ಕಾಂತಾರ ಸಿನಿಮಾ ಇಲ್ಲಿನ ಸಂಸ್ಕೃತಿಯನ್ನು ತೋರಿಸುತ್ತೆ – ಅಮಿತ್ ಶಾ
ರಿಷಬ್ ಶೆಟ್ಟಿ, ನಟನೆ ನಿರ್ದೇಶನದ ‘ಕಾಂತಾರ’ ಎಲ್ಲೆಡೆ ಸಂಚಲನ ಮೂಡಿಸಿದೆ. ಜನಮನದಲ್ಲಿ ಅಚ್ಚೊತ್ತಿದೆ ಈ ಸಿನಿಮಾ. ಸೆಲೆಬ್ರಿಟಿಗಳು, ಅಭಿಮಾನಿಗಳು, ಸಿನಿಮಾ ನೋಡಿದ ಪ್ರತಿಯೊಬ್ಬರು ತುಳುನಾಡ ಮಣ್ಣಿನ ಕಲೆಯನ್ನು ಹಾಡಿ ಹೊಗಳುತ್ತಿದ್ದಾರೆ. ಇದೀಗ ರಾಜಕಾರಣಿಗಳೂ ಈ ಸಿನಿಮಾವನ್ನು ಹೊಗಳುತ್ತಿದ್ದು, ಇತ್ತೀಚೆಗೆ ಮಂಗಳೂರಿಗೆ ಆಗಮಿಸಿದ ಅಮಿತ್ ಶಾ ‘ಕಾಂತಾರ’ ಸಿನಿಮಾ ಬಗ್ಗೆ ಮಾತನಾಡಿದ್ದು, ದೈವದ ನಾಡನ್ನು ಕೊಂಡಾಡಿದ್ದಾರೆ.
ಕೇಂದ್ರ ಸಚಿವ ಅಮಿತ್ ಶಾ ಮಂಗಳೂರಿಗೆ ಆಗಮಿಸಿದ್ದು, ಈ ವೇಳೆ ಕಾಂತಾರ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. ತುಳುನಾಡ ಭೂಮಿಯನ್ನು ಕೊಂಡಾಡಿದ್ದಾರೆ. ಪುತ್ತೂರಿನ ಕ್ಯಾಂಪ್ಕೋ ಸುವರ್ಣ ಸಮಾವೇಶದಲ್ಲಿ ಪಾಲ್ಗೊಂಡ ವೇಳೆ ಅಮಿತ್ ಶಾ ಅವರು ‘ಕಾಂತಾರ’ ಸಿನಿಮಾ ಬಗ್ಗೆ ಮಾತನಾಡಿದ್ದು, ಕಾಂತಾರ ಸಿನಿಮಾ ನೋಡಿದ ಮೇಲೆ ದಕ್ಷಿಣ ಕನ್ನಡದ ಸಂಸ್ಕೃತಿ ತಿಳಿಯಿತು ಎಂದಿದ್ದಾರೆ.
ರಾಜ್ಯ ಪ್ರವಾಸದ ವೇಳೆ ಗೃಹ ಸಚಿವ ಅಮಿತ್ ಶಾ ಅವರು ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ ಸಿನಿಮಾವನ್ನು ನೋಡಿದ್ದಾರೆ ಎಂದು ಹೇಳಿದರು. ಅಲ್ಲದೆ, ಮಂಗಳೂರಿನ ಪುಣ್ಯಭೂಮಿಗೆ ನಾನು ನಮಿಸುತ್ತಿದ್ದೇನೆ. ಹಾಗೇ ರಾಣಿ ಅಬ್ಬಕ್ಕಗೆ, ಮಂಗಳಾದೇವಿ, ಕದ್ರಿ ಮಂಜುನಾಥ, ಮಹಲಿಂಗೇಶ್ವರ ಮಂದಿರಕ್ಕೆ ಪ್ರಣಾಮ ಸಲ್ಲಿಸಿದರು. ಮಂಗಳೂರು ತುಂಬಾ ಪವಿತ್ರ ಭೂಮಿ, ಪರಶುರಾಮನ ಸೃಷ್ಟಿಯ ಭೂಮಿಯಿದು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ವಿಶ್ವದಲ್ಲೇ ಪ್ರಸಿದ್ಧವಾಗಿದೆ ಎಂದೂ ಹೇಳಿದರು.
ಈ ಭಾಗದಲ್ಲಿ ಅಡಕೆ, ತೆಂಗು, ರಬ್ಬರ್, ಭತ್ತ ಸೇರಿದಂತೆ ಹಲವು ಬೆಳೆಗಳು ಬೆಳೆಯುತ್ತಾರೆ. ನಾವು ಗುಜರಾತಿ ಜನರು ಸುಪಾರಿ ತಿನ್ನುವಾಗ ಯಾವಾಗಲೂ ಮಂಗಳೂರಿನ ಜನರನ್ನು ನೆನಪಿಸಿಕೊಳ್ಳುತ್ತೇವೆ ಎಂದು ಹೇಳಿದರು. ಮಂಗಳೂರಿನ ಅಡಕೆಯ ಕಾರಣ, ತಿನ್ನುವಾಗ ಇಲ್ಲಿನ ಜನರು ನೆನಪಾಗುತ್ತೀರಿ ಎಂದಿದ್ದು, ಕ್ಯಾಂಪ್ಕೋ ಸಂಸ್ಥಾಪಕ ಸುಬ್ರಾಯ ಭಟ್ಗೆ ಧನ್ಯವಾದ ಎಂದು ಅಮಿತ್ ಶಾ ಹೇಳಿದರು.
ದಕ್ಷಿಣ ಭಾಗದಲ್ಲಿ ಹಲವು ಯೋಜನೆಗಳು ಪ್ರಾಂಭವಾಗುತ್ತಿದೆ. ಕ್ಯಾಂಪ್ಕೋ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸಲು ಯೋಜನೆ ರೂಪಿಸಲಾಗಿದೆ. ಪ್ರಧಾನಿ ಮಂತ್ರಿ ಮತ್ಸ್ಯ ಸಂಪದ ಯೋಜನೆ ಮೂಲಕ ಮೀನುಗಾರರಿಗೆ ನೆರವು ನೀಡಲಾಗಿದೆ ಎಂದು ಹೇಳಿದರು.