Bantwala: ಪತ್ನಿಗೆ ಹಲ್ಲೆಗೈದು 33 ಪವನ್ ಚಿನ್ನ ದೋಚಿದ ಪತಿರಾಯ – ಪತ್ನಿಯಿಂದ ದೂರು ದಾಖಲು

Share the Article

ಬಂಟ್ವಾಳ: ಮಹಿಳೆಯೋರ್ವಳಿಗೆ ಆಕೆಯ ಪತಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಆಕೆಯ 33 ಪವನ್‌ ಚಿನ್ನ ದೋಚಿದ ಪ್ರಕರಣ ಕಳೆದ ಡಿ. 30ರಂದು ನಡೆದಿದ್ದು, ಪ್ರಸ್ತುತ ಆಕೆ ಬಂಟ್ವಾಳ ನಗರ ಪೊಲೀಸ್‌ ಠಾಣೆಗೆ ನೀಡಿದ ದೂರಿನಂತೆ ಆಕೆಯ ಪತಿ ಹಾಗೂ 6 ಮಂದಿ ಆತನ ಸಂಬಂಧಿಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಘಟನೆಯ ಕುರಿತು ಪುದು ಗ್ರಾಮ ನಿವಾಸಿ ಬಿ.ಬಿ.ಫಾತಿಮಾ ಪೊಲೀಸರಿಗೆ ದೂರು ನೀಡಿದ್ದು, ಆಕೆಯ ಪತಿ ಉಮ್ಮರ್‌ ಫಾರೂಕ್‌, ಆತನ ಸಹೋದರರಾದ ಮುಸ್ತಾಫಾ, ರಿಯಾಜ್‌, ಮೊಹಮ್ಮದ್‌, ಸಂಬಂಧಿಕರಾದ ದುಲೇಕಾ, ಆಸ್ಮಾ, ಅರ್ಷಿದಾ ಆರೋಪಿಗಳೆಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: L K Advani: ಮೋದಿಯಿಂದ ರಾಮ ಮಂದಿರ ಉದ್ಘಾಟನೆ – ಎಲ್ ಕೆ ಅಡ್ವಾಣಿ ಯಿಂದ ಮಹತ್ವದ ಹೇಳಿಕೆ!!

ಫಾತಿಮಾ ನೀಡಿದ ದೂರಿನಂತೆ, 14 ವರ್ಷಗಳ ಹಿಂದೆ ಆಕೆಗೆ ಉಮ್ಮರ್‌ ಫಾರೂಕ್‌ ಜತೆ ವಿವಾಹವಾಗಿದ್ದು, ಈ ವೇಳೆ 5 ಲಕ್ಷ ರೂ. ಹಾಗೂ 63 ಪವನ್‌ ಚಿನ್ನಾಭರಣವನ್ನು ವರದಕ್ಷಿಣೆಯಾಗಿ ನೀಡಿದ್ದರು. ಬಳಿಕ ಆರೋಪಿ ಪತಿ ಹೆಚ್ಚಿನ ಹಣ ತರುವಂತೆ ಪತ್ನಿಗೆ ಕಿರುಕುಳದ ಜತೆಗೆ ಹಲ್ಲೆಯನ್ನೂ ಮಾಡುತ್ತಿದ್ದನು. ಆತನ ಸಹೋದರರು, ಅವರ ಪತ್ನಿಯರು ಕೂಡ ಕಿರುಕುಳ ನೀಡುತ್ತಿದ್ದರು. ಹೀಗಾಗಿ ಫಾತಿಮಾ ನಂದಾವರದಲ್ಲಿ ಫ್ಲಾಟ್‌ ಖರೀದಿಸಿ ವಾಸವಾಗಿದ್ದರು.

ಆರೋಪಿ ಪತಿಯು ಡಿ. 30ರಂದು ಆಕೆಯ ಫ್ಲಾಟ್‌ಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ರಕ್ತ ಬರುವಂತೆ ಹೊಡೆದು ನೀನು ಬೇಡ, ಬೇರೆ ಮದುವೆಯಾಗುವುದಾಗಿ ಹೇಳಿ ಹೋಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply