ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ಬಸ್ ಚರಂಡಿಗೆ ,ತಪ್ಪಿದ ದುರಂತ

 

ಪುತ್ತೂರು : ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್‌ವೊಂದು ರಸ್ತೆ ಬದಿಯ ಚರಂಡಿಗೆ ಉರುಳಿದ ಘಟನೆ ತಾಲೂಕಿನ ಸರ್ವೆಯಲ್ಲಿ ಸೆ.11ರಂದು ಸಂಜೆ ನಡೆದಿದೆ.

ರಸ್ತೆಯ ಬದಿಯಲ್ಲಿ ಜಲಜೀವನ್ ಯೋಜನೆಯಡಿಯಲ್ಲಿ ಮಣ್ಣು ಅಗೆದು ಪೈಪ್ ಅಳವಡಿಸಲಾಗಿತ್ತು.ಮಳೆ ಬಂದ ಕಾರಣ ಆ ಮಣ್ಣು ಮೆದುವಾಗಿತ್ತು.ಎದುರಿನಿಂದ ಬರುತ್ತಿದ್ದ ಕಾರಿಗೆ ಸೈಡ್ ಕೊಡುವಾಗ ಬಸ್ ರಸ್ತೆಬದಿಗೆ ಚಲಿಸಿದೆ‌.ರಸ್ತೆ ಬದಿಯಲ್ಲಿ ಮಣ್ಣು ಸಡಿಲಗೊಂಡು ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಬಸ್ ಚರಂಡಿಗೆ ಬಿದ್ದಿದೆ.

ಪುತ್ತೂರಿನಿಂದ ಸವಣೂರು ಮೂಲಕ ಪಂಜ ಕಡೆಗೆ ಹೋಗುತ್ತಿದ್ದ ಬಸ್ ಸರ್ವೆ ತಲುಪುತ್ತಿದ್ದಂತೆ ಚರಂಡಿಗೆ ಉರುಳಿದೆ.

ತುರ್ತು ನಿರ್ಗಮನ ಡೋರ್ ಜಾಮ್

ಬಸ್‌ಗಳಲ್ಲಿ ಅಪಘಾತ ನಡೆದ ಸಂದರ್ಭದಲ್ಲಿ ಬಳಸುವ ತುರ್ತು ನಿರ್ಗಮನ ಡೋರ್ ಅಳವಡಿಸಲಾಗುತ್ತದೆ.ಆದರೆ ಈ ಬಸ್ ಅಪಘಾತವಾದಾಗ ಆ ಡೋರ್‌ನ್ನು ತೆರೆಯಲು ಎಷ್ಟೇ ಪ್ರಯತ್ನಪಟ್ಟರೂ ಆ ಡೋರ್ ತೆರೆಯಲು ಆಗಿಲ್ಲ.
ಬದಲಾಗಿ ಕಿಟಕಿ ಮೂಲಕ ಬಸ್‌ನ ಒಳಗಿದ್ದವರನ್ನು ಹೊರಕ್ಕೆ ತೆಗೆಯಲಾಯಿತು.

ಬಸ್ ಕೆಪಾಸಿಟ್‌ಗಿಂತ ಹೆಚ್ಚು ಪ್ರಯಾಣಿಕರು

ಬಸ್‌ನಲ್ಲಿ ಗರಿಷ್ಠ 54 ಸೀಟ್‌ಗಳಿದ್ದು ,ಆದರೆ ಅಪಘಾತಕ್ಕೀಡಾದ ಬಸ್‌ನಲ್ಲಿ 94 ಜನರಿದ್ದರು.ಬಸ್‌ನ ಸೀಟ್ ಕೆಪಾಸಿಟಿಗಿಂತ ಹೆಚ್ಚಾಗಿ ಬಸ್‌ನಲ್ಲಿ ಜನರಿದ್ದರು.

ಪುತ್ತೂರಿನಿಂದ ಸಂಜೆ ಹೊತ್ತು ಹೊರಡುವ ಬಹುತೇಕ ಬಸ್‌ನಲ್ಲಿ ಮಿತಿಗಿಂತ ಹೆಚ್ಚು ಜನರನ್ನು ಕರೆತರಲಾಗುತ್ತಿದ್ದು,ಬಸ್ ತುಂಬಾ ಜನರೇ ತುಂಬಿಕೊಳ್ಳುತ್ತಿದ್ದು ,ಇದು ಅಪಾಯಕಾರಿ ಕೂಡ.

ಆಪತ್ಬಾಂದವ ಆಸೀಪ್ ಸರ್ವೆ

ಅಪಘಾತ ನಡೆದ ಸಂದರ್ಭದಲ್ಲಿ ಬಸ್‌ ನ ತುರ್ತು ನಿರ್ಗಮನ ಬಾಗಿಲು ತೆರೆಯಲಿಲ್ಲ.ಈ ಸಂದರ್ಭದಲ್ಲಿ ಸರ್ವೆಯ ಆಸೀಪ್ ಸರ್ವೆ ಅವರು ಬಸ್‌ನ ಒಳಗಿದ್ದ 17 ವಿದ್ಯಾರ್ಥಿನಿಯರು ,3 ಮಂದಿ ಮಹಿಳೆಯರು ಸೇರಿದಂತೆ ಒಟ್ಟು 24 ಜನರನ್ನು ಕಿಟಕಿ ಮೂಲಕ ಹೊರಕ್ಕೆ ತೆಗೆದು ರಕ್ಷಣೆ ಮಾಡಿದರು.

ಸವಣೂರು, ಮುಂಡೂರು ಗ್ರಾ.ಪಂ.ಸದಸ್ಯರ ಕಾರ್ಯ

ಬಸ್ ಅಪಘಾತಕ್ಕೀಡಾದಾಗ ಸ್ಥಳದಲ್ಲಿ ನೂರಾರು ಸಂಖ್ಯೆಯ ಜನರು ಆಗಮಿಸತೊಡಗಿದರು.ಈ ಸಂದರ್ಭದಲ್ಲಿ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.ಈ ಸಂದರ್ಭದಲ್ಲಿ ಸವಣೂರು ಗ್ರಾ.ಪಂ.ಸದಸ್ಯ ರಫೀಕ್ ಎಂ.ಎ ಹಾಗೂ ಮುಂಡೂರು ಗ್ರಾ.ಪಂ.ಸದಸ್ಯ ಪ್ರವೀಣ್ ನೆಕ್ಕಿತಡ್ಕ ಅವರು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಮೂವರು ಗಾಯಾಳು

ಘಟನೆಯಿಂದ ಮಹಿಳೆ ಸೇರಿದಂತೆ ಮೂರು ಮಂದಿಗೆ ಗಾಯಗಳಾಗಿದ್ದು,ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೆಚ್ಚುವರಿ ಬಸ್ ಓಡಾಟಕ್ಕೆ ಆಗ್ರಹ

ಪುತ್ತೂರಿನಿಂದ ಸಂಜೆ 4 ಗಂಟೆಯಿಂದ ಸವಣೂರು ಕಾಣಿಯೂರು ಮಾರ್ಗವಾಗಿ ಸಂಚರಿಸುವ ಎಲ್ಲಾ ಸರಕಾರಿ ಬಸ್‌ ಗಳಲ್ಲಿ ನಿಗದಿಗಿಂತ ಹೆಚ್ಚು ಜನರನ್ನು ತುಂಬಿಸಲಾಗುತ್ತಿದ್ದು,ಇದು ಅಪಾಯಕಾರಿಯಾಗಿದೆ. ಈ ಸಮಯದಲ್ಲಿ ಹೆಚ್ಚುವರಿ ಬಸ್ ಓಡಾಟ ನಡೆಸುವಂತೆ ಸಾರ್ವಜನಿಕ ವಲಯದಿಂದ ಒತ್ತಾಯ ಕೇಳಿಬಂದಿದೆ.

Leave A Reply

Your email address will not be published.