

ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆ ಮಾಡಬೇಕು, ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರಿಸಬೇಕೆಂಬುದು ತುಳು ನಾಡಿಗರ ದಶಕಗಳ ಬೇಡಿಕೆಯಾಗಿದೆ. ಈ ಬೇಡಿಕೆಯ ವಿಚಾರವಾಗಿ ಇದೀಗ ತುಳುವರಿಗೆ ಪ್ರಥಮ ಹಂತದಲ್ಲಿ ಜಯ ಸಿಕ್ಕಿದ್ದು, ತುಳು ಭಾಷೆಯನ್ನು ಕರ್ನಾಟಕದ 2ನೇ ಅಧಿಕೃತ ಭಾಷೆಯನ್ನಾಗಿಸಲು ಸರ್ಕಾರ ಒಲವು ತೋರಿ ಮುಂದಾಗಿದೆ. ಅಲ್ಲದೆ ಈ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ನೇತೃತ್ವದ ತಂಡವನ್ನು ರಚಿಸಲಾಗಿದೆ.
ತುಳು ಭಾಷೆಯನ್ನು ರಾಜ್ಯದಲ್ಲಿ ಅಧಿಕೃತ ಭಾಷೆಯಾಗಿ ಘೋಷಿಸುವುದಕ್ಕೂ ಮುನ್ನ ತಜ್ಞರ ಸಮಿತಿ ರಚಿಸಿ ವರದಿ ನೀಡುವಂತೆ ಸರಕಾರವು ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕರಿಗೆ ಸೂಚಿಸಿತ್ತು. ಆಳ್ವಾಸ್‌ನ ಡಾ. ಎಂ. ಮೋಹನ್ ಆಳ್ವ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ತಂಡವು ಸಾಧಕ-ಬಾಧಕಗಳ ಬಗ್ಗೆ ಅಧ್ಯಯನ ನಡೆಸಲಿದೆ.
ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆಯ ಸ್ಥಾನಮಾನ ಘೋಷಿಸಬೇಕೆಂದು ತುಳುವರು, ಅನೇಕ ಸಂಘ, ಸಂಸ್ಥೆಗಳು ದಶಕಗಳಿಂದ ಹೋರಾಟ ಮಾಡುತ್ತ, ಮನವಿ ಮಾಡುತ್ತಾ ಬರುತ್ತಿದ್ದಾರೆ. ಚುನಾವಣೆ ಬೆನ್ನಲ್ಲೇ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಈ ಬಗ್ಗೆ ಕಾನೂನಿನ ಚೌಕಟ್ಟಿನಲ್ಲಿ ಆಗುವ ಸಾಧಕ-ಬಾಧಕಗಳ ಬಗ್ಗೆ ಅಧ್ಯಯನ ಮಾಡಲು ತಜ್ಞರ ಸಮಿತಿ ರಚಿಸಿ ವಾಸ್ತವಾಂಶದ ವರದಿ ಸೂಕ್ತ ಶಿಫಾರಸಿನೊಂದಿಗೆ ಸಲ್ಲಿಸಲು ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕರಿಗೆ ಸೂಚಿಸಲಾಗಿತ್ತು. ಅದರಂತೆ ಅಧ್ಯಯನ ಸಮಿತಿ ರಚಿಸಲಾಗಿದೆ.
ಸೋಮವಾರ ಒಡಿಯೂರಿನಲ್ಲಿಶ್ರೀ ಗುರುದೇವಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ತುಳು ಸಾಹಿತ್ಯ ಸಮ್ಮೇಳನದಲ್ಲಿ, ನೆಲ,ಜಲಕ್ಕೆ ಅಪಾಯ ಉಂಟಾದರೆ, ಕರಾವಳಿ ಕರ್ನಾಟಕದ ಇಡೀ ತುಳು ಸಂಸ್ಕೃತಿಗೂ ಹೊಡೆತ ಬೀಳುತ್ತದೆ ಎಂದು ಸಮ್ಮೇಳನದ ಭಾಗವಾದ ‘ತುಳು ತುಳಿಪು’ ವಿಚಾರ ಮಂಥನದಲ್ಲಿ ಅಭಿಪ್ರಾಯ ವ್ಯಕ್ತವಾಗಿತ್ತು. ಅಲ್ಲದೆ ಈ ಹಿಂದೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕನ್ನಡ ಅಥವಾ ತುಳುವಿನ ಯಾವುದೇ ಸಾಹಿತ್ಯ ಕಾರ್ಯಕ್ರಮಗಳು ನಡೆಯಲಿ, ಅಲ್ಲಿ ಇಂತಹ ವಿಚಾರ ಮುನ್ನಲೆಗೆ ಬಂದು ಸಾಕಷ್ಟು ಚರ್ಚೆಗಳಾಗುತ್ತಿತ್ತು. ಆದರೀಗ ಇವೆಲ್ಲಕ್ಕೂ ಜಯ ಸಿಗುವ ಸಮಯ ಬಂದಿದೆ.













