ಮೊಮ್ಮಗಳನ್ನು ಜತೆಯಲ್ಲಿ ಕಳುಹಿಸುವಂತೆ ಕೇಳಿದ ಅತ್ತೆಯನ್ನು ಚೂರಿಯಿಂದ ತಿವಿದು ಕೊಲೆ ಮಾಡಿದ ಅಳಿಯ

Murder Case : ಬೆಂಗಳೂರು: ಮೊಮ್ಮಗಳನ್ನು ಜತೆಯಲ್ಲಿ ಕಳುಹಿಸುವಂತೆ ಕೇಳಿದ ಅತ್ತೆಯನ್ನು ಅಳಿಯನೇ ಚಾಕುವಿನಿಂದ ಇರಿದು ಕೊಲೆಗೈ ( Murder Case) ದಿರುವ ಬಗ್ಗೆ ವರದಿಯಾಗಿದೆ.

ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗದೇವನಹಳ್ಳಿಯ ಬೃಂದಾವನ ಲೇಔಟ್‌ನಲ್ಲಿ ಈ ಘಟನೆ ನಡೆದಿದ್ದು, ಕೊಲೆಯಾದವರನ್ನು ಕೆಜಿಎಫ್ ಮೂಲದ ಮಾರಿಕೊಪ್ಪಂ ನಿವಾಸಿ ಏಳಲ್ ಅರಸಿ (48) ಎಂದು ಗುರುತಿಸಲಾಗಿದೆ.ಕೊಲೆ ಮಾಡಿದ ಆರೋಪಿ ಕೆಜಿಎಫ್ ನ ಬೆಮೆಲ್‌ ನಗರ ನಿವಾಸಿ ದಿವಾಕರ್‌ (38).

ಘಟನೆಯಲ್ಲಿ ಮೃತ ಏಳಲ್ ಅರಸಿಯ ಕಿರಿಯ ಮಗಳು ಸಿಂಧೂ ಅರಸಿ (29) ಗಾಯಗೊಂಡಿದ್ದಾರೆ. ‌

ಏಳನ್‌ ಅರಸಿ ಅವರಿಗೆ ಐವರು ಮಕ್ಕಳಿದ್ದಾರೆ. ಆರೋಪಿ ದಿವಾಕರ್‌ ಮತ್ತು ಏಳನ್‌ ಅರಸಿಯ ಪುತ್ರಿ ತಮಿಳ್‌ ಅರಸಿ 12 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಕೆಜಿಎಫ್ ನ ಬೆಮೆಲ್‌ ನಗರದಲ್ಲಿ ದಂಪತಿ ವಾಸವಾಗಿದ್ದರು.

ದಂಪತಿ ನಡುವೆ ಕೌಟುಂಬಿಕ ವಿಚಾರಕ್ಕೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು.ಇದರಿಂದ ಬೇಸತ್ತ ತಮಿಳ್‌ ಅರಸಿ, ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿದ್ದರು. ಬಳಿಕ ಹಿರಿಯರ ಸಮ್ಮುಖದಲ್ಲಿ ರಾಜಿ-ಸಂಧಾನ ಮಾಡಲಾಗಿತ್ತು.

ಕೆಲ ದಿನಗಳ ಬಳಿಕ ಮತ್ತೆ ಪತ್ನಿ ಜತೆ ಆರೋಪಿ ದಿವಾಕರ ಜಗಳ ಆರಂಭಿಸಿದ್ದ.ಅದರಿಂದ ತಮಿಳ್‌ ಅರಸಿ ತವರು ಮನೆಗೆ ಹೋಗಿದ್ದರು.

ತಮಿಳ್ ಅರಸಿ ಪತಿಯ ಮನೆಗೆ ಬರಲು ತಡವಾಗಿದೆ ಎಂದು ಕೋಪಗೊಂಡ ಆರೋಪಿ, ಒಬ್ಬ ಮಗಳನ್ನು ಕರೆದುಕೊಂಡು ಕೆಂಗೇರಿಯ ನಾಗದೇವ ನಹಳ್ಳಿಯ ಬೃಂದಾವನ ಲೇಔಟ್‌ನಲ್ಲಿರುವ ಸಹೋದರಿ ಆಶಾ ಎಂಬವರ ಮನೆಗೆ ಬಂದಿದ್ದಾನೆ. ಪತ್ನಿಗೆ ಕರೆ ಮಾಡಿ ಪುತ್ರಿಯನ್ನು ಕೊಲೆಗೈಯುವುದಾಗಿ ಬೆದರಿಸಿದ್ದಾನೆ. ಅದರಿಂದ ಗಾಬರಿಗೊಂಡ ತಮಿಳ್‌ ಅರಸಿ, ತನ್ನ ತಾಯಿ ಏಳನ್‌ ಅರಸಿಗೆ ಈ ವಿಚಾರ ತಿಳಿಸಿದ್ದಾರೆ.

ಮಾಹಿತಿ ತಿಳಿದು ಏಳನ್‌ ಅರಸಿ, ಸಿಂಧೂ ಹಾಗೂ ಸುಷ್ಮಾ, ಸುಷ್ಮಾ ಪತಿ ಕಾರ್ತಿಕ್ ಅವರು ಮಗುವನ್ನು ಕರೆದೊಯ್ಯಲು ಬಂದಿದ್ದಾರೆ. ಆಗ ಗಲಾಟೆ ನಡೆದಿದೆ.

ಮೊಮ್ಮಗಳಿಗೆ ಪರೀಕ್ಷೆ ಇದೆ. ತಮ್ಮೊಂದಿಗೆ ಕಳುಹಿಸುವಂತೆ ಅತ್ತೆ ಏಳನ್‌ ಅರಸಿ ಕೇಳಿದ್ದಾರೆ. ಆದರೆ, ಆರೋಪಿ ನಿರಾಕರಿಸಿದ್ದ. ಈ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಅದು ವಿಕೋಪಕ್ಕೆ ಹೋದಾಗ, ಆರೋಪಿ ಚಾಕುವಿನಿಂದ ಅತ್ತೆಯ ಕುತ್ತಿಗೆ ಭಾಗಕ್ಕೆ ಇರಿದಿದ್ದಾನೆ. ತಡೆಯಲು ಬಂದ ಪುತ್ರಿ ಸಿಂಧೂ ಅರಸಿಗೂ ಗಾಯವಾಯಿತು.

ತೀವ್ರ ರಕ್ತಸ್ರಾವದಿಂದ ಕೆಳಗೆ ಬಿದ್ದ ಏಳನ್‌ ಅರಸಿಯನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತಾದರೂ , ಮಾರ್ಗ ಮಧ್ಯೆಯೇ ಮೃತಪಟ್ಟರು.

ಈ ಕುರಿತು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು,ಆರೋಪಿ ದಿವಾಕರ ತಲೆಮರೆಸಿಕೊಂಡಿದ್ದಾನೆ.

Leave A Reply

Your email address will not be published.