PM Modi: ಭಗವಾನ್ ಕೃಷ್ಣ ನನ್ನ ಅದೃಷ್ಟದಲ್ಲಿ ಸುದರ್ಶನ್ ಸೇತು ನಿರ್ಮಾಣವನ್ನು ಬರೆದಿದ್ದಾನೆ : ಪ್ರಧಾನಿ ನರೇಂದ್ರ ಮೋದಿ
“ಭಗವಾನ್ ಕೃಷ್ಣನು ನನ್ನ ಅದೃಷ್ಟದಲ್ಲಿ ಸುದರ್ಶನ್ ಸೇತು ನಿರ್ಮಾಣವನ್ನು ಬರೆದಿದ್ದಾನೆ” ಎಂದು ಭಾನುವಾರ ಗುಜರಾತ್ನ ದ್ವಾರಕಾದಲ್ಲಿ ಭಾರತದ ಅತಿ ಉದ್ದದ ಕೇಬಲ್-ತಂಗು ಸೇತುವೆ ಸುದರ್ಶನ್ ಸೇತುವನ್ನು ಉದ್ಘಾಟಿಸಿದ ನಂತರ ಪ್ರಧಾನಿ ಮೋದಿ ಹೇಳಿದ್ದಾರೆ.
ನಾನು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಸುದರ್ಶನ್ ಸೇತು ನಿರ್ಮಿಸುವ ಕುರಿತ ಪ್ರಸ್ತಾಪವನ್ನು ಕೇಂದ್ರದಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ಗೆ ಸಲ್ಲಿಸಿದ್ದೆ ಆದರೆ ಅವರು ಅದಕ್ಕೆ ಕಿವಿಗೊಡಲಿಲ್ಲ ಎಂದು ನರೇಂದ್ರ ಮೋದಿ ಪ್ರಾಚೀನ ಸ್ಥಳವಾದ ದ್ವಾರಕಾದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ನೆನಪಿಸಿಕೊಂಡರು.
“ಇಂದು ನನ್ನೊಂದಿಗೆ ನವಿಲಿನ ಗರಿ ತೆಗೆದುಕೊಂಡು ಕೃಷ್ಣನಿಗೆ ಅರ್ಪಿಸಿದೆ. ನನ್ನ ಕನಸು ನನಸಾದಂತಾಗಿದೆ. ಇಂದು ನನ್ನ ಹೃದಯವು ತುಂಬಿ ತುಳುಕುತ್ತಿದೆ “. ಎಂದು ಮೋದಿ ತಿಳಿಸಿದ್ದಾರೆ.
“ನಾನು ಜನರಿಗೆ ನವ ಭಾರತದ ಭರವಸೆಯನ್ನು ನೀಡಿದಾಗ, ಪ್ರತಿಪಕ್ಷಗಳು ನನ್ನನ್ನು ಅಪಹಾಸ್ಯ ಮಾಡಿದ್ದವು. ಆದರೆ ಇಂದು ಪ್ರತಿಯೊಬ್ಬ ಭಾರತೀಯರೂ ತಮ್ಮ ಕಣ್ಣ ಮುಂದೆ ಹೊಸ ಭಾರತವನ್ನು ನಿರ್ಮಾಣವಾಗುತ್ತಿರುವುದನ್ನು ನೋಡಬಹುದು ಎಂದರು.
ಕಾಂಗ್ರೆಸ್ ನವರು ದೀರ್ಘಕಾಲ ಅಧಿಕಾರದಲ್ಲಿದ್ದರೂ ಜನರಿಗೆ ಯಾವುದೇ ಅಭಿವೃದ್ಧಿ ಮಾಡುವ ಇಚ್ಛಾಶಕ್ತಿಯನ್ನು ಹೊಂದಿರಲಿಲ್ಲ. ಏಕೆಂದರೆ ಅವರ ಎಲ್ಲಾ ಪ್ರಯತ್ನಗಳು ಕೇವಲ ಒಂದು ಕುಟುಂಬವನ್ನು ಸಾಕುವುದಾಗಿತ್ತು ಎಂದು ಕಾಂಗ್ರೆಸ್ ಅನ್ನು ಕುಟುಕಿದರು.
2014ರ ಹಿಂದಿನ 10 ವರ್ಷಗಳಲ್ಲಿ ಭಾರತವು ಆರ್ಥಿಕತೆಯಲ್ಲಿ ಕೇವಲ 11ನೇ ಸ್ಥಾನದಲ್ಲಿತ್ತು. ಅವರು ಮೀಸಲಿಟ್ಟಿದ್ದ ಸಣ್ಣ ಬಜೆಟ್ ಕೂಡ ಅವರ ಹಗರಣಗಳಲ್ಲಿ ಕೊಚ್ಚಿ ಹೋಗಿದೆ “ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
2014ರಲ್ಲಿ ನೀವೆಲ್ಲರೂ ನನ್ನನ್ನು ಆಶೀರ್ವದಿಸಿ ದೆಹಲಿಗೆ ಕಳುಹಿಸಿದಾಗ, ನಾನು ದೇಶವನ್ನು ಲೂಟಿ ಮಾಡುವುದರಿಂದ ರಕ್ಷಿಸುತ್ತೇನೆ ಎಂದು ಭರವಸೆ ನೀಡಿದ್ದೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ನಡೆಯುತ್ತಿದ್ದ ಎಲ್ಲಾ ಹಗರಣಗಳಿಗೆ ನಾನು ಪೂರ್ಣವಿರಾಮ ಹಾಕಿದ್ದೇನೆ. ಈಗ ಭಾರತವು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ “ಎಂದು ಪ್ರಧಾನಿ ಮೋದಿ ಹೇಳಿದರು.