Makeup Remove : ಮೇಕಪ್ ಅನ್ನು ಈ ರೀತಿ ತೆಗೆಯಿರಿ, ಆರೋಗ್ಯ ಕಾಪಾಡಿ!
ಮೇಕಪ್ ಇಷ್ಟಪಡದ ನಾರಿಯರೇ ಇಲ್ಲ. ಹಿಂದೆ ಸಿನಿಮಾ ನಟಿಯರು, ಮಾಡೆಲ್‌ಗಳು ಮಾತ್ರವೇ ಮೇಕಪ್ ಹಚ್ಚಿಕೊಳ್ಳುತ್ತಿದ್ದರು. ಆದರೆ, ಈಗ ಕಾಲ ಹಾಗಿಲ್ಲ. ಪೇಟೆಯ ಯುವತಿಯರಂತೂ ಮೇಕಪ್ ಇಲ್ಲದೆ ಮನೆಯಿಂದ ಹೊರಗೆ ಕಾಲಿಡುವುದಿಲ್ಲ. ಹಳ್ಳಿಗಳಲ್ಲೂ, ಹೆಚ್ಚಿನ ಹೆಣ್ಣು ಮಕ್ಕಳ ಬಳಿ ಮೇಕಪ್ ಕಿಟ್ ಇದ್ದೇ ಇರುತ್ತದೆ. ಆಧುನಿಕ ಯುಗದಲ್ಲಿ, ಅನೇಕ ಜನರು ಮೇಕಪ್ ಬಳಸುತ್ತಾರೆ. ಕೇವಲ ಮಹಿಳಾಮಣಿಗಳಿಗಷ್ಟೇ ಸೀಮಿತವಾಗಿದ್ದ ಈ ಮೇಕಪ್ ಈಗ ಪುರುಷರನ್ನೂ ಬಿಟ್ಟಿಲ್ಲ. ನಟರು, ಟಿವಿ ನಿರೂಪಕರು, ಮಾಡೆಲ್‌ಗಳು ಸೇರಿದಂತೆ, ಟ್ರೆಂಡ್ ಬಗ್ಗೆ ಆಸಕ್ತಿ ಇರುವ ಎಲ್ಲಾ ಯುವಕರು ಮೇಕಪ್ ಹಚ್ಚಿಕೊಳ್ಳುತ್ತಾರೆ. ಮೇಕಪ್ ಏನೋ ಹಚ್ಚಿಕೊಳ್ಳುತ್ತಾರೆ, ಆದರೆ ಅದನ್ನು ತೆಗೆಯೋದಿಕ್ಕೂ ಗೊತ್ತಿರಬೇಕು. ತಪ್ಪಾದ ರೀತಿಯಲ್ಲಿ ತೆಗೆದರೆ ಚರ್ಮಕ್ಕೆ ಹಾನಿಯುಂಟಾಗುತ್ತದೆ.
ದೀರ್ಘ ಸಮಯಗಳ ಕಾಲ ಮೇಕಪ್ ಮಾಡಿಕೊಳ್ಳುವುದರಿಂದ ಚರ್ಮದ ಮೇಲಿರುವ ರಂಧ್ರಗಳು ಮುಚ್ಚಿಬಿಡುತ್ತದೆ. ಚರ್ಮದಲ್ಲಿ ಇರುವ ತೇವಾಂಶಗಳನ್ನು ತೆಗೆದು ಶುಷ್ಕತೆಗೆ ಒಳಗಾಗುವಂತೆ ಮಾಡುವುದು. ಜೊತೆಗೆ ವಿವಿಧ ಚರ್ಮ ಸಂಬಂಧಿ ಆರೋಗ್ಯ ಸಮಸ್ಯೆ ಉಂಟಾಗುವಂತೆ ಮಾಡುವುದು. ಹಾಗಾಗಿ ಮಲಗುವ ಮುನ್ನ ಮೇಕಪ್ ಅನ್ನು ತೆಗೆಯಬೇಕು. ಇನ್ನು ಮೇಕಪ್ ತೆಗೆಯಬೇಕಾದರೆ ಎಚ್ಚರದಿಂದಿರಬೇಕು. ಸರಿಯಾದ ರೀತಿಯಲ್ಲಿ ತೆಗೆಯಬೇಕು. ಅದಕ್ಕೂ ಒಂದು ವಿಧಾನವಿದೆ. ಮೇಕಪ್ ತೆಗೆಯಲು ಈ ಸುಲಭ ವಿಧಾನಗಳನ್ನು ಅನುಸರಿಸಿ. ಆಗ ಚರ್ಮಕ್ಕೆ ಯಾವುದೇ ಹಾನಿ ಉಂಟಾಗಲ್ಲ.
ಶುದ್ಧೀಕರಿಸುವ ಎಣ್ಣೆ : ಕ್ಲೆನ್ಸಿಂಗ್ ಎಣ್ಣೆ ಅಥವಾ ಶುದ್ಧೀಕರಿಸುವ ಎಣ್ಣೆಯನ್ನು ಬಳಸಿಕೊಂಡು ಮುಖದ ಮೇಕಪ್ ಅನ್ನು ತೆಗೆಯಬಹುದು. ಕ್ಲೆನ್ಸಿಂಗ್ ಎಣ್ಣೆಗಳು ಒಂದು ರೀತಿಯ ತ್ವಚೆ ಉತ್ಪನ್ನವಾಗಿದ್ದು, ಚರ್ಮದಿಂದ ಮೇಕಪ್, ಕೊಳಕು ಮತ್ತು ಇತರ ಕಲ್ಮಶಗಳನ್ನು ತೆಗೆದುಹಾಕಲು ಸಹಕಾರಿಯಾಗಿದೆ. ಶುದ್ಧೀಕರಣ ತೈಲಗಳನ್ನು ಸಾಮಾನ್ಯವಾಗಿ ನೈಸರ್ಗಿಕ ತೈಲಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ. ಹಾಗಾಗಿ ಇದರಿಂದ ಚರ್ಮಕ್ಕೆ ಹಾನಿ ಉಂಟಾಗುವುದಿಲ್ಲ.
ಮೇಕಪ್ ರಿಮೂವರ್ : ಮೇಕಪ್ ತೆಗೆಯಲು ಮೇಕಪ್ ರಿಮೂವರ್ ಬಳಸಿ. ಇದು ದ್ರವ ರೂಪದಲ್ಲಿದ್ದು, ತೇವಾಂಶದಿಂದಲೇ ಮೇಕಪ್ ಅನ್ನು ತೆಗೆಯಲು ಸಹಕಾರಿಯಾಗಿದೆ. ಹಾಗೆಯೇ ಚರ್ಮವನ್ನೂ ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ. ಮೇಕಪ್ ರಿಮೂವರ್ ನಿಂದ ಮೇಕಪ್ ತೆಗೆದರೆ ಮುಖ ಸಂಪೂರ್ಣವಾಗಿ ಸ್ವಚ್ಛವಾಗುವುದು. ಮುಖದಲ್ಲಿ ಜಿಡ್ಡು, ಕಲ್ಮಶಗಳು ಪೂರ್ತಿಯಾಗಿ ಶುಚಿಯಾಗುತ್ತದೆ. ಚರ್ಮಕ್ಕೂ ಯಾವುದೇ ಹಾನಿ ಉಂಟುಮಾಡುವುದಿಲ್ಲ.
ಫೋಮ್ ವಾಶ್ ಮೇಕಪ್ ರಿಮೂವರ್ : ಇದನ್ನು ಬಳಸಿ ಮೇಕಪ್ ತೆಗೆಯುವುದರಿಂದ ಮುಖದ ಮೇಲಿನ ಗಾಢವಾದ ಮೇಕಪ್ ಹಾಗೂ ಜಿಡ್ಡುಗಳು ಸುಲಭವಾಗಿ ಹೋಗುತ್ತದೆ. ಜೊತೆಗೆ ಮುಖದ ಚರ್ಮವು ಮೃದು ಹಾಗೂ ಆರೋಗ್ಯಕರವಾಗಿ ಇರುತ್ತವೆ. ಚರ್ಮಕ್ಕೆ ಹಾನಿಯಾಗದಂತೆ ಪೋಷಿಸುತ್ತದೆ ಈ ರಿಮೂವರ್. ಇದರಿಂದ ಮುಖದ ಮೇಕಪ್ ತೆಗೆಯುವುದು ಉತ್ತಮ.
ಮೇಕಪ್ ರಿಮೂವರ್ ವೈಪ್ಸ್ : ಮೇಕಪ್ ತೆಗೆಯಲು ವೈಪರ್ ಅನ್ನು ಬಳಸಬಹುದು. ಅಥವಾ ಯಾವುದಾದರೂ ಮೃದು ಬಟ್ಟೆಯಿಂದ ಕೂಡ ಅಳಿಸಬಹುದು. ಮೇಕಪ್ ರಿಮೂವಿಂಗ್ ವೈಪರ್ ಗಳು ಚರ್ಮದ ಮೇಲಿರುವ ಕೊಳೆಯನ್ನು ಬಹಳ ಸುಲಭವಾಗಿ ತೆಗೆದುಹಾಕುತ್ತದೆ. ಅಲ್ಲದೆ, ಇದು ಚರ್ಮದ ಆರೋಗ್ಯವನ್ನು ಉತ್ತಮವಾಗಿಡಲು ಸಹಕಾರಿಯಾಗಿದೆ.