Udupi: ತಾಸೆಯ ಏಟಿಗೆ ಹುಚ್ಚೆದ್ದು ಕುಣಿದ ಹುಲಿರಾಯ, ಮೈಮೇಲೆ ಏರಿ ಬಂದ ದೈವ !! ವಿಡಿಯೋ ವೈರಲ್
Viral video news God's invocation on tiger disguised in Udupi viral video
Udupi: ಕರಾವಳಿಯಲ್ಲಿ ನಿನ್ನೆ ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಿಂದ ಪ್ರಸಿದ್ಧ ಹುಲಿವೇಷ (Huli Vesha) ಆಚರಣೆ ಶುರುವಾಗಿದೆ. ಅದರಂತೆ ನಿನ್ನೆ ಮಧ್ಯಾಹ್ನ ಉಡುಪಿ (Udupi) ಜಿಲ್ಲೆಯ ನಿಟ್ಟೂರು ವೇದಿಕೆಯಲ್ಲಿ ಹುಲಿ ವೇಷದ ಆಚರಣೆ ಮತ್ತು ಹುಲಿ ಕುಳಿತ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸಂದರ್ಭ ಆಶ್ಚರ್ಯ ಘಟನೆಯೊಂದು ನಡೆದಿದೆ. ಕುಣಿಯುತ್ತಾ ಇದ್ದ ಹುಲಿ ವೇಷಧಾರಿಯ ಮೇಲೆ ದೈವ ಆವಾಹನೆ ಆದ ಘಟನೆ ನಡೆದಿದ್ದು ನೆರೆದ ಜನರನ್ನು ಬೆಕ್ಕಸ ಬೆರಗಾಗಿಸಿದೆ.
ಸ್ಪರ್ಧೆಯ ನಿಮಿತ್ತ ಹುಲಿ ವೇಷದಾರಿಗಳು ಅಲಂಕಾರಗೊಂಡ ಸ್ಟೇಜಿನ ಮೇಲೆ ಸರತಿ ಸಾಲಿನಲ್ಲಿ ಕುಳಿತಿದ್ದರು. ಒಬ್ಬೊಬ್ಬರಾಗಿ ಬಂದು ಹುಲಿ ವೇಷಧಾರಿಗಳು ತಮ್ಮ ಕಲಾ ಪ್ರೌಢಿಮೆ ತೋರಿಸಬೇಕಿತ್ತು. ಹಾಗೆ ಒಬ್ಬೊಬ್ಬರಾಗಿ ಬಂದು ಸ್ಟೇಜಿನಲ್ಲಿ ಬಡಿಯುವ ತಾಸೆ ವಾದ್ಯಕ್ಕೆ ಹುಲಿಯ ಹೆಜ್ಜೆ ಹಾಕಿ ಕುಣಿದು ಹೋಗುತ್ತಿದ್ದರು. ಆದರೆ ಈ ಸಂದರ್ಭ ಹುಲಿ ವೇಷದಲ್ಲಿ ಕುಡಿಯುತ್ತಾ ಬಂದ ವೇಷಧಾರಿಯೊಬ್ಬನ ಮೇಲೆ ದೈವದ ಆವಾಹನೆ ಆಗಿದೆ. ಹುಲಿ ವೇಷದ ಸೂಚ್ಯ ದೈವ ‘ಪಿಲಿ ಚಾಮುಂಡಿ’ ಆಗಿದ್ದು, ಸದರಿ ಹುಲಿ ವೇಷಧಾರಿ ಸ್ಟೇಜಿನಲ್ಲಿ ಬಗ್ಗಿ ಕುಳಿತು, ಸ್ಟೇಜಿಗೆ ಹಾಕಿದ್ದ ಕೆಂಪು ಫುಡ್ ಮ್ಯಾಟ್ ಅನ್ನು ಹುಲಿಯಂತೆ ಹಲ್ಲಿನಲ್ಲೇ ಕಚ್ಚಿ ಹರಿದು ಹಾಕಿದ್ದಾನೆ. ತಾಸೆಯ ಶಬ್ದ ಏರುತ್ತಿದ್ದಂತೆ ವ್ಯಗ್ರ ವ್ಯಾಘ್ರನ ರೂಪ ತಾಳಿದ್ದಾನೆ.
ಮೈ ಮೇಲೆ ದೈವ ಆವಾಹನೆ ಬಂದು ಹಲ್ಲಿನಿಂದ ಮ್ಯಾಟ್ ಹರಿದು ಹಾಕುತ್ತಿದ್ದ ಹುಲಿ ವೇಷಧಾರಿಯನ್ನು ಇತರ ಹುಲಿ ವೇಷಧಾರಿಗಳು ಮತ್ತು ಆಯೋಜಕರು ಬಂದು ಹಿಡಿದುಕೊಂಡಿದ್ದಾರೆ. ಹತ್ತು ಜನ ಬಂದು ಹಿಡಿದುಕೊಂಡರು ಕೂಡಾ ದೈವ ಮೈಮೇಲೆ ಬಂದ ವ್ಯಕ್ತಿಯನ್ನು ಒಮ್ಮೆಲೇ ನಿಯಂತ್ರಿಸಲು ಆಗಿಲ್ಲ. ವ್ಯಾಘ್ರನಂತೆ ಕೂಗು ಹಾಕುತ್ತಾ ಹುಲಿ ವೇಷದಾರಿ ಆರ್ಭಟಿಸಿದ್ದಾರೆ. ಸಮಾರಂಭವನ್ನು ವೀಕ್ಷಿಸುತ್ತಿದ್ದ ಜನರು ಮೂಕ ವಿಸ್ಮಿತರಾಗಿ ಆ ದೃಶ್ಯವನ್ನು ನೋಡಿದ್ದಾರೆ. ಸ್ಪರ್ಧೆಯ ಆಯೋಜಕರು ಬಡಿಯುತ್ತಿದ್ದ ತಾಸೆ ನಿಲ್ಲಿಸಲು ಹೇಳಿದ್ದಾರೆ. ಆಗ ಪರಿಸ್ಥಿತಿ ಹತೋಟಿಗೆ ಬಂದಿದೆ. ಇದೀಗ ಈ ಸಂಬಂಧಿತ ವಿಡಿಯೋ ವೈರಲ್ ಆಗಿದೆ. ಕೊನೆಗೆ ಕಾರ್ಯಕ್ರಮವನ್ನು ಒಂದಷ್ಟು ಹೊತ್ತು ನಿಲ್ಲಿಸಲಾಗಿದೆ. ನಂತರ ವ್ಯಾಘ್ರ ಚಾಮುಂಡಿಗೆ ಪೂಜೆ ಸಲ್ಲಿಸಿ ಮತ್ತೆ ಕಾರ್ಯಕ್ರಮ ಶುರುಮಾಡಲಾಗಿದೆ.
ಹುಲಿ ವೇಷ ಶುರುವಾದ ಬಗ್ಗೆ ಪ್ರತೀತಿ:
ಸಾಮಾನ್ಯವಾಗಿ ಹುಲಿ ವೇಷ ಕರಾವಳಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆ, ದೈವ ಭಕ್ತಿ ಹೊಂದಿದ್ದು ಹರಕೆಯ ಸೇವೆಗಾಗಿ ಹುಲಿ ಕುಣಿತ ಮಾಡಿಸಲಾಗುತ್ತದೆ. ಪುರಾಣದ ಕಥೆಯ ಪ್ರಕಾರ ಮಂಗಳೂರಿನ ಮಂಗಳಾದೇವಿಯ ಸನ್ನಿಧಿಯಲ್ಲಿ ತಾಯಿಯೊಬ್ಬಳು ತನ್ನ ಮಗುವಿನ ಆರೋಗ್ಯಕ್ಕಾಗಿ ಇಂತಹದೊಂದು ಹರಕೆ ಹೇಳಿಕೊಂಡಿದ್ದಳಂತೆ. ಮಗು ಆರೋಗ್ಯವಾಗಿ ನಡೆದುಬಂದರೆ ತಾಯಿ ನಿನ್ನ ನಡೆಯಲ್ಲಿ ಮಗುವನ್ನು ಹುಲಿ ಕುಣಿಸುತ್ತೇನೆ ಎನ್ನುವ ಹರಕೆಗೆ ಒಲಿದ ಮಂಗಳಾದೇವಿ ಮಗುವಿನ ಆರೋಗ್ಯವನ್ನು ಗುಣ ಪಡಿಸಿದ್ದಳಂತೆ ಎನ್ನುವುದು ಹಿರಿಯರ ನಂಬಿಕೆ. ಕಾಲ ಕಳೆದಂತೆ ಹುಲಿ ವೇಷ ಪ್ರತಿಷ್ಟೆಯ ಸಂಕೇತವಾಗಿಯೂ ಮೂಡಿಬಂದಿದ್ದು,ನವರಾತ್ರಿ ಸಂದರ್ಭಗಳಲ್ಲಿ ನಗರ, ಗ್ರಾಮೀಣ ಭಾಗದಲ್ಲಿ ತಂಡೋಪ ತಂಡವಾಗಿ ಮನೆ ಮನೆಗೆ ಅಥವಾ ಅಂಗಡಿ ಅಂಗಡಿಗೆ ಹೋಗಿ, ಅಲ್ಲಿ ಹುಲಿ ಕುಣಿತ ನಡೆಸಿ್ದಾರೆ, ಹುಲಿ ಕುಣಿತಡಾ ತಂಡಕ್ಕೆ ಬಹುಮಾನ, ನಗದು ನೀಡಲಾಗುತ್ತದೆ.
ಹುಲಿ ಕುಣಿತಕ್ಕೆ ಕರಾವಳಿಯಲ್ಲಿ ನಂಬಿಕೆ, ಆಚಾರ ವಿಚಾರಗಳಿದ್ದು ದೈವಿಕ ಶಕ್ತಿಯೂ ಇದೆ ಎನ್ನುವುದಕ್ಕೆ ಲೋಬಾನ ಸೇವೆಯ ಸಂದರ್ಭ ಹುಲಿ ವೇಷಧಾರಿಗಳ ಮೇಲಾಗುವ ಆವೇಶ, ಆವಾಹನೆಯೇ ಉದಾಹರಣೆಯಾಗಿದೆ. ಹುಲಿ ವೇಷ ಅಷ್ಟಮಿಯ ಸಂದರ್ಭ ಶುರುವಾಜಿ, ದಸರಾ ವಿಜಯದಶಮಿಯ ದಿನಗಳಲ್ಲಿ ಕೊನೆಯಾಗಿತ್ತದೆ.