40 ಮಂದಿ ನೌಕರರಿಗೆ 70 ಕೋಟಿ ರೂಪಾಯಿ ಬೋನಸ್ !
ಉದ್ಯೋಗಿಗಳಿಗೆ ಪ್ರತಿ ವರ್ಷ ಹತ್ತರಿಂದ 40 ಸಾವಿರ ರೂಪಾಯಿ ಬೋನಸ್ ಕೊಡುವುದನ್ನು ಕೇಳಿದ್ದೇವೆ.ಕೆಲವೆಡೆ ಉಡುಗೊರೆಯನ್ನೂ ಕೊಡುತ್ತಾರೆ.
ಆದರೆ ಚೀನಾದ ಕಂಪೆನಿಯೊಂದು ತನ್ನ ನೌಕರರಿಗೆ ಕೊಟ್ಟಿರುವ ಬೋನಸ್ ಎಲ್ಲರಿಗೂ ಅಚ್ಚರಿ ಉಂಟು ಮಾಡಿದೆ. ಈ ಕಂಪನಿಯಲ್ಲಿರುವ 40 ಉದ್ಯೋಗಿಗಳಿಗೆ ಮಾಲೀಕ 61 ಮಿಲಿಯನ್ ಯುವಾನ್ ಅಂದರೆ ಸುಮಾರು 70 ಕೋಟಿ ರೂಪಾಯಿಗಳ ಬ್ಯಾಂಕ್ ನೋಟುಗಳನ್ನೇ ವಿತರಿಸಿದ್ದಾರೆ.
ಈ ವಿಡಿಯೋ ಕೂಡ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಂಪನಿಯ ವಾರ್ಷಿಕ ಪಾರ್ಟಿಯಲ್ಲಿ ವೇದಿಕೆ ಮೇಲೆ ಸುಮಾರು ಎರಡು ಮೀಟರ್ ಎತ್ತರದಲ್ಲಿ ನೋಟುಗಳ ಬಂಡಲ್ ಅನ್ನು ಜೋಡಿಸಿ ಇಡಲಾಗಿತ್ತು. ಪಾರ್ಟಿ ಮುಗಿಯುತ್ತಿದ್ದಂತೆ ಕಂಪನಿಯ ಉದ್ಯೋಗಿಗಳೆಲ್ಲ ನೋಟುಗಳ ಕಟ್ಟುಗಳೊಂದಿಗೆ ಮನೆಗೆ ತೆರಳಿದ್ದಾರೆ. ಮೂವರು ಅತ್ಯುತ್ತಮ ನೌಕರರಿಗೆ 6 ಕೋಟಿ ರೂಪಾಯಿ ಬೋನಸ್ ಸಿಕ್ಕಿದೆಯಂತೆ, ಉಳಿದ 30 ಕ್ಕೂ ಹೆಚ್ಚು ಮಂದಿಗೆ ತಲಾ 20 ಲಕ್ಷ ರೂಪಾಯಿಗೂ ಅಧಿಕ ಹಣ ದಕ್ಕಿದೆ. ಪೆನಾನ್ ಮೈನ್ ಹೆಸರಿನ ಕಂಪನಿ ಈ ರೀತಿ ಬಂಪರ್ ಬೋನಸ್ ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕಂಪನಿಯ ಆದಾಯ ಕಳೆದ ವರ್ಷಕ್ಕಿಂತ ಶೇ.23 ರಷ್ಟು ಹೆಚ್ಚಾಗಿದೆಯಂತೆ.