ನಳೀನ್ ಕುಮಾರ್ ‘ಕಟೀಲ್’ ಅನ್ನೋ ಹೆಸರು ಬದಲು ‘ಪಿಟೀಲ್’ ಅಂತಾ ಇಟ್ಟುಕೊಳ್ಳಲಿ | ಬಿಜೆಪಿ ರಾಜ್ಯಾದಕ್ಷರ ಮೇಲೆ ಹರಿಹಾಯ್ದ ಎಚ್ ಡಿ ಕೆ|

ರಾಜ್ಯದಲ್ಲಿ ಚುನಾವಣೆ ಪ್ರಚಾರ ಅಬ್ಬರದಲ್ಲಿಯೇ ನಡೆಯುತ್ತಿದೆ. ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಮೂರು ಪಕ್ಷಗಳು ಒಂದೊಂದು ಹೆಸರೊಂದಿಗೆ ಯಾತ್ರೆ ಕೈಗೊಂಡು ರಾಜ್ಯಾದ್ಯಂತ ಸಂಚರಿಸುತ್ತಿವೆ. ಈ ನಡುವೆ ನಾಯಕರುಗಳ ನಡುವೆ ಆರೋಪ ಪ್ರತ್ಯಾರೋಪಗಳು ಸಾಕಷ್ಟು ಕೇಳಿಬರುತ್ತಿವೆ. ಇದೀಗ ರಾಜ್ಯದ ವಿವಿಧೆಡೆ ಪಂಚರತ್ನ ರಥಯಾತ್ರೆಯೊಂದಿಗೆ ಪ್ರವಾಸ ಕೈಗೊಂಡಿರುವ ಮಾಜಿ ಸಿಎಂ ಎಚ್.ಡಿ.‌ಕುಮಾರಸ್ವಾಮಿ, ಯಾತ್ರೆಯ 62ನೇ ದಿನ ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರವನ್ನು ಪೂರೈಸಿದ್ದಾರೆ. ಈ ವೇಳೆ ಬಿಜೆಪಿ ಕುರಿತು ಕುಟುಕಿ ಅನೇಕ ಅರೋಪಗಳನ್ನು ಮಾಡಿದ್ದಾರೆ. ಅಲ್ಲದೆ ತಮ್ಮ ಬ್ರಾಹ್ಮಣ ಸಿಎಂ ವಿಚಾರ ಹೇಳಿಕೆಯ ಕುರಿತು ಸ್ಪಷ್ಟೀಕರಣ ನೀಡಿದ್ದಾರೆ.

ಹೌದು! ಉತ್ತರ ಕನ್ನಡ ಜಿಲ್ಲೆಯ ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಭರ್ಜರಿ ಪಂಚರತ್ನ ರಥಯಾತ್ರೆ ನಡೆಸಿದ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಬಳಿಕ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಬಿಜೆಪಿ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ ಇತ್ತೀಚೆಗೆ ಅವರು ಬ್ರಾಹ್ಮಣ ಸಿಎಂ ವಿಚಾರವಾಗಿ ಎತ್ತಿದ್ದ ವಿಷಯವೂ ಅಲ್ಲಿ ಪ್ರಸ್ತಾಪ ಆಗಿದೆ. ಈ ಸಲ ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡರಿಂದ ಮೂರು ಸ್ಥಾನ ಗೆಲ್ಲುತ್ತೇವೆ. ನಾವು ಬ್ರಾಹ್ಮಣ ವಿರೋಧಿಯಲ್ಲ. ರಾಮಕೃಷ್ಣ ಹೆಗಡೆ ಅವರನ್ನ ಸಿಎಂ ಮಾಡಿದ್ದು ದೇವೆಗೌಡರು. ನಳೀನ್ ಕುಮಾರ್ ಕಟೀಲ್‌ಗೆ ರಾಜಕೀಯ ಎಲ್ಲಿ ಗೊತ್ತಿದೆ? ಕಟೀಲ್ ಅನ್ನುವ ಹೆಸರು ಬದಲು ಪಿಟೀಲು ಅಂತಾ ಇಟ್ಟುಕೊಳ್ಳಲಿ. ನಾವು ಎಷ್ಟು ಸ್ಥಾನ ಗೆಲ್ಲುತ್ತೇವೆ ಎನ್ನುವುದು ಜನರು ನಿರ್ಧರಿಸುತ್ತಾರೆ. ಬಿಜೆಪಿ ನಾಯಕರು ನಿರ್ಧರಿಸುವುದಲ್ಲ. ಹಿಂದೂ ಧರ್ಮ ರಕ್ಷಣೆ ನಾವು ಮಾಡುತ್ತೇವೆ. ಹಿಂದೂ ಧರ್ಮದ ಹೆಸರಿನಲ್ಲಿ ಅಧಿಕಾರ ಬಂದವರು ಏನು ಮಾಡಿದ್ದಾರೆ ಎನ್ನುವುದು ತಿಳಿದಿದೆ ಎಂದು ಹರಿಹಾಯ್ದರು.

ಗೋಕರ್ಣ ಶ್ರೀ ಮಹಾಬಲೇಶ್ವರ ಕ್ಷೇತ್ರಕ್ಕೆ ಟೆಂಪಲ್ ರನ್ ನಡೆಸುವ ಮೂಲಕ ಜಿಲ್ಲೆಯಲ್ಲಿ ಯಾತ್ರೆಯನ್ನು ಪ್ರಾರಂಭಿಸಿದ ಎಚ್‌ಡಿಕೆ, ಕುಮಟಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಪರ ಭರ್ಜರಿ ಪ್ರಚಾರ ನಡೆಸಿದ್ದಾರೆ. ಅಲ್ಲದೆ ತಮ್ಮ ಬ್ರಾಹ್ಮಣ ವಿರೋಧಿ ಹೇಳಿಕೆಗೆ ಅರ್ಚಕರೊಬ್ಬರಿಂದ ಕ್ಷೇತ್ರದಲ್ಲೇ ವಿರೋಧ ಎದುರಿಸಿದ ಘಟನೆಯೂ ನಡೆಯಿತು. ಸಮುದಾಯದ ಬಗ್ಗೆ ಕುಮಾರಸ್ವಾಮಿ ಹೇಳಿಕೆ ವಿಚಾರ ಸಂಬಂಧಿಸಿ ಅವರನ್ನು ಅಡ್ಡ ಹಾಕಿದ ಅರ್ಚಕ ನರಸಿಂಹ ಉಪಾಧ್ಯ, ನಿಮ್ಮ ಹೇಳಿಕೆಯಿಂದ ನಮಗೆ ಬೇಸರವಾಗಿದೆ. ನಿಮ್ಮ ಕುಟುಂಬದ ಮೇಲೆ ಅಭಿಮಾನವಿದೆ. ನಾವು ನೇರವಾಗಿ ಪ್ರಶ್ನೆ ಮಾಡುತ್ತೇವೆ. ಸ್ಪಷ್ಟೀಕರ‌ಣ ಗೋಕರ್ಣದಲ್ಲೇ ನೀಡುವಂತೆ ಅರ್ಚಕ ಒತ್ತಾಯಿಸಿದರು. ಇದಕ್ಕೆ ಉತ್ತರವಾಗಿ ನಾನು ಬ್ರಾಹ್ಮಣ ವಿರೋಧಿ ಹೇಳಿಕೆ ನೀಡಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಠೀಕರಣ ನೀಡಿದರು. ಅಲ್ಲದೇ, ಅದೇ ಅರ್ಚಕರಿಗೆ ಕರೆ ಮಾಡಿ ತಾನು ನೀಡಿದ ಹೇಳಿಕೆ ಸಂಬಂಧಿಸಿ ನೈಜಾಂಶ ತಿಳಿಸಿದ್ದಲ್ಲದೇ, ಅರ್ಚಕರ ಕುಟುಂಬದ ಕುಶಲೋಪರಿ ವಿಚಾರಿಸಿದರು.

ಇನ್ನು ಈ ಕುರಿತು ಮಧ್ಯಮದವರಿಗೆ ಪ್ರತಿಕ್ರಿಯಿಸಿ ಬ್ರಾಹ್ಮಣ ಸಮುದಾಯಕ್ಕೆ ನಾನು ಸಿಎಂ ಆದಾಗ ಬೆಂಗಳೂರಿನಲ್ಲಿ ಸಮುದಾಯ ಭವನಕ್ಕೆ ಜಾಗ ಕೊಟ್ಟೆ. ಬ್ರಾಹ್ಮಣ ಪ್ರಾಧಿಕಾರ ರಚನೆ ಮಾಡಿದೆ. ಬಿಜೆಪಿ ಏನು ಮಾಡಿದೆ ಎಂದು ಬ್ರಾಹ್ಮಣ ಸಮುದಾಯಕ್ಕೆ ಹೇಳಿ. ನಮಗೆ ಸಾವರ್ಕರ್ ಸಂಸ್ಕೃತಿ‌‌ ಬೇಡ. ಸರ್ವೆ ಜನ ಸುಖಿನೋಭವ ಅನ್ನುವ ಬ್ರಾಹ್ಮಣರು ನಮಗೆ ಬೇಕು ಎಂದು ಹೇಳಿದರು. ರಾಮನನ್ನು ರಾಕ್ಷಸ ಅಂತಾ ಕರಿಯೋಕಾಗುತ್ತಾ?ಶೃಂಗೇರಿಯ ಚಂದ್ರಮೌಳೀಶ್ವರ ದೇವಸ್ಥಾನ ಧ್ವಂಸ ಮಾಡಿದ ಡಿಎನ್‌ಎಗಳ ಬಗ್ಗೆ ಮಾತನಾಡಿದ್ದು. ವಿದ್ಯಾರಣ್ಯರು ಕಟ್ಟಿದ ಈ ದೇವಸ್ಥಾನದ ಮೇಲೆ ದಾಳಿ ಮಾಡಿದವರು ಯಾರು.? ಶಿವಾಜಿ ಹತ್ಯೆ ಮಾಡಿದವರು ಯಾರು.? ಈ ವರ್ಗದ ಜನರನ್ನು ನೀವು ಬ್ರಾಹ್ಮಣರು ಅಂತಾ ಕರಿತೀರಾ..? ಕರಿಯೋಕಾಗುತ್ತಾ..? ಬ್ರಾಹ್ಮಣ ಸಮಾಜದ ಬಗ್ಗೆ ನಾನು ಇಂದಿಗೂ ಗೌರವ ಇಟ್ಟುಕೊಂಡಿದ್ದೇನೆ. ಗೋಕರ್ಣದ ಅರ್ಚರಿಗೂ ಈ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ಅರ್ಚಕರು ಕರೆ ಮಾಡಿದಾಗ ನಾವು ನಿಮ್ಮ ಹಾಗೂ ನಿಮ್ಮ ಕುಟುಂಬದ ಅಭಿಮಾನಿ ಅಂದಿದ್ರು ಎಂದರು.

ಇನ್ನು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಕರ್ನಾಟಕಕ್ಕೆ ಭೇಟಿ ನೀಡುತ್ತಿರುವ ವಿಚಾರ ಸಂಬಂಧಿಸಿ ಮಾತನಾಡಿ, ಅವರು ಏನು ಮಾಡೋಕೆ ಬರುತ್ತಿದ್ದಾರೆ.? ನಾವು ಕಟ್ಟುವ ತೆರಿಗೆ ಹಣ ದಕ್ಷಿಣ ಭಾರತದಿಂದ ಉತ್ತರ ಭಾರತಕ್ಕೆ ಹೋಗುತ್ತಿದೆ.‌ದಕ್ಷಿಣ ಭಾರತದ ದುಡ್ಡನ್ನೆಲ್ಲಾ ಅಭಿವೃದ್ಧಿ ಎಂದು ತೆಗೆದುಕೊಂಡು ಹೋಗಿ ನಮಗೆ ಮೋಸ ಮಾಡ್ತಿದ್ದಾರೆ. ಇವತ್ತು ಯಾವ ಮುಖ ಹೊತ್ತುಕೊಂಡು ಏನು ಚರ್ಚೆ ಮಾಡೋಕೆ ಬರ್ತಿದ್ದಾರೆ.? 2017ರಲ್ಲಿ ಏನು ಹಂಚಿಕೆಯಾಯ್ತು, 2022ರಲ್ಲಿ ಏನು ಹಂಚಿಕೆಯಾಯ್ತು ಎಂದು ಮಾಧ್ಯಮದಲ್ಲೇ ಬಂದಿದೆ. ಬಿಜೆಪಿ ರಾಜ್ಯ ನಾಯಕರೇ ಮೋದಿ, ಅಮಿತ್ ಶಾ ಬಂದು ಸುದರ್ಶನ ಚಕ್ರ ತರ್ತಾರೆ, ಇನ್ನೇನೋ ತರ್ತಾರೆ ಅಂತಾರಲ್ಲಾ, ನೀವು 3 ವರ್ಷ ಮಾಡಿದ್ದೇನು? ಎಂದು ಪ್ರಶ್ನೆಗಳ ಸುರಿಮಳೆಗೈದರು.

ಗೋಕರ್ಣದಿಂದ ಪ್ರಚಾರ ಪ್ರಾರಂಭಿಸಿದ ಮಾಜಿ ಸಿಎಂ, ಗಂಗಾವಳಿ, ಬರ್ಗಿ, ಮಿರ್ಜಾನ, ದೀವಗಿ, ಕಾಗಾಲ, ಅಘನಾಶಿನಿ ಮುಂತಾದೆಡೆ ವಾಹನದ ಮೇಲೆ‌ ನಿಂತು ಪಕ್ಷದ ಪ್ರಣಾಳಿಕೆ ಬಗ್ಗೆ ತಿಳಿಸಿ, ಸೂರಜ್‌ ನಾಯ್ಕ್ ಪರ ಬಹಿರಂಗ ಪ್ರಚಾರ ನಡೆಸಿದರು. ಒಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಎರಡು ಅಭ್ಯರ್ಥಿಗಳ ಪರವಾಗಿ ಕುಮಾರಸ್ವಾಮಿ ಜಿಲ್ಲೆಯಲ್ಲಿ ಪ್ರಚಾರ ನಡೆಸುತ್ತಿದ್ದು, ಇದು ಎಷ್ಟರಮಟ್ಟಿಗೆ ಜೆಡಿಎಸ್‌ಗೆ ಫಲಪ್ರದವಾಗಲಿದೆ ಎಂದು ಕಾದು ನೋಡಬೇಕಷ್ಟೇ.

Leave A Reply

Your email address will not be published.