ನೀವೇನಾದರೂ ಟೇಸ್ಟ್ ನೋಡಿ ಟೂತ್‌ಪೇಸ್ಟ್ ಖರೀದಿ ಮಾಡ್ತೀರಾ?
ಇಡೀ ರಾತ್ರಿ ನಮ್ಮ ಬಾಯಿಯಲ್ಲಿ ಬ್ಯಾಕ್ಟೀರಿಯಾ ಹಾಗೂ ಇನ್ನಿತರ ರೋಗಕಾರಕ ಸೂಕ್ಷ್ಮಾಣುಗಳ ಸಂತತಿ ಹೆಚ್ಚಾಗಿರುತ್ತದೆ ಮತ್ತು ನಾವು ಬೆಳಗಿನ ಸಮಯದಲ್ಲಿ ಬಾಯಿ ತೊಳೆಯದೆ ಏನನ್ನಾದರೂ ಸ್ವೀಕಾರ ಮಾಡಿದರೆ, ನಾವು ತಿನ್ನುವ ಆಹಾರದ ಜೊತೆಗೆ ಬ್ಯಾಕ್ಟೀರಿಯಾಗಳು ಕೂಡ ನಮ್ಮ ದೇಹ ಪ್ರವೇಶ ಮಾಡಿ, ಹಲ್ಲುಗಳಿಗೆ ಹಾಗೂ ವಸಡುಗಳಿಗೆ ತೊಂದರೆ ಉಂಟು ಮಾಡುತ್ತವೆ. ಹಾಗಾಗಿ ಇದರಿಂದ ಹೊರಬರಲು ಒಳ್ಳೆಯ ಟೂತ್ಪೇಸ್ಟ್ ಬಳಕೆ ಮಾಡುವುದು ಅತ್ಯವಶ್ಯಕವಾಗಿದೆ.
ಆದರೆ ಮಾರುಕಟ್ಟೆಯಲ್ಲಿ ಹಲವು ಬಗೆಯ ಟೂತ್‌ಪೇಸ್ಟ್ಗಳು ಲಭ್ಯವಿರುವುದರಿಂದ ನಮಗಿಷ್ಟವಾದ ಟೂತ್‌ಪೇಸ್ಟ್ ಖರೀದಿಸಲು ಹಲವು ಆಯ್ಕೆಗಳು ಕೂಡ ಲಭ್ಯವಿವೆ. ಆದರೆ, ನಮ್ಮ ದಂತಗಳ ಆರೋಗ್ಯಕ್ಕೆ ಎಂತಹ ಟೂತ್‌ಪೇಸ್ಟ್ ಅಗತ್ಯ. ಹಲ್ಲುಗಳು ಆರೋಗ್ಯವಾಗಿರಬೇಕು ಎಂದರೆ ಯಾವ ರೀತಿಯ ಟೂತ್‌ಪೇಸ್ಟ್ ಬಳಸಬೇಕು ಎಂದು ಇಲ್ಲಿ ತಿಳಿಸಲಾಗಿದೆ.
ನೀವು ಅನೇಕ ರೋಗಗಳನ್ನು ತಪ್ಪಿಸಲು ಹಲ್ಲುಗಳನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಬಹಳ ಮುಖ್ಯ. ಹಲ್ಲುಗಳನ್ನು ಸ್ವಚ್ಛಗೊಳಿಸಲು ನಾವು ಬಳಸುವ ಟೂತ್ ಬ್ರಷ್ ಸ್ವಚ್ಛವಾಗಿರಬೇಕು. ಬಾಯಿಯ ಆನಾರೋಗ್ಯದಿಂದ ಹೃದ್ರೋಗ, ಶ್ವಾಸಕೋಶದ ಕಾಯಿಲೆ ಮತ್ತು ಇತರ ಅನೇಕ ಆರೋಗ್ಯ ಸಮಸ್ಯೆಗಳು ಉದ್ಭವಿಸಬಹುದು ಎಂದು ವೈದ್ಯರು ಹೇಳುತ್ತಾರೆ.
ವೈದ್ಯರ ಪ್ರಕಾರ ನಿಮ್ಮ ಹಲ್ಲುಗಳ ಬಣ್ಣವು ಬಿಳಿಯಾಗಿದ್ದರೆ, ಒಸಡುಗಳು ಗುಲಾಬಿ ಮತ್ತು ಆರೋಗ್ಯಕರವಾಗಿ ಕಾಣುತ್ತಿದ್ದರೆ, ಬಾಯಿಯಿಂದ ಯಾವುದೇ ದುರ್ವಾಸನೆ ಬರದಿದ್ದರೆ ಮತ್ತು ಬಿಸಿ ಅಥವಾ ತಣ್ಣನೆಯ ಆಹಾರ ತಿಂದಾಗ ಯಾವುದೇ ಜುಮ್ಮೆನಿಸುವಿಕೆ ಇಲ್ಲದಿದ್ದರೆ ನಿಮ್ಮ ಬಾಯಿಯ ಆರೋಗ್ಯವು ಉತ್ತಮವೆಂದು ಪರಿಗಣಿಸಬಹುದು.
ಆದರೆ ನಮ್ಮಲ್ಲಿ ಕೆಲವರು ಬ್ರಾಂಡ್ ನೋಡಿ ಟೂತ್‌ಪೇಸ್ಟ್ ಖರೀದಿಸಿದರೆ, ಇನ್ನೂ ಕೆಲವರು ಅದರ ರುಚಿಗಾಗಿಯೇ ಟೂತ್‌ಪೇಸ್ಟ್ ಖರೀದಿಸುವುದೂ ಉಂಟು. ಆದರೆ, ಹಲ್ಲುಗಳ ಆರೋಗ್ಯಕ್ಕೆ ರುಚಿ, ಬ್ರಾಂಡ್ ಗಿಂತ ಮುಖ್ಯವಾಗಿ ಫ್ಲೋರೈಡ್ ಯುಕ್ತ ಟೂತ್‌ಪೇಸ್ಟ್ ಬಹಳ ಮುಖ್ಯ ಎನ್ನುತ್ತಾರೆ ಬ್ರಿಟಿಷ್ ದಂತವೈದ್ಯ ಡಾ.ಖಾಲೀದ್ ಕಾಸಿಮ್.
ಫ್ಲೋರೈಡ್-ಮುಕ್ತ ಟೂತ್‌ಪೇಸ್ಟ್‌ಗಳಿಂದ ಮಕ್ಕಳ ಹಲ್ಲುಗಳನ್ನು ಹಲ್ಲುಜ್ಜುವುದು ಹಲ್ಲುಗಳ ಮೇಲಿನ ದಂತಕವಚವನ್ನು ಕಳೆದುಕೊಳ್ಳುವುದಿಲ್ಲ. ಕೆಲವೊಮ್ಮೆ ಮಕ್ಕಳು ಪೇಸ್ಟ್ ಅನ್ನು ನುಂಗುತ್ತಾರೆ. ಆದ್ದರಿಂದ ಇದು ಇತರ ಯಾವುದೇ ಆರೋಗ್ಯ ಪರಿಣಾಮಗಳನ್ನು ಉಂಟುಮಾಡಬಹುದು. ಆದ್ದರಿಂದ ಅವರು ಬಳಸುವ ಟೂತ್‌ಪೇಸ್ಟ್ ಅನ್ನು ಕನಿಷ್ಠ 6 ವರ್ಷ ವಯಸ್ಸಿನವರೆಗೆ ಫ್ಲೋರೈಡ್ ಮುಕ್ತವಾಗಿಡುವುದು ಉತ್ತಮ ಎನ್ನಲಾಗುತ್ತದೆ.
ಯಾವಾಗಲೂ ಫ್ಲೋರೈಡ್ ಯುಕ್ತ ಟೂತ್‌ಪೇಸ್ಟ್ ಅನ್ನು ಬಳಸಬೇಕು. ಇದಕ್ಕೆ ಮುಖ್ಯ ಕಾರಣವೆಂದರೆ, ಫ್ಲೋರೈಡ್ ಹಲ್ಲಿನ ಒಳಗೆ ಮತ್ತು ಹೊರಗೆ ಸಂಗ್ರಹವಾಗಿರುವ ಕೊಳೆಯನ್ನು ಸ್ವಚ್ಛಗೊಳಿಸುವ ಅಂಶವಾಗಿದೆ. ಹಾಗಾಗಿ, ಫ್ಲೋರೈಡ್ ಯುಕ್ತ ಟೂತ್‌ಪೇಸ್ಟ್ ಬಳಸುವುದರಿಂದ ಹಲ್ಲುಗಳು ಸ್ವಚ್ಚವಾಗುವುದರ ಜೊತೆಗೆ ಹೊಳೆಯುತ್ತವೆ ಎನ್ನಲಾಗುತ್ತದೆ.
ದಂತ ವೈದ್ಯರ ಪ್ರಕಾರ, ಫ್ಲೋರೈಡ್ ಯುಕ್ತ ಟೂತ್‌ಪೇಸ್ಟ್ ಹಲ್ಲುಗಳಿಗೆ ಒಳ್ಳೆಯದು. ಆದರೆ, ಮಕ್ಕಳಿಗೆ ಕಡಿಮೆ ಫ್ಲೋರೈಡ್ ಇರುವ ಟೂತ್‌ಪೇಸ್ಟ್ ಅನ್ನು ಬಳಸಬೇಕು. ಮಕ್ಕಳಿಗೆ 1000 ಪಿಪಿಎಂ ಫ್ಲೋರೈಡ್ ಟೂತ್ ಪೇಸ್ಟ್ ನೀಡುವುದು ಉತ್ತಮ. ಅಂತೆಯೇ, ವಯಸ್ಕರಿಗೆ ಸಾಮಾನ್ಯವಾಗಿ 1,350 ರಿಂದ 1,500 ppm ಫ್ಲೋರೈಡ್ ಹೊಂದಿರುವ ಟೂತ್‌ಪೇಸ್ಟ್ ತುಂಬಾ ಪರಿಣಾಮಕಾರಿ ಎಂದು ಮಾಹಿತಿ ನೀಡಿದ್ದಾರೆ.
ನೀವು ಬಳಸುವ ಟೂತ್ಪೇಸ್ಟ್ ನಲ್ಲಿ ಆಯುರ್ವೇದ ಗಿಡಮೂಲಿಕೆ ಪದಾರ್ಥಗಳು ಇರಬೇಕು ಎಂದು ನೀವು ಅಂದುಕೊಂಡರೆ, ಸಾಂಪ್ರದಾಯಿಕವಾದ ಟೂತ್ಪೇಸ್ಟ್ ಬಳಕೆ ಮಾಡಬಹುದು. ಇದರಲ್ಲಿ ಲವಂಗ, ಪುದಿನಾ, ಶುಂಠಿ ಇತ್ಯಾದಿಗಳನ್ನು ಬಳಕೆ ಮಾಡಿರುತ್ತಾರೆ. ಇದರಿಂದ ಹಲ್ಲುಗಳು ಮತ್ತು ಒಸಡು ಸ್ವಚ್ಛವಾಗಿ ಉಳಿಯುವುದರ ಜೊತೆಗೆ ಬಾಯಿಯಲ್ಲಿ ಹೆಚ್ಚು ತಾಜಾತನ ಆವರಿಸುತ್ತದೆ. ಮುಖ್ಯವಾಗಿ ಹೇಳಬೇಕೆಂದರೆ ನಿಮ್ಮ ಹಲ್ಲುಗಳ ಸದೃಢತೆಯಲ್ಲಿ ಕೆಲಸ ಮಾಡುವ ಹಾಗೆ ಪೌಷ್ಟಿಕ ಸತ್ವಗಳು ಇದರಲ್ಲಿ ಸಿಗುತ್ತವೆ. ಇದರಲ್ಲಿರುವ ಶುಂಠಿ, ಪುದಿನಾ ಎಲ್ಲವೂ ಕೂಡ ಬಾಯಿಯಲ್ಲಿನ ತಾಜಾತನವನ್ನು ಹೆಚ್ಚು ಮಾಡುವ ಗುಣಲಕ್ಷಣವನ್ನು ಪಡೆದುಕೊಂಡಿವೆ.
ಮುಖ್ಯವಾಗಿ ಫ್ಲೋರೈಡೀಕರಿಸಿದ ಟೂತ್‌ಪೇಸ್ಟ್ ಅನ್ನು 3 ವರ್ಷ ವಯಸ್ಸಿನವರೆಗೆ ಬಳಸಬೇಡಿ . ಅದಕ್ಕಿಂತ ಮೊದಲು, ನಿಮ್ಮ ಮಗುವಿನ ಹಲ್ಲುಗಳನ್ನು ನೀರು ಮತ್ತು ಮೃದುವಾದ ಬ್ರಿಸ್ಟಲ್ ಟೂತ್ ಬ್ರಷ್‌ನಿಂದ ಸ್ವಚ್ಛಗೊಳಿಸಿ. 3 ವರ್ಷದ ನಂತರ , ಪೋಷಕರು ಹಲ್ಲುಜ್ಜುವುದನ್ನು ಮೇಲ್ವಿಚಾರಣೆ ಮಾಡುವುದು ಉತ್ತಮ.
ಇನ್ನು ಅನೇಕ ಜನರು ಬ್ರಷ್‌ನಲ್ಲಿ ಬಹಳಷ್ಟು ಟೂತ್‌ಪೇಸ್ಟ್ ತೆಗೆದುಕೊಳ್ಳುತ್ತಾರೆ. ಅದು ಬಾಯಿಯನ್ನು ಹೆಚ್ಚು ಸ್ವಚ್ಛಗೊಳಿಸುತ್ತದೆ ಎಂದು ಅವರು ಭಾವಿಸಿರುತ್ತಾರೆ. ಆದರೆ ಇದು ತಪ್ಪು, ಏಕೆಂದರೆ ಹೆಚ್ಚು ಟೂತ್ಪೇಸ್ಟ್ ತೆಗೆದುಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ. ನೀವು ಸ್ವಲ್ಪ ಟೂತ್ಪೇಸ್ಟ್ ಬಳಸಬೇಕು. ಇನ್ನು ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸಲು ಮೃದುವಾದ ಬ್ರಿಸ್ಟಲ್ ಟೂತ್ ಬ್ರಷ್ ಬಳಸಿ. ಅದೇ ರೀತಿ ಪ್ರತಿ 3 ತಿಂಗಳಿಗೊಮ್ಮೆ ಹಲ್ಲುಜ್ಜುವ ಬ್ರಷ್ ಬದಲಾಯಿಸುವುದು ಉತ್ತಮ ಅಭ್ಯಾಸ. ಇದು ಸಹ ಬಾಯಿಯಲ್ಲಿ ಉಂಟಾಗುವ ಅಪಾಯ ತಡೆಯಬಹುದು.