DV Sadananda gowda: ಚುನಾವಣಾ ರಂಗದಿಂದ ಸದಾನಂದಗೌಡ ನಿವೃತ್ತಿ ?! ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಅಚ್ಚರಿ ಸ್ಟೇಟ್ ಮೆಂಟ್ ಕೊಟ್ಟು ಪಕ್ಷಕ್ಕೂ ಹೇಳ್ತಾರಾ ಗುಡ್ ಬೈ ?!
Karnataka politics news MP DV Sadananda Gowda opposes BJP and jds alliance latest news
DV Sadananda gowda: 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗದಿದ್ದರೆ ಮಾಜಿ ಸಿಎಂ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಡಿ.ವಿ ಸದಾನಂದ ಗೌಡ ಅವರು ಪಕ್ಷ ತೊರೆಯುವ ಸಾಧ್ಯತೆ ಇದೆ ಎಂದೆಲ್ಲಾ ರಾಜಕೀಯ ವಲಯದಲ್ಲಿ ಚರ್ಚೆಯಾಗಿರುವುದು ಪಕ್ಷದವರಲ್ಲಿ ಕುತೂಹಲ ಮೂಡಿಸಿದೆ.
ಅದರಲ್ಲೂ ಲೋಕಸಭಾ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಮೈತ್ರಿಗೆ ಎರಡೂ ಪಕ್ಷಗಳ ಒಳಗೂ ಅಸಮಾಧಾನ ಕೇಳಿಬರುತ್ತಿದೆ. ಈಗಾಗಲೇ ಜೆಡಿಎಸ್ ನಾಯಕರು ಬಹಿರಂಗವಾಗಿಯೇ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದು, ಕೆಲ ಬಿಜೆಪಿ ನಾಯಕರು ಕೂಡ ಮೈತ್ರಿಗೆ ಅಪಸ್ವರ ಎತ್ತಿದ್ದಾರೆ. ಇದೀಗ ಈ ಸಾಲಿಗೆ ಸಂಸದ ಡಿವಿ ಸದಾನಂದ ಗೌಡ (DV sadananda gowda ) ಸೇರಿದ್ದಾರೆ.
ಈ ಬಗ್ಗೆ ಪತ್ರಿಕೆಯೊಂದರ ಜೊತೆ ಮಾತನಾಡಿದ ಸದಾನಂದ ಅವರು, ಪಕ್ಷದ ರಾಜ್ಯ ನಾಯಕರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆಯೇ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲಾಗಿದೆ. ಬಿಜೆಪಿಯಲ್ಲಿನ ಶೇ 75ರಷ್ಟು ಜನರಿಗೆ ಈ ಮೈತ್ರಿ ಇಷ್ಟವಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ರಾಜ್ಯ ಬಿಜೆಪಿ ನಾಯಕರ ಜೊತೆ ಚರ್ಚಿಸದೆ, ಏಕಪಕ್ಷೀಯವಾಗಿ ಮೈತ್ರಿ ಮಾಡಿಕೊಂಡರೆ, ಯಾವುದೇ ರೀತಿಯ ಪ್ರಯೋಜನವಿಲ್ಲ ಎಂದಿದ್ದಾರೆ. ಇತ್ತೀಚೆಗಷ್ಟೇ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಾವು ಸೋತಿದ್ದೇವೆ. ಚುನಾವಣೆ ಮುಗಿದು ನಾಲ್ಕು ತಿಂಗಳು ಕಳೆದರೂ ಪರಿಸ್ಥಿತಿ ಬದಲಾಗಿಲ್ಲ.
ಇದೀಗ ಜೆಡಿಎಸ್ ಜೊತೆಗಿನ ಮೈತ್ರಿಯಿಂದಾಗಿ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗುತ್ತದೆ. ಪಕ್ಷದಲ್ಲಿ ಒಕ್ಕಲಿಗ ನಾಯಕರ ಮಾತುಗಳಿಗೂ ಬೆಲೆ ಇಲ್ಲದ ಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದರು. ಪಕ್ಷವು ನನಗೆ ಎಲ್ಲವನ್ನೂ ನೀಡಿದೆ. ರಾಜ್ಯದಲ್ಲಿ ಅತ್ಯಂತ ಬಲಿಷ್ಠವಾಗಿದ್ದ ಪಕ್ಷಕ್ಕೆ ಈ ಸ್ಥಿತಿ ಬಂದಿರುವುದರ ಬಗ್ಗೆ ನೋವಿದೆ. ಅದನ್ನು ಸರಿಪಡಿಸಬೇಕು ಎಂಬುದಷ್ಟೇ ನನ್ನ ಆಗ್ರಹ. ನಾನಿನ್ನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ವಾಸ್ತವ ವಿಚಾರಗಳನ್ನು ಮಾತನಾಡಲು ನನಗೆ ಯಾವ ರೀತಿಯ ಭಯವೂ ಇಲ್ಲ ಎಂದು ಹೇಳಿದರು.
ಅದರಲ್ಲೂ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಎನ್ಡಿಎ ಮೈತ್ರಿಕೂಟವನ್ನು ಬಲಪಡಿಸಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ರಾಜ್ಯದ ನಾಯಕರ ಜೊತೆ ಚರ್ಚೆಯನ್ನೇ ನಡೆಸದೇ ಏಕಪಕ್ಷೀಯವಾಗಿ ಮೈತ್ರಿ ಮಾಡಿಕೊಂಡರೆ ಯಾವ ರೀತಿಯ ಅನುಕೂಲ ಆಗಲು ಸಾಧ್ಯ ಎಂದು ಡಿ.ವಿ ಸದಾನಂದ ಗೌಡ ಪ್ರಶ್ನಿಸಿದ್ದಾರೆ.
ಜೆಡಿಎಸ್ನೊಂದಿಗಿನ ಮೈತ್ರಿಗೆ ಮಾಜಿ ಸಚಿವ, ಶಾಸಕ ಎಸ್.ಟಿ ಸೋಮಶೇಖರ್, ಡಿ.ವಿ ಸದಾನಂದ ಗೌಡ ಸೇರಿದಂತೆ ಪಕ್ಷದ ಹಿರಿಯ ನಾಯಕರೇ ಅಸಮಾಧಾನಗೊಳ್ಳುತ್ತಿದ್ದು, ಒಟ್ಟಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ವಿಧಾನಸಭಾ ಚುನಾವಣೆಯಷ್ಟೂ ಕ್ಷೇತ್ರಗಳ ಅವಕಾಶವಿರದ ಕಾರಣ ಪಕ್ಷದ ಸೀಮಿತ ಮುಖಂಡರಿಗಷ್ಟೇ ಟಿಕೆಟ್ ಸಿಗಲಿದೆ. ಇದೀಗ ಜೆಡಿಎಸ್-ಬಿಜೆಪಿ ಮೈತ್ರಿಯಾದರೆ ಬಿಜೆಪಿ ಸ್ಪರ್ಧೆಗೆ ಅವಕಾಶ ಮತ್ತಷ್ಟು ಕನಿಷ್ಠವಾಗಲಿದೆ. ಹೀಗಾಗಿ ಬಿಜೆಪಿ ಪಕ್ಷದ ಅನೇಕ ಹಿರಿಯ ಮುಖಂಡರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ. ಈ ಕಾರಣದಿಂದ ಬಿಜೆಪಿ ನಾಯಕರು ಚುನಾವಣಾ ಪ್ರಕ್ರಿಯೆ ಆರಂಭದಲ್ಲೇ ಜಾಗ್ರತರಾಗುತ್ತಿದ್ದು, ತಮ್ಮ ಕ್ಷೇತ್ರದ ಟಿಕೆಟ್ ಕೈ ತಪ್ಪದಂತೆ ಎಚ್ಚರ ವಹಿಸುತ್ತಿದ್ದಾರೆ. ಇದು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅಂತಿಮ ಕ್ಷಣದಲ್ಲಿ ಮೈತ್ರಿ ಬಗ್ಗೆ ಬಿಜೆಪಿ ನಾಯಕರು ಯಾವ ರೀತಿಯ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ: ‘ರಾಕ್ಷಸಿ’ ಎಂದು ಹೆಂಡತಿಯ ನಂಬರ್ ಸೇವ್ ಮಾಡಿದ ಗಂಡ !! ಸೀದಾ ಕೋರ್ಟ್ ಗೇ ಹೋದ ಹೆಂಡ್ತಿ- ಜಡ್ಜ್ ಏನಂದ್ರು ಗೊತ್ತಾ ?!