ಪ್ರೇಮಿಗಳೇ ನಿಮಗಿದೋ ಗುಡ್ ನ್ಯೂಸ್ ! ಕೌ ಹಗ್ ಡೇ ಕ್ಯಾನ್ಸಲ್, ಸಿಕ್ತು ವ್ಯಾಲಂಟೈನ್ಸ್ ಡೇಗೆ ಗ್ರೀನ್ ಸಿಗ್ನಲ್!!

ಪ್ರೇಮಿಗಳೆ ನಿಮಗೊಂದು ಸಂತಸದ ಸುದ್ದಿ! ನಿಮ್ಮ ದಿನವನ್ನು ನೀವೀಗ ಮತ್ತೆ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದೀರಿ. ಫೆಬ್ರವರಿ 14ರಂದು ನೀವು ಪ್ರೇಮಿಗಳ ದಿನವನ್ನು ಆಚರಿಸಿಕೊಳ್ಳಬಹುದು. ಯಾಕೆಂದರೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ‘ಅಪ್ಪಿಕೋ ದನ – Cow Hug Day ಆಚರಿಸಲು ಕರೆ ನೀಡಿದ್ದ ಮನವಿಯನ್ನು ಹಿಂಪಡೆದಿದೆ. ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಮನವಿಯನ್ನು ಹಿಂಪಡೆಯಲಾಗಿದೆ ಎಂದು ಎಡಬ್ಲ್ಯೂಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಸಕ್ಷಮ ಪ್ರಾಧಿಕಾರ ಮತ್ತು ಮೀನುಗಾರಿಕೆ ಮತ್ತು ಪಶು ಸಂಗೋಪನಾ ಸಚಿವಾಲಯದ ನಿರ್ದೇಶನದಂತೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಕರೆ ನೀಡಿದ್ದ ಅಪ್ಪಿಕೋ ದನ – Cow Hug Day ಆಚರಣೆಯ ಮನವಿಯನ್ನು ಹಿಂಪಡೆಯಲಾಗಿದೆ. ಎಡಬ್ಲ್ಯೂಬಿಐ ಅಪ್ಪಿಕೋ ದನದ ಕರೆಗೆ ವಿಪಕ್ಷಗಳಿಂದ ವಿರೋಧ ಕೂಡ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕೆಲವು ದಿನಗಳ ಹಿಂದಷ್ಟೇ ಫೆಬ್ರವರಿ 14ನ್ನು ಕೌವ್ ಹಗ್ ಡೇ ಎಂದು ಘೋಷಣೆ ಮಾಡಿದ ಸಂದರ್ಭದಲ್ಲಿ, ಈ ಕುರಿತು ಪ್ರತಿಕ್ರಿಯಿಸಿದ್ದ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು, ಗೋವನ್ನು ಸ್ಪರ್ಶಿಸುವುದು ಅಥವಾ ಅಪ್ಪಿಕೊಳ್ಳುವುದರಿಂದ ಅನೇಕ ರೋಗಗಳು ವಾಸಿಯಾಗುತ್ತವೆ ಮತ್ತು ರಕ್ತದೊತ್ತಡದ ಮಟ್ಟವನ್ನು ಸಮತೋಲನದಲ್ಲಿರಿಸಲು ಸಹಾಯ ಮಾಡುತ್ತದೆ. ಗೋವು ಭಾರತೀಯ ಸಂಸ್ಕೃತಿ ಮತ್ತು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಜೀವನ ಸಂರಕ್ಷಣೆ, ಜಾನುವಾರು ಸಂಪತ್ತು ಮತ್ತು ಜೀವವೈವಿಧ್ಯತೆಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದ್ದರು. ಅದಾಗ್ಯೂ ಮಂಡಳಿಯ ಈ ನಿಲುವನ್ನು ಉತ್ತರಪ್ರದೇಶದ ಸಚಿವರು ಸಮರ್ಥಿಸಿಕೊಂಡಿದ್ದರು.

ಎಡಬ್ಲ್ಯೂಬಿಐ ಕರೆ ನೀಡಿದ್ದ ಅಪ್ಪಿಕೋ ದನ ದಿನಕ್ಕೆ ವಿರೋಧ ಕೂಡ ವ್ಯಕ್ತವಾಗಿತ್ತು. ಬಂಗಾಳದ ಟಿಎಂಸಿ ರಾಜ್ಯಸಭಾ ಸಂಸದ ಸಂತುನು ಸೇನ್, ಪ್ರಮುಖ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಅಪ್ಪಿಕೋ ದನ ದಿನ ಆಚರಣೆಗೆ ಕರೆ ನೀಡಿದ್ದಾರೆ. ಇದು ಹುಸಿ ಹಿಂದುತ್ವ ಮತ್ತು ಹುಸಿ ದೇಶಭಕ್ತಿ ಎಂದು ಕಿಡಿಕಾರಿದ್ದರು. ಕಾಂಗ್ರೆಸ್‌ನ ರಜನಿ ಪಾಟೀಲ್ ‘ನಾನು ರೈತ ಸಮುದಾಯದಿಂದಲೇ ಬಂದವನು, ಕೇವಲ ಒಂದು ದಿನವಲ್ಲ ನಾನು ಪ್ರತಿ ದಿನ ನನ್ನ ಹಸುವನ್ನು ಅಪ್ಪಿಕೊಳ್ಳುತ್ತೇನೆ’ ಎಂದಿದ್ದರು.

‘ಇದು ನಿರುದ್ಯೋಗ ಮತ್ತು ಹಣದುಬ್ಬರದಂತಹ ಸಮಸ್ಯೆಗಳ ಕಡೆ ಇರುವ ಗಮನವನ್ನು ಬೇರೆಡೆಗೆ ತಿರುಗಿಸಲು ಮಾತ್ರ’ ಎಂದು ಇದೇ ಭಾವನೆಯನ್ನು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವುತ್ ವ್ಯಕ್ತಪಡಿಸಿದ್ದರು ಇನ್ನು, ಸಿಪಿಐ(ಎಂ) ನಾಯಕ ಎಳಮರಮ್ ಕರೀಂ ಕೂಡ ಅಪ್ಪಿಕೋ ದನ ದಿನವನ್ನು ಹಾಸ್ಯಾಸ್ಪದ ಪರಿಕಲ್ಪನೆ ಮತ್ತು ದೇಶಕ್ಕೆ ಅವಮಾನ ಎಂದು ಕಿಡಿಕಾರಿದ್ದರು.

Leave A Reply

Your email address will not be published.