ಸ್ತನದ ಗಾತ್ರ ಹೆಚ್ಚಿಸಲು ತಾಳೆಹಣ್ಣು ಸಹಕಾರಿ: ವಿವಾದಾತ್ಮಕ ಹೇಳಿಕೆ ನೀಡಿದ ಯೂಟ್ಯೂಬ್ ವೈದ್ಯೆಗೆ ಸಂಕಷ್ಟ ! ಏನಿದು ಪ್ರಕರಣ

ಸಾಮಾನ್ಯವಾಗಿ ಯಾವುದೇ ರೀತಿಯ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಬಂದರೂ ಕೂಡ ಮೊದಲು ವೈದ್ಯರ ಸಲಹೆ ಕೇಳೋದು ಸಹಜ. ಆದರೆ, ವೈದ್ಯರು ತಪ್ಪು ಸಲಹೆಗಳನ್ನು ನೀಡಿದ ಸಂದರ್ಭದಲ್ಲಿ ವೈದ್ಯ ಹಾಗೂ ರೋಗಿ ಇಬ್ಬರು ಸಂಕಷ್ಟಕ್ಕೀಡಾಗುವ ಪರಿಸ್ಥಿತಿ ಎದುರಾಗುತ್ತದೆ. ಇದೀಗ, ತಮಿಳುನಾಡಿನ ವೈದ್ಯೆ ಕೂಡ ಯೂಟ್ಯೂಬ್ ಮೂಲಕ ವೈದ್ಯಕೀಯ ಸಲಹೆ ನೀಡಿ ಪೇಚಿಗೆ ಸಿಲುಕಿದ ಘಟನೆ ಬೆಳಕಿಗೆ ಬಂದಿದೆ.

ತಮಿಳುನಾಡಿನಲ್ಲಿ ಸಿದ್ಧ ವೈದ್ಯ ಪದ್ಧತಿಯಲ್ಲಿ ಹೆಸರು ಮಾಡಿರುವ ವೈದ್ಯೆ ಶರ್ಮಿಕಾ ಯೂಟ್ಯೂಬ್ ಚಾನಲ್​ನಲ್ಲಿ ಜನರಿಗೆ ತಪ್ಪು ಮಾಹಿತಿ ನೀಡಿರುವ ಆರೋಪ ಹೊತ್ತಿದ್ದು, ಸದ್ಯ ಈ ಪ್ರಕರಣದ ಕುರಿತು ವಿವರಣೆ ನೀಡುವಂತೆ ಭಾರತೀಯ ಔಷಧ ಮತ್ತು ಹೋಮಿಯೋಪತಿ ಇಲಾಖೆ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.

ಮೊಬೈಲ್ ಎಂಬ ಮಾಯಾವಿ ಬಳಕೆ ಹೆಚ್ಚಾದಂತೆ ಏನೇ ಸಮಸ್ಯೆ ಅನುಮಾನ ಎದುರಾದರೂ ಮೊದಲು ಹುಡುಕಾಟ ನಡೆಸುವುದು ಅಂತರ್ಜಾಲ ತಾಣದಲ್ಲಿ ಎಂದರೆ ತಪ್ಪಾಗದು. ಅಷ್ಟೆ ಅಲ್ಲದೆ, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತಮಗೆ ಗೊತ್ತಿರುವ ವಿಷಯಗಳ ಕುರಿತು ಮಾಹಿತಿ ನೀಡುವ ಪ್ಲಾಟ್ ಫಾರಂ ಆಗಿ ಬೆಳೆದಿದ್ದು, ಫೇಸ್​ಬುಕ್​, ಇನ್​​ಸ್ಟಾಗ್ರಾಮ್​, ಯೂಟ್ಯೂಬ್ ಚಾನಲ್‌ಗಳಲ್ಲಿ ಆರೋಗ್ಯ, ಆಹಾರ, ಜೀವನ ಶೈಲಿ, ಶೈಕ್ಷಣಿಕ ಸೇರಿದಂತೆ ಅನೇಕ ವಿಷಯಗಳ ಕುರಿತು ಮಾಹಿತಿ ನೀಡೋದು ಗೊತ್ತಿರುವ ವಿಚಾರವೇ!!! ಸದ್ಯ ಇದೆ ರೀತಿ, ಯೂಟ್ಯೂಬ್ ಚಾನಲ್‌ನಲ್ಲಿ ವೈದ್ಯಕೀಯ ಸಲಹೆ ನೀಡುತ್ತಿದ್ದ ತಮಿಳುನಾಡಿನ ವೈದ್ಯೆಯೊಬ್ಬರು ತಪ್ಪು ಸಲಹೆ ನೀಡಿದ ಆರೋಪವನ್ನು ಎದುರಿಸುತ್ತಿದ್ದಾರೆ.

ಯೂಟ್ಯೂಬ್ ಚಾನಲ್‌ನಲ್ಲಿ ವೈದ್ಯಕೀಯ ಸಲಹೆ ನೀಡುವಲ್ಲಿ ಹೆಸರು ಪಡೆದಿರುವ ಶರ್ಮಿಕಾ, ತಮಿಳುನಾಡಿನ ಬಿಜೆಪಿ ಅಲ್ಪಸಂಖ್ಯಾತ ವಿಭಾಗದ ನಾಯಕಿ ಡೈಸಿ ಚರಣ್ ಅವರ ಪುತ್ರಿ ಎನ್ನಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇವರು ಹಂಚಿಕೊಂಡ ಸಾಕಷ್ಟು ವಿಚಾರಗಳನ್ನು ಜನರು ಮೆಚ್ಚಿಕೊಂಡಿದ್ದು, ಆದರೆ, ತಾಳೆ ಹಣ್ಣು ಹಾಗೂ ಗುಲಾಬ್​ ಜಾಮೂನ್ ವಿಚಾರವಾಗಿ ನೀಡಿರುವ ಸಲಹೆಗಳು ಅವೈಜ್ಞಾನಿಕವಾಗಿವೆ ಎಂಬ ಆರೋಪ ಜೋರಾಗಿ ಕೇಳಿ ಬಂದಿದೆ.

ತಮಿಳುನಾಡಿನಲ್ಲಿ ಸಿದ್ಧ ವೈದ್ಯ ಪದ್ಧತಿಯಲ್ಲಿ ಜನಪ್ರಿಯತೆ ಗಳಿಸಿರುವ ವೈದ್ಯೆ ಶರ್ಮಿಕಾ ಎಂಬುವವರು ಇತ್ತೀಚೆಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಎರಡು ವೈದ್ಯಕೀಯ ಸಲಹೆ ನೀಡಿದ್ದು, ತಾಳೆ ಹಣ್ಣು ತಿಂದರೆ ಮಹಿಳೆಯರ ಸ್ತನಗಳು ದೊಡ್ಡದಾಗುತ್ತವೆ ಎಂದು ಹೇಳಿಕೊಂಡಿದ್ದರು. ಇದರ ಜೊತೆಗೆ, ಒಂದು ಕಪ್ ಗುಲಾಬ್​ ಜಾಮೂನ್ ತಿಂದರೆ 3 ಕೆಜಿ ದೇಹದ ತೂಕ ಹೆಚ್ಚುತ್ತದೆ ಎಂದು ಶರ್ಮಿಕಾ ಸಲಹೆ ನೀಡಿದ್ದರು ಎನ್ನಲಾಗಿದೆ. ಆದರೆ, ವಾಸ್ತವವಾಗಿ ಈ ವಿಚಾರಗಳು ವೈಜ್ಞಾನಿಕವಾಗಿ ಸತ್ಯಕ್ಕೆ ದೂರವಾದ ಮಾತುಗಳು ಎನ್ನಲಾಗಿದ್ದು, ಹೀಗಾಗಿ ವೈದ್ಯೆಗೆ ಸಂಕಷ್ಟ ಎದುರಾಗಿದೆ.

ಈ ಕುರಿತ ವಿಡಿಯೋ ವೈರಲ್ ಕೂಡ​ ಆಗಿ ಶರ್ಮಿಕಾ ಸಲಹೆಗಳ ವಿರುದ್ಧ ಸಾಕಷ್ಟು ಮಂದಿ ಕಿಡಿಕಾರಿದ್ದಾರೆ . ತಪ್ಪು ವೈದ್ಯಕೀಯ ಸಲಹೆ ನೀಡಿರುವುದನ್ನು ಖಂಡಿಸಿ ವೈದ್ಯೆ ಶರ್ಮಿಕಾ ವಿರುದ್ಧ ಕ್ರಮ ಕೈಗೊಳ್ಳುವಂತೆ ತಜ್ಞ ವೈದ್ಯರನ್ನು ಒಳಗೊಂಡಂತೆ ಹಲವರು ಭಾರತೀಯ ವೈದ್ಯಕೀಯ ಸಂಘಕ್ಕೆ ಇ-ಮೇಲ್, ಇತರ ಮಾರ್ಗಗಳ ಮೂಲಕ ದೂರುಗಳನ್ನು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಪ್ರಕರಣದ ಕುರಿತು ಮಾಹಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು, ತಪ್ಪು ವೈದ್ಯಕೀಯ ಸಲಹೆ ನೀಡಿದ ಆರೋಪದ ಮೇಲೆ ಶರ್ಮಿಕಾ ವಿರುದ್ಧ ದೂರುಗಳು ಬಂದ ಬೆನ್ನಲ್ಲೇ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಇದರ ಜೊತೆಗೆ, ಭಾರತೀಯ ಔಷಧ ಮತ್ತು ಹೋಮಿಯೋಪತಿ ಇಲಾಖೆ ಮತ್ತು ತಮಿಳುನಾಡು ಸಿದ್ಧ ವೈದ್ಯಕೀಯ ಮಂಡಳಿಯು ಶರ್ಮಿಕಾ ಅವರಿಗೆ ಜನವರಿ 6ರಂದು ನೋಟಿಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ. ನೋಟಿಸ್ ಜಾರಿಯಾದ ಹಿನ್ನೆಲೆ ಜನವರಿ24ರಂದು ತಮಿಳುನಾಡು ಭಾರತೀಯ ಔಷಧ ಮತ್ತು ಹೋಮಿಯೋಪತಿ ವೈದ್ಯಕೀಯ ನಿರ್ದೇಶಕರ ಕಚೇರಿಗೆ ಶರ್ಮಿಕಾ ಹಾಜರಾಗಿ ವಿವರಣೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯ ಶರ್ಮಿಕಾ ನೀಡಿರುವ ಮೌಖಿಕ ವಿವರಣೆಗಳನ್ನು ಪರಿಶೀಲನೆ ನಡೆಸಲು ಸಮಿತಿಯನ್ನು ಮಾಡಲಾಗಿದ್ದು, ಸಮಿತಿಯ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ, ಈ ವಿಷಯವಾಗಿ ಲಿಖಿತ ವಿವರಣೆ ನೀಡುವಂತೆ ಫೆಬ್ರವರಿ 10ರವರೆಗೆ ಶರ್ಮಿಕಾ ಅವರಿಗೆ ಗಡುವು ನೀಡಲಾಗಿದೆ ಎಂದು ತಿಳಿದು ಬಂದಿದೆ.

Leave A Reply

Your email address will not be published.