ಡ್ರೋನ್ ಬೇಟೆಗೆ ರಣಹದ್ದುಗಳನ್ನು ಬಳಸಲು ಮುಂದಾದ ಭಾರತೀಯ ಸೇನೆ! ​ಇಲ್ಲಿ ಸದ್ದಿಲ್ಲದೆ ನಡೆಯುತ್ತಿದೆ ಹದ್ದುಗಳಿಗೆ ತರಬೇತಿ!!

ಆ ಹದ್ದು ತನ್ನ ಒಡೆಯನ ಆದೇಶಕ್ಕಾಗಿ ಕಾಯುತ್ತಿತ್ತು. ಆತನು ಸೂಚನೆ ನೀಡಿದ ಕೂಡಲೇ ತಕ್ಷಣ ಮೇಲಕ್ಕೆ ಹಾರಿಯೇಬಿಟ್ಟಿತು. ನೋಡ ನೋಡುತ್ತಿದ್ದಂತೆ ತನ್ನ ಬೇಟೆಯನ್ನು ಬಲಿ ಹಾಕಿಯೇ ಬಿಟ್ಟಿತು. ಅರೆ! ಇದ್ರಲ್ಲೇನು ವಿಶೇಷ? ಇದು ಪ್ರಕೃತಿ ಸಹಜ. ಹದ್ದುಗಳು ಬೇಟೆಯಾಡೋದನ್ನ ನಾವು ನೋಡಿದ್ದೀವಲ್ವಾ? ಎಂದು ನೀವು ಕೇಳಬಹುದು. ಆದರೆ ನಾವಿಲ್ಲಿ ಹೇಳುತ್ತಿರುವ ಹದ್ದು ಬೇಟೆಯಾಡಿದ್ದು ಮಾತ್ರ ಕ್ವಾಡ್​ಕಾಪ್ಟರ್ ಡ್ರೋನ್ ಅನ್ನು! ಹೌದು ಆಕಾಶದೆತ್ತರಕ್ಕೆ ಹಾರಿದ ಆ ಹದ್ದು ಡ್ರೋನನ್ನು ಕೆಳಗೆಳೆದೇ ಬಿಟ್ಟಿತು!

ಸಾಮಾನ್ಯವಾಗಿ ನೀವು ಸಿನಿಮಾಗಳಲ್ಲಿ ಈ ರೀತಿಯ ಸೀನ್ ಗಳನ್ನು ನೋಡಿರಬಹದು. ಶತ್ರುಗಳ ಮೂಲವನ್ನು ಶೋಧಿಸಲು ಕೃತಕ ಪಕ್ಷಿಯನ್ನು ಬಳಸೋದು, ಅವುಗಳ ಮೂಲಕ ಬಾಂಬ್ ಹಾಕೋದು, ಹೀಗೆ. ಇನ್ನು ಹಿಂದೆಲ್ಲ ಸಂದೇಶಗಳನ್ನು ಕಳಿಸಲು ಕೂಡ ರಾಜರು ಪಕ್ಷಿಗಳನ್ನೇ ಬಳಸಿಕೊಳ್ಳುತ್ತಿದ್ದರು. ಆದರಿಂದು ನಾವು ಇಂತಹ ದೃಶ್ಯಗಳನ್ನು ನಿಜವಾಗಿಯೂ ಕಾಣಬಹುದಾಗಿದೆ. ಹೌದು, ಭಾರತೀಯ ಸೇನೆ ಇದೀಗ ತನ್ನ ಸೇನಾ ವಿಭಾಕಭಗಕ್ಕೆ ಹದ್ದುಗಳನ್ನು ಆಹ್ವಾನಿಸುತ್ತಿದೆ. ಮೀರತ್​ನಲ್ಲಿರುವ ರಿಮೌಂಟ್ ವೆಟರ್ನರಿ ಕೋರ್ (ಆರ್​ವಿಸಿ) ಕೇಂದ್ರವು

ನಾವೀಗ ಮೇಲೆ ಹೇಳಿದಂತಹ ಹದ್ದಿನ ಬೇಟೆಯ ಘಟನೆಯು ಕೂಡ ಉತ್ತರಾಖಂಡ್​ನ ಔಲಿಯಲ್ಲಿ ಈಚೆಗೆ ನಡೆದ ಭಾರತ-ಅಮೆರಿಕ ಸೇನಾ ಸಮರಾಭ್ಯಾಸದಲ್ಲಿ ಕಂಡುಬಂದ ದೃಶ್ಯವಿದು. ಶತ್ರು ಡ್ರೋನ್​ಗಳ ಕಾಟ ಮತ್ತು ವೈರಿಗಳಿಂದ ಪತ್ತೆಗೆ ಒಳಗಾಗುವ ಚಿಂತೆಯಿಲ್ಲದೆ ಕಣ್ಗಾವಲು ನಡೆಸುವ ಅಗತ್ಯವನ್ನು ಎದುರಿಸುತ್ತಿರುವ ಸೇನೆಯು ತರಬೇತಿ ಶಿಬಿರದಲ್ಲಿ ಪಕ್ಷಿಗಳ ಹಿಂಡುಗಳನ್ನು ಕಲೆಹಾಕುತ್ತಿದೆ.

ತರಬೇತಿ ಅವಧಿಯಲ್ಲಿ ಹದ್ದುಗಳು ನೂರಾರು ಡ್ರೋನ್​ಗಳನ್ನು ಕೆಳಗಿಳಿಸಿವೆ. ಕೆಲವೊಮ್ಮೆ ಅವುಗಳನ್ನು ಸಂಪೂರ್ಣವಾಗಿ ನಾಶ ಮಾಡಿವೆ. ಇವು ಕ್ವಾಡ್​ಕಾಪ್ಟರ್​ಗಳಾಗಿರುವುದರಿಂದ ಇದುವರೆಗೆ ಯಾವುದೇ ಹದ್ದುಗಳಿಗೆ ಗಾಯವಾಗಿಲ್ಲ ಎಂದು ರಕ್ಷಣಾ ಸಂಸ್ಥೆ ಸಿಬ್ಬಂದಿ ಹೇಳುತ್ತಾರೆ. ಈ ಪಕ್ಷಿಗಳ ಪೈಕಿ ಬಹುತೇಕವು ರಕ್ಷಣೆ ಮಾಡಲ್ಪಟ್ಟವುಗಳಾಗಿದ್ದು, ರಣಹದ್ದು ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರದಲ್ಲಿ ಬೀಡುಬಿಟ್ಟಿವೆ. 2020ರಿಂದ ಗೂಢಚರ್ಯು ಮತ್ತು ಡ್ರೋನ್ ಕೆಳಗಿಳಿಸುವ ಕಾರ್ಯಾಚರಣೆಗಾಗಿ ಹಲವು ಪಕ್ಷಿಗಳಿಗೆ ತರಬೇತಿ ನೀಡಲಾಗುತ್ತಿದೆ.

ಅಲ್ಲದೆ ಈ ರೀತಿ ಸೇನೆಯಲ್ಲಿ ಪಕ್ಷಿಗಳನ್ನು ಬಳಸುತ್ತಿರುವುದು ಇದೇ ಮೊದಲಲ್ಲ. ಸಿನಿಮಾ ಹಾಗೂ ರಾಜರ ಕಾಲದಲ್ಲಿನ ಉದಾಹರಣೆ ಬಿಟ್ಟು ಇತ್ತೀಚೆಗೂ ಇವು ಯುದ್ಧದಲ್ಲಿ ಬಳಕೆಯಾಗಿದ್ದವು. ಮಿಲಿಟರಿ ಮತ್ತು ಗುಪ್ತಚರ ಕಾರ್ಯಾಚರಣೆಗಳಲ್ಲಿ ಬಳಸಲ್ಪಟ್ಟ ದೀರ್ಘ ಇತಿಹಾಸವನ್ನು ಕೂಡ ಇವು ಹೊಂದಿವೆ. ಎರಡನೇ ವಿಶ್ವ ಯುದ್ಧದಲ್ಲಿ ಇಂತಹ ಹಕ್ಕಿಗಳನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಯಿತು. ಬ್ರಿಟಿಷ್ ಸೈನ್ಯವು ಯುದ್ಧದ ಉದ್ದಕ್ಕೂ ನೂರಾರು ಪಾರಿವಾಳಗಳನ್ನು ಗುಪ್ತಚರ ಸಂಗತಿ ಪ್ರಸಾರ ಮಾಡಲು ಮತ್ತು ಯುದ್ಧಭೂಮಿಯಿಂದ ಸುದ್ದಿಗಳನ್ನು ತಿಳಿಸಲು ಬಳಸಿತು. ಗೂಢಚಾರಿಕೆಗೆ ಪ್ರತಿತಂತ್ರವಾಗಿಯೂ ಇವುಗಳನ್ನು ಬಳಸಲಾಗಿದೆ.

ಜರ್ಮನ್ನರು ತಮ್ಮ ಪಾರಿವಾಳಗಳಿಗೆ ಮಿತ್ರರಾಷ್ಟ್ರಗಳ ಪಾರಿವಾಳಗಳಂತೆ ಕಾಣುವಂತೆ ವೇಷ ಧರಿಸಿ ಪ್ಯಾರಾಚೂಟ್ ಮೂಲಕ ಫ್ರಾನ್ಸ್​ನಲ್ಲಿ ಇಳಿಸಲು ಪ್ರಯತ್ನಿಸಿದ್ದರು. ಈಗ, ಆಧುನಿಕ ಯುದ್ಧ ಪರಿಕರಗಳ ಆಗಮನದೊಂದಿಗೆ, ಪಕ್ಷಿಗಳನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಆಲೋಚನೆಗಳು ಸಾಗಿವೆ. ಡ್ರೋನ್​ಗಳನ್ನು ಉರುಳಿಸಲು ಪಕ್ಷಿಗಳ ಬಳಕೆಯಾಗುತ್ತಿರುವುದು ಇಂತಹ ಒಂದು ಸಾಧ್ಯತೆಯಾಗಿದೆ. ಅಲ್ಲದೆ 1941ರಲ್ಲಿ ಅಮೆರಿಕದ ಪ್ರಮುಖರೊಬ್ಬರು ‘ಪಾರಿವಾಳಗಳು ಯುದ್ಧಗಳನ್ನು ಗೆಲ್ಲಬಲ್ಲವು’ ಎಂದು ಹೇಳಿದ್ದರು.

ಇನ್ನೊಂದು ಮುಖ್ಯ ವಿಚಾರವೆಂದರೆ ಡ್ರೋನ್​ಗಳನ್ನು ಕೆಳಗಿಳಿಸಲು ಹಕ್ಕಿಗಳನ್ನು ಬಳಸಿಕೊಂಡ ಮೊದಲ ಭಾರತೀಯ ಸಂಸ್ಥೆ ಸೇನೆಯಲ್ಲ. 2020ರ ಜುಲೈನಲ್ಲಿ ತೆಲಂಗಾಣ ಸರ್ಕಾರ ವಿಐಪಿ ಕಾರ್ಯಕ್ರಮಗಳಲ್ಲಿ ಅಕ್ರಮ ಡ್ರೋನ್​ಗಳನ್ನು ಕೆಳಗಿಳಿಸಲು ಹದ್ದುಗಳ ಸ್ಕಾವಡ್​ಗೆ ತರಬೇತಿ ನೀಡುವಂತೆ ರಾಜ್ಯ ಗೃಹ ಇಲಾಖೆಗೆ ಆದೇಶಿಸಿತ್ತು. ಗೃಹ ಇಲಾಖೆ ಮೊಯಿನಾಬಾದ್​ನಲ್ಲಿರುವ ಇಂಟಿಗ್ರೇಟೆಡ್ ಇಂಟೆಲಿಜೆನ್ಸ್ ಟ್ರೇನಿಂಗ್ ಅಕಾಡೆಮಿಯಲ್ಲಿ ಇಂತಹ ಪಕ್ಷಿಗಳಿಗೆ ಗರುಡ ಸ್ಕಾವಡ್ ಎಂದು ನಾಮಕರಣ ಮಾಡುವುದಾಗಿ ವರದಿಯಾಗಿತ್ತು. ಇದಕ್ಕಾಗಿ ತರಬೇತುದಾರರನ್ನು ನೇಮಿಸಿಕೊಳ್ಳಲು ಸೂಚಿಸಲಾಗಿತ್ತು.
ಹಾಗೂ ಡ್ರೋನ್​ಗಳನ್ನು ಕೆಳಗಿಳಿಸಲು ಹದ್ದುಗಳನ್ನು ಮೊದಲು ಪರಿಣಾಮಕಾರಿಯಾಗಿ ಬಳಸಿದ ದೇಶ ನೆದರಲೆಂಡ್. 2016ರಲ್ಲಿ ಹದ್ದುಗಳಿಗೆ ತರಬೇತಿ ನೀಡುವ ಡ್ರೋನ್ ಸಂಹರಿಸುವ ತಂತ್ರವನ್ನು ಬಳಸಿದ ನೆದರ್​ಲೆಂಡ್, ‘ಹೈಟೆಕ್ ಸಮಸ್ಯೆಗೆ ಕಡಿಮೆ ತಂತ್ರಜ್ಞಾನದ ಪರಿಹಾರ’ ಎಂದು ಹೇಳಿಕೊಂಡಿತ್ತು.

ಇನ್ನು ಇವುಗಳ ಕಾರ್ಯ ವೈಖರಿ ಬಗ್ಗೆ ನೋಡುವುದಾದರೆ ಈ ಪಕ್ಷಿಗಳು ಪ್ರದೇಶ ವ್ಯಾಪ್ತಿಗೆ ಸೀಮಿತವಾಗಿ ಕಾರ್ಯನಿರ್ವಹಿಸುತ್ತವೆ. ಮೊದಲ ಬಾರಿಗೆ ಕಾರ್ಯಾಚರಣೆಗೆ ಬಿಟ್ಟಾಗ ಅವು ತಮ್ಮದೇ ಆದ ಪ್ರದೇಶದ ವಲಯವನ್ನು ಗುರುತಿಸಿಕೊಳ್ಳುತ್ತವೆ. ಕಾಲಾನಂತರದಲ್ಲಿ, ಈ ಪ್ರದೇಶ ವ್ಯಾಪ್ತಿ ಹೆಚ್ಚುತ್ತ, ಪಕ್ಷಿಯು ದೊಡ್ಡ ಪ್ರದೇಶದ ಕಣ್ಗಾವಲು ಮಾಡಲು ಸಾಧ್ಯವಾಗುತ್ತದೆ. ಪ್ರತಿ ಹಕ್ಕಿ ನಿರ್ವಹಣೆಗೆ ಒಬ್ಬ ಹ್ಯಾಂಡ್ಲರ್ ನಿಯೋಜಿಸಲಾಗಿದೆ. ತರಬೇತಿ ನೀಡಿದ ಮೇಲೆ, ಪಕ್ಷಿಗಳ ಕಾರ್ಯಕ್ಷಮತೆ ಸಂಪೂರ್ಣವಾಗಿ ತೃಪ್ತಿಕರ ಎಂದು ಕಂಡುಬಂದ ನಂತರವೇ ಕಾರ್ಯಾಚರಣೆಗೆ ನಿಯೋಜಿಸಲಾಗುತ್ತದೆ. ಸಶಸ್ತ್ರ ಪಡೆಗಳಲ್ಲಿ ನಾಯಿಗಳ ತರಬೇತಿ ಮತ್ತು ನಿಯೋಜನೆಗೆ ಹೆಸರುವಾಸಿಯಾಗಿರುವ ಆರ್​ವಿಸಿ, ಹದ್ದುಗಳ ಕಣ್ಗಾವಲು ವ್ಯವಸ್ಥೆಯಲ್ಲಿ ಯಶ ಕಾಣಲಿದೆ ಎಂದು ನಿರೀಕ್ಷಿಸಲಾಗಿದೆ.

ಇವುಗಳ ತರಭೇತಿ ಹಾಗೂ ನಿರ್ವಹಣೆ ಹೇಗೆ ನಡೆಯುತ್ತಪ್ಪ ಅಂದ್ರೆ ಈಗ ಡ್ರೋನ್​ಗಳ ಗಾತ್ರ ದೊಡ್ಡದಾಗುತ್ತಿದೆ. ಬೃಹತ್ ಡ್ರೋನ್​ಗಳನ್ನು ಕೆಳಗಿಳಿಸುವುದು ಪಕ್ಷಿಗಳಿಗೆ ಸುಲಭವಲ್ಲ. ಹೀಗಾಗಿ, ಆರ್​ವಿಸಿ ತರಬೇತುದಾರರು ಪಕ್ಷಿಗಳಿಗೆ ಕಣ್ಗಾವಲು ತರಬೇತಿ ಕೂಡ ನೀಡುತ್ತಿದ್ದಾರೆ. ಸರಹದ್ದು ಪ್ರದೇಶಗಳಲ್ಲಿ ಹಾಗೂ ವೈರಿಗಳ ಚಲನವಲನ ಹಾಗೂ ಕಾರ್ಯಾಚರಣೆಗಳ ಮೇಲೆ ನಿಗಾ ವಹಿಸಲು ಈ ಪಕ್ಷಿಗಳನ್ನು ಸನ್ನದ್ಧಗೊಳಿಸುತ್ತಿದ್ದಾರೆ. ಇದಕ್ಕಾಗಿ, ಕಣ್ಗಾವಲು ಪ್ರದೇಶದಲ್ಲಿ ಪಕ್ಷಿಗಳು ಹಾರಾಡುವಾಗ ವಿಡಿಯೋಗಳನ್ನು ರೆಕಾರ್ಡ್ ಆಗುವಂತೆ ಅವುಗಳ ತಲೆಯ ಮೇಲೆ ಕ್ಯಾಮರಾ ಅಳವಡಿಸಲಾಗುತ್ತದೆ.

ಅವು ಕಣ್ಗಾವಲು ಪ್ರದೇಶದಲ್ಲಿ ಹಾರಾಟ ನಡೆಸಿ ವಾಪಸಾದಾಗ ವಿಡಿಯೋದಲ್ಲಿ ಸೆರೆಯಾದ ದೃಶ್ಯಗಳನ್ನು ಸೇನಾ ಸಿಬ್ಬಂದಿ ಪರಿಶೀಲಿಸುತ್ತಾರೆ. ಹೀಗೆ, ಯಾವುದೇ ಅಪಾಯವಿಲ್ಲದಂತೆ ಕಣ್ಗಾವಲನ್ನು ನಡೆಸುವ ವಿಶಿಷ್ಟ ತಂತ್ರ ಇದಾಗಿದೆ. ಪ್ರಸ್ತುತ ಪಕ್ಷಿಗಳಿಗೆ ಅಳವಡಿಸುವ ಈ ಕ್ಯಾಮರಾಗಳು ನೇರ ಪ್ರಸಾರ ಒದಗಿಸಲು ಸಾಧ್ಯವಾಗುವಷ್ಟು ದೊಡ್ಡದಾಗಿಲ್ಲ. ಕ್ರಮೇಣ ಈ ಕ್ಯಾಮರಾಗಳ ಗಾತ್ರ ಹಾಗೂ ಸಾಮರ್ಥ್ಯ ಹೆಚ್ಚಿಸುವ ಮೂಲಕ ವಿಡಿಯೋದ ನೇರ ಪ್ರಸಾರ ಪಡೆದುಕೊಳ್ಳುವ ಆಲೋಚನೆಯೂ ಇದೆ ಎಂದು ಹೇಳುತ್ತಾರೆ ಇದರ ತರಭೇತುದಾರರು.

Leave A Reply

Your email address will not be published.