ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ ಈ ಟಾಪ್ 5 ಕಾರುಗಳಿವು !
ಭಾರತದ ಮಾರುಕಟ್ಟೆಗೆ ಹೊಚ್ಚ ಹೊಸ ಕಾರುಗಳು ಎಂಟ್ರಿ ನೀಡುತ್ತಲೇ ಇವೆ. ಇದೀಗ ಶೀಘ್ರದಲ್ಲಿಯೇ ಮತ್ತಷ್ಟು ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ. ಹೊಸ ಕಾರುಗಳಲ್ಲಿ ಪ್ರಮುಖ ಆವೃತ್ತಿಗಳು ಈ ತಿಂಗಳಾಂತ್ಯಕ್ಕೆ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದ್ದು, ಹೊಸ ಕಾರುಗಳಲ್ಲಿ ಸಾಮಾನ್ಯ ಮಾದರಿಗಳ ಜೊತೆಗೆ ಸಿಎನ್ ಜಿ ಹಾಗೂ ಎಲೆಕ್ಟ್ರಿಕ್ ಕಾರು ಮಾದರಿಗಳು ಬಿಡುಗಡೆಯಾಗುತ್ತಿವೆ. ಒಟ್ಟಿನಲ್ಲಿ ಕಾರು ಖರೀದಿಸುವವ ಪ್ಲಾನ್ ನಲ್ಲಿರುವವರಿಗೆ ಬೆಸ್ಟ್ ಟೈಮ್ ಅಂತಾನೇ ಹೆಳ್ಬೋದು. ಹಾಗಾದ್ರೆ, ಬನ್ನಿ ಇಲ್ಲಿದೆ ನೋಡಿ ನಿಮ್ಮ ಮನ ಮೆಚ್ಚುವ ಹೊಸ ಕಾರುಗಳ ಕಂಪ್ಲೀಟ್ ಡೀಟೇಲ್ಸ್.
ಈ ತಿಂಗಳಾಂತ್ಯಕ್ಕೆ ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳ ಲಿಸ್ಟ್’ನಲ್ಲಿ ಮಾರುತಿ ಸುಜುಕಿ ಫ್ರಾಂಕ್ಸ್ ಕಾರು ಪ್ರಮುಖ ಆವೃತ್ತಿಯಾಗಿದೆ. ಈ ಹೊಸ ಕಾರಿನ ಮಾದರಿಯು ಕಂಪ್ಯಾಕ್ಟ್ ಎಸ್ ಯುವಿ ವಿಭಾಗಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳಲಿದೆ. ಜೊತೆಗೆ ಹೊಸ ಕಾರಿನಲ್ಲಿ ಕಂಪನಿಯು ಒನ್ ಲೀಟರ್ ಪೆಟ್ರೋಲ್ ಮತ್ತು 1.2 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ನೀಡಿದೆ. ಈ ಹೊಸ ಕಾರು ಟಾಟಾ ನೆಕ್ಸಾನ್ ಮತ್ತು ಮಹೀಂದ್ರಾ ಎಕ್ಸ್ ಯುವಿ ತ್ರಿ ಡಬಲ್ ಒ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವ ಎಲ್ಲಾ ಸಾಧ್ಯತೆಗಳಿವೆ. ಹೊಸ ಕಾರಿನ ಆರಂಭಿಕ ಬೆಲೆಯು (ಎಕ್ಸ್ ಶೋರೂಂ ಪ್ರಕಾರ) ರೂ. 8 ಲಕ್ಷದಿಂದ ರೂ. 10 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗಲಿದೆ.
ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಮಾಡೆಲ್ ಕಾರುಗಳ ಪೈಕಿ ಸಿಟ್ರನ್ ನಿರ್ಮಾಣ ಇಸಿ3 ಕಾರು ಸಹ ಪ್ರಮುಖವಾಗಿದೆ. ಇದು ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಬಜೆಟ್ ಇವಿ ಕಾರು ಮಾದರಿಯಾಗಿದೆ. ಹೊಸ ಕಾರು ಮಾದರಿಯು 29.2 ಕೆವಿಹೆಚ್ ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿದ್ದು, ಇದು ಪ್ರತಿ ಚಾರ್ಜ್ ಗೆ ಗರಿಷ್ಠ 320 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿಯು ಖಚಿತಪಡಿಸಿದೆ. ಹೊಸ ಇವಿ ಕಾರಿನ ಆರಂಭಿಕ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 9 ಲಕ್ಷದಿಂದ ರೂ. 12 ಲಕ್ಷ ಬೆಲೆಯಲ್ಲಿ ಮಾರಾಟವಾಗುವ ಸಾಧ್ಯತೆಗಳಿದೆ.
ಲಾಂಚ್ ಆಗಲಿರುವ ಹೊಸ ಕಾರುಗಳ ಪಟ್ಟಿಯಲ್ಲಿ ಟಾಟಾ ಮೋಟಾರ್ಸ್ ನಿರ್ಮಾಣದ ಪಂಚ್ ಇವಿ ಕೂಡಾ ಪ್ರಮುಖವಾಗಿದೆ. ಪ್ರಸ್ತುತ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಮಾತ್ರ ಹೊಂದಿರುವ ಪಂಚ್ ಕಾರು ಮುಂಬರುವ ದಿನಗಳಲ್ಲಿ CNG ಜೊತೆಗೆ ಇದೀಗ ಎಲೆಕ್ಟ್ರಿಕ್ ಕಾರು ಪ್ರಿಯರಿಗೆ ಗುಡ್ ನ್ಯೂಸ್ ನೀಡಿದ್ದು, ಎಲೆಕ್ಟ್ರಿಕ್ ಆವೃತ್ತಿಯಲ್ಲಿಯು ಬಿಡುಗಡೆಯಾಗುವ ಎಲ್ಲಾ ಸಿದ್ದತೆಯನ್ನು ನಡೆಸುತ್ತಿದೆ. ಹೊಸ ಪಂಚ್ ಇವಿ ಕಾರು ಟಿಯಾಗೋ ಇವಿ ಕಾರಿನಲ್ಲಿರುವಂತೆ ಬ್ಯಾಟರಿ ಪ್ಯಾಕ್ ಆಯ್ಕೆ ಪಡೆದುಕೊಳ್ಳಲಿದ್ದು, ಇದು ಪ್ರತಿ ಚಾರ್ಜ್ ಗೆ 280 ರಿಂದ 350 ಕಿ.ಮೀ ಮೈಲೇಜ್ ನೀಡಲಿದೆ. ಇ ವಿ ಕಾರಿನ ಆರಂಭಿಕ ಬೆಲೆಯು (ಎಕ್ಸ್ ಶೋರೂಂ) ರೂ. 10 ಲಕ್ಷದಿಂದ ರೂ. 13 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಲಿದೆ.
ಹೊಸ ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿಯ ಮತ್ತೊಂದು ಆವೃತ್ತಿ ಅಂದರೆ ಮಾರುತಿ ಸುಜುಕಿ ಬ್ರೆಝಾ ಸಿಎನ್ ಜಿಯು ಸೇರ್ಪಡೆಯಾಗಿದೆ. ಈ ಹೊಸ ಕಾರನ್ನು ಮಾರುತಿ ಸುಜುಕಿ ಕಂಪನಿಯು ಈಗಾಗಲೇ ದೆಹಲಿ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದೆ. ಇದೀಗ ಕಂಪನಿಯು ಹೊಸ ಕಾರನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸುತ್ತಿದ್ದು, ಹೊಸ ಕಾರು ಅತ್ಯುತ್ತಮ ಮೈಲೇಜ್ ನೀಡಲಿದೆ ಹಾಗೂ ಪೆಟ್ರೋಲ್ ಮಾದರಿಗಿಂತ ಕೊಂಚ ದುಬಾರಿಯಾಗಿರಲಿದೆ.
ಫೆಬ್ರವರಿಯಲ್ಲಿ ಬಿಡುಗಡೆಯಾಗಲಿರುವ ಕಾರುಗಳ ಪಟ್ಟಿಯಲ್ಲಿ ಟೊಯೊಟಾ ಹೊಸ ಇನೋವಾ ಕ್ರಿಸ್ಟಾ ಕೂಡಾ ಒಂದಾಗಿದೆ. ಸದ್ಯ ಟೊಯೊಟಾ ಕಂಪನಿಯು ಹೊಸ ಇನೋವಾ ಹೈಕ್ರಾಸ್ ಬಿಡುಗಡೆ ಮಾಡಿದ್ದು, ಹೊಸ ಕಾರಿನ ಜೊತೆಗೆ ಈ ಹಿಂದಿನ ಇನೋವಾ ಕ್ರಿಸ್ಟಾ ಕಾರಿನ ಮಾರಾಟವನ್ನು ಸಹ ಮುಂದುವರಿಸಲು ನಿರ್ಧರಿಸಿದೆ. ಹೊಸ ಇನೋವಾ ಹೈಕ್ರಾಸ್ ಕಾರನ್ನು ಪೆಟ್ರೋಲ್ ಮತ್ತು ಹೈಬ್ರಿಡ್ ನಲ್ಲಿ ಮಾರಾಟ ಮಾಡುತ್ತಿರುವ ಟೊಯೊಟಾ ಕಂಪನಿಯು ಹೊಸ ಇನೋವಾ ಕ್ರಿಸ್ಟಾ ಕಾರನ್ನು ನವೀಕೃತ 2.4 ಲೀಟರ್ ಡೀಸೆಲ್ ಎಂಜಿನ್ ನೊಂದಿಗೆ ಮತ್ತೆ ಪರಿಚಯಿಸಲು ಸಿದ್ಧವಾಗಿದೆ. ಹೊಸ ಇನೋವಾ ಕ್ರಿಸ್ಟಾ ಡೀಸೆಲ್ ಕಾರು ಈ ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿದ್ದು, ಇದರ ಜೊತೆಗೆ ಸಾಮಾನ್ಯ ಪೆಟ್ರೋಲ್ ಎಂಜಿನ್ ಆಯ್ಕೆ ಕೂಡಾ ಲಭ್ಯವಿರಲಿದೆ.