ ರೈಲ್ವೆ ಅಂಡರ್‌ಪಾಸ್ ಮಾರ್ಗದಲ್ಲಿ ಹೋಗುತ್ತಿದ್ದಾಗ ಆರೋಪಿಗಳು ಆತನನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ್ದರು.

 

ನಾಗರಾಜ್, ಆರೋಪಿಗಳಿಂದ ತಪ್ಪಿಸಿಕೊಂಡು ಬಂದು ದೂರು ಕೊಟ್ಟಿದ್ದರು. ಈ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

 

ಅಪರಾಧ ಹಿನ್ನೆಲೆಯುಳ್ಳ ಕೃಷ್ಣನ ವಿರುದ್ಧ ಹಿಂದೆಯೇ ಮೂರು ಪ್ರಕರಣ ದಾಖಲಾಗಿದ್ದವು. ಅಲ್ಲದೆ, ಚಂದ್ರಾ ಲೇಔಟ್ ಠಾಣೆಯ ರೌಡಿ ಪಟ್ಟಿಯಲ್ಲಿ ಆತನ ಹೆಸರಿದೆ. ಮತ್ತೊಬ್ಬ ಆರೋಪಿ ಮನೀಶ್ ಮೋಹನ್ ಪೂಜಾರಿ ವಿರುದ್ಧ ಚಂದ್ರಾ ಲೇಔಟ್, ಜ್ಞಾನಭಾರತಿ ಉಪ್ಪಾರಪೇಟೆ ಸೇರಿದಂತೆ ಹಲವ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳು ಹಾಗೂ ಬೈಕ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave A Reply