ಬೆಂಗಳೂರಿನಲ್ಲಿ ವಿಭಿನ್ನ ಶೈಲಿಯ ವಾಹನದ ಓಡಾಟ | ರಾಜ್ಯದಲ್ಲಿಯೇ ಮೊದಲ ಬಾರಿಗೆ ಕಂಡ ವಾಹನ | ಇದರ ಬಗ್ಗೆ ಮಾಹಿತಿ ಕೇಳಿದ್ರೆ ಹುಬ್ಬೇರಿಸ್ತೀರಾ!!
ತಂತ್ರಜ್ಞಾನಗಳಿಂದ ಜಗತ್ತು ಭಾರೀ ವೇಗದಲ್ಲಿ ಮುನ್ನುಗುತ್ತಿದೆ. ಅದಕ್ಕೆ ತಕ್ಕಂತೆ ಹೊಸ ಹೊಸ ಆವಿಷ್ಕಾರಗಳೂ ಆಗುತ್ತಿವೆ. ಅದರಲ್ಲೂ ಸ್ಮಾರ್ಟ್ ಫೋನ್ ಗಳಂತು ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಎಂಟ್ರಿ ನೀಡುತ್ತಿವೆ. ಹಾಗೇ ವಾಹನಗಳಲ್ಲೂ ಪೆಟ್ರೋಲ್, ಡೀಸೆಲ್ ಹಾಗೂ ಎಲೆಕ್ಟ್ರಿಕ್ ಸೇರಿದಂತೆ ಹಲವು ನೂತನ ವಾಹನಗಳು ರಸ್ತೆಗಿಳಿಯುತ್ತಿವೆ. ಸದ್ಯ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಿದೆ. ಈ ಮಧ್ಯೆ ಹೊಚ್ಚ ಹೊಸ ವಿಭಿನ್ನ ಶೈಲಿಯ ವಾಹನವೊಂದು ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದು, ನೋಡುಗರನ್ನು ತನ್ನೆಡೆಗೆ ಸೆಳೆದಿದೆ.
ಬೆಂಗಳೂರಿನ ಜೆಪಿ ನಗರದಲ್ಲಿ ವಿಭಿನ್ನವಾದ ವಾಹನ ಓಡಾಡಿರುವ ದೃಶ್ಯಗಳು ಸೆರೆಯಾಗಿದೆ. ಸದ್ಯ ಈ ವಿಚಾರ ಎಲ್ಲೆಡೆ ಹಬ್ಬಿದೆ. ಈ ವಾಹನ ದೇಶದಲ್ಲಿ ಕಂಡು ಬರುವುದು ತೀರಾ ವಿರಳ. ಇನ್ನು ಈ ವಾಹನ ನೋಡಲು ಹೇಗಿದೆ ಅಂದ್ರೆ, ಇದು ಮೂರು ವೀಲ್ ಹೊಂದಿರುವ ಪೆಟ್ಟಿಗೆ ಆಕಾರದ ಪುಟ್ಟ ವಾಹನವಾಗಿದೆ. ಮುಂಭಾಗ ಎರಡು ಹಾಗೂ ಹಿಂಭಾಗ ಒಂದು ವೀಲ್ ಹೊಂದಿದ್ದು, ಇದರಲ್ಲಿ ಒಬ್ಬರು ಕುಳಿತುಕೊಂಡು ಪ್ರಯಾಣಿಸಬಹುದು. ಸದ್ಯ ಈ ವಾಹನ ಪ್ರೇಕ್ಷಕರನ್ನು ಮೋಡಿ ಮಾಡಿದೆ. ತನ್ನ ಅದ್ಭುತ, ವಿಭಿನ್ನ ವಿನ್ಯಾಸದಿಂದ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಈ ವಿಭಿನ್ನವಾದ ವಾಹನದ ಫೋಟೋ ಹಾಗೂ ವಿಡಿಯೋವನ್ನು ರೇವಂತ್ ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋ ಹಾಗೂ ವಿಡಿಯೋಗಳನ್ನು ನೋಡಿರುವ ನೆಟ್ಟಿಗರು ವಿಭಿನ್ನವಾದ ವಾಹನಕ್ಕೆ ವಿಭಿನ್ನವಾಗೇ ಕಾಮೆಂಟ್ ಮಾಡಿದ್ದಾರೆ. ಕೆಲವರು ಸಕಾರಾತ್ಮಕವಾಗಿ ಕಾಮೆಂಟ್ ಮಾಡಿದ್ದರೆ, ಇನ್ನೂ ಕೆಲವರು ನಕಾರಾತ್ಮಕ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ಹಾಗೇ ಈ ವಾಹನ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಈ ವಾಹನವನ್ನು ‘ವೆಲೊಮೊಬೈಲ್ ವೆಹಿಕಲ್’ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇದನ್ನು ಭಾರತ ದೇಶದಲ್ಲಿ ಬಳಕೆ ಮಾಡುವುದಿಲ್ಲ. ಭಾರತದಲ್ಲಿ ಇಂತಹ ವಾಹನಗಳ ಬಳಕೆಗೆ ಸೂಕ್ತವಾದ ರಸ್ತೆಗಳಿಲ್ಲ. ಹಾಗಾಗಿ ದೇಶದಲ್ಲಿ ಈ ವಾಹನಗಳ ಉಪಯೋಗ ತುಂಬಾ ಕಡಿಮೆ. ಆದರೆ, ಐರೋಪ್ಯ ದೇಶವಾದ ನೆದರ್‌ಲ್ಯಾಂಡ್‌ನಲ್ಲಿ ಇವುಗಳು ಬಳಕೆಯಲ್ಲಿವೆ ಎಂದು ತಿಳಿದುಬಂದಿದೆ. ಹಾಗೂ ಈ ವಾಹನವನ್ನು ನೆದರ್‌ಲ್ಯಾಂಡ್‌ನಿಂದ ಆಮದು ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ.
‘ವೆಲೊಮೊಬೈಲ್ ವೆಹಿಕಲ್’ ಅನ್ನು ಚಾರ್ಲ್ಸ್ ಮೊಚೆಟ್ ಎಂಬ ವಿಜ್ಞಾನಿಯು 1930ರಲ್ಲಿಯೇ ಆವಿಷ್ಕಾರಿಸಿದ್ದನು. ಇದನ್ನು ಬೈಸಿಕಲ್ ಕಾರ್ ಎಂದು ಕೂಡ ಕರೆಯಬಹುದು. ಇದು ಮಾನವ ಹಾಗೂ ವಿದ್ಯುತ್ ಶಕ್ತಿಯಿಂದ ಚಲಿಸುವ ವಾಹನವಾಗಿದ್ದು, ಐರೋಪ್ಯ ದೇಶಗಳಲ್ಲಿ ಹೆಚ್ಚಿನ ಜನರು ಬಳಕೆ ಮಾಡುತ್ತಾರೆ.