ಈ ಜಿಲ್ಲೆಯ ಜನರಿಗೆ ಎಡೆಬಿಡದೆ ಕಾಡ್ತಿದೆ ಇದೊಂದು ವಿಷಪೂರಿತ ಹುಳ! ತೋಟ, ಗದ್ದೆಗಳಿಗೂ ಹೋಗದಂತೆ ಬೆನ್ನು ಬಿದ್ದ ಈ ಮಹಾ ಮಾರಿಯಾದರೂ ಯಾವುದು?

ಕಣ್ಣಿಗೆ ಕಾಣದ ವೈರಸ್ ಒಂದು ಬಂದು ಇಡೀ ಜಗತ್ತನ್ನೇ ನಡುಗಿಸಿಬಿಟ್ಟಿತ್ತು. ಆದರೆ ಈ ಕೊರೋನ ಹೋದ ಬಳಿಕವೂ ಇಲ್ಲೊಂದು ಗ್ರಾಮದ ಜನರಲ್ಲಿ ಅತೀವ ಭಯ ಆವರಿಸಿದೆ. ಇಲ್ಲಿನ ಜನರು ಮನೆಯಿಂದ ಹೊರ ಹೋಗಲು, ತಮ್ಮ ತಮ್ಮ ಜಮೀನು, ತೋಟಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಕಾರಣ ಆ ಒಂದು ಹುಳು. ಅಷ್ಟೇ ಅಲ್ಲದೆ ಅತ್ಯಂತ ವಿಷಕಾರಿ ಹುಳು ಇದು. ಏಳರಿಂದ ಎಂಟು ಕಾಡು ಜೀರಿಗೆ ಹುಳುಗಳು ಕಡಿದರೇ ಸಾವು ಖಚಿತವಂತೆ! ಈ ಊರಲ್ಲಿ ಕಳೆದ ಎರಡು ತಿಂಗಳಲ್ಲಿ ಇಬ್ಬರು ಸಾವನ್ನಪ್ಪಿರುವುದು, ಇನ್ನಷ್ಟು ಭಯ ಪಡುವಂತಾಗಿದೆಯಂತೆ. ಹಾಗಾದ್ರೆ ರೈತರನ್ನೇ ಬೆಚ್ಚಿಬೀಳವಂತೆ ಮಾಡಿರುವ ಈ ಹುಳವಾದರೂ ಯಾವುದು?

ಈ ಹುಳು ಕಡುದ್ರೆ ಯಾವುದೇ ರೀತಿಯ ಚಿಕಿತ್ಸೆ ನೀಡಿದರೂ ಬದುಕಲು ಸಾಧ್ಯವಿಲ್ಲ. ಅರಣ್ಯ ಇಲಾಖೆ ಬಳಿಯೂ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲವಂತೆ. ಇದರ ಕುರಿತು ಮಾತನಾಡಿದ ಜೀವಶಾಸ್ತ್ರದ ಪ್ರಾಧ್ಯಾಪಕರು ಕೂಡ, ಇವು ಹೆಚ್ಚು ಯೂರೋಪ್, ರಷ್ಯಾ, ಅಮೆರಿಕ, ಈಶಾನ್ಯ ಏಷ್ಯಾದಲ್ಲಿ ಕಂಡುಬರುತ್ತವೆ. ಇವು ಕಡಿದರೆ ವಿಪರೀತ ಊತ ಹಾಗು ಬಾವು ಬರುತ್ತದೆ. ಒಂದು ಎರಡು ಕೀಟ ಕಚ್ಚಿದ್ರೇ ವ್ಯಕ್ತಿಗೆ ಏನೂ ಆಗುವುದಿಲ್ಲ. ‌ಅದ್ರೇ ನೂರಾರು ಕೀಟಗಳು ದಾಳಿ ಮಾಡಿದ್ರೇ ಮನುಷ್ಯ ಬದುಕುಳಿಯುವುದು ಕಡಿಮೆ. ವಿಶೇಷ ಅಂದ್ರೇ ಈ ಕೀಟಗಳು ಕಚ್ಚಿದ್ರೇ ವಿಷಕಾರಿ ಮುಳ್ಳನ್ನು ಬಿಡುವುದಿಲ್ಲ. ಇವುಗಳಿಗೆ ತೊಂದರೆ ಮಾಡಿದರೇ ತಕ್ಷಣ ಅಲರ್ಟ್ ಆಗುವ ಏಕೈಕ ಕೀಟ ಇದಾಗಿದೆ. ವ್ಯಕ್ತಿಗೆ ಕಚ್ಚಿದರೇ ಜ್ವರ, ವಾಂತಿ, ತಲೆ ಸುತ್ತು, ತಲೆ ನೋವು ಕಾಣಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಕಾಡು ಜೀರಿಗೆ ಸೇರಿದಂತೆ ಅನೇಕ ಹೆಸರುಗಳಿಂದ ಕರೆಸಿಕೊಳ್ಳುವ ಈ ಕಣಜ ಹುಳು ಗುಬ್ಬಿ ಗೂಡು ಕಟ್ಟುವಂತೆ ಗೂಡು ಕಟ್ಟುವ ಮೂಲಕ ತನ್ನ ವಾಸ ಸ್ಥಳ ಮಾಡಿಕೊಳ್ಳುತ್ತದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣದ ಬಳಿ ಹರೋ ಸಾಗರದ, ಕಂಸಾಗರ, ಎಲೋದಹಳ್ಳಿಯ ಭಾಗದಲ್ಲಿ ಈ ಹುಳುಗಳು ಗೂಡು ಕಟ್ಟಿದೆ. ಹರೋ ಸಾಗರದ ಜನ ನಿತ್ಯ ಭಯದಲ್ಲೇ ಕಾಲ ಕಳೆಯುತ್ತಿದ್ದಾರಂತೆ. ಕಾರಣ ರಾಜ್ಯ ಹೆದ್ದಾರಿಯ ಮರ ಗಿಡಗಳಿಗೆ ಗೂಡು ಕಟ್ಟಿರುವ ಈ ಕಣಜ ಕೀಟ ದಾಳಿ ಮಾಡುತ್ತಿವೆ ಎಂದು ಗ್ರಾಮಸ್ಥರು ಹೇಳ್ತಿದ್ದಾರೆ.

ಹರೋಸಾಗರದ ಹಾಲಸ್ವಾಮಿ ಎಂಬಾತ ಮೊನ್ನೆ ಬೈಕ್ ನಲ್ಲಿ ಹೋಗುತ್ತಿರುವಾಗ ಇದೇ ಹುಳು ಕಡಿದು ಬಿಟ್ಟಿದೆ. ವಿಪರೀತ ಉರಿ. ನಾಲ್ಕು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕವೂ ಕಣ್ಣಿನ ಕೆಳಭಾಗದಲ್ಲಿ ಕಪ್ಪುಗಟ್ಟಿದೆ.ಮತ್ತೊಂದು ಪ್ರಸಂಗದಲ್ಲಿ ಅದೇ ಹುಳು ಕಡಿದು ಪಕ್ಕದ ಯಲೋದಹಳ್ಳಿ ಗ್ರಾಮದ ಶಿವಕುಮಾರ 54 ವರ್ಷದ ವ್ಯಕ್ತಿ ಹಾಗೂ ಕಂಸಾಗರದ ಮಲ್ಲೇಶ್ ಎಂಬ 24 ವರ್ಷದ ಯುವಕ ಕಳೆದ ಎರಡು ತಿಂಗಳಲ್ಲಿ ಸಾವನ್ನಪ್ಪಿದ್ದಾರೆ.

ಇದು ಹೆಚ್ಚಾಗಿ ಅರಣ್ಯದಲ್ಲಿ ಇರುವ ಹುಳು. ಇತ್ತೀಚಿಗೆ ಅಡಕೆ ತೋಟ, ಗ್ರಾಮಗಳ ಸುತ್ತಿಲಿನ ದೊಡ್ಡ ಮರಗಳ ಬಳಿ ಬಂದು ಆಶ್ರಯ ಪಡೆದುಕೊಂಡಿವೆ. ಇದನ್ನ ನೋಡಿದ್ರೆ ಸಾಕು ಜನ ತಲೆ ಮೇಲೆ ಟಾವೆಲ್ ಹಾಕಿಕೊಂಡು ಭಯದಿಂದ ಹೋಗುತ್ತಾರೆ. ಈ ಹಿಂದೆ ಇದರ ಬಗ್ಗೆ ಜನರಿಗೆ ಗೊತ್ತಿತ್ತು. ಆದರೆ ಇದು ಕಡಿದರೇ ಸಾವನ್ನಪ್ಪುತ್ತಾರೆ ಎಂಬುದು ಮಾತ್ರ ಬಹುತೇಕರಿಗೆ ಗೊತ್ತಿಲ್ಲ.

ಕಾಡು ಜೀರಿಗೆ ಹೆಜ್ಜೇನು ಅಥವಾ ಕಾಡುಜೇನು ಎಂಬ ಹೆಸರುಗಳಿಂದ ಗ್ರಾಮೀಣ ಪ್ರದೇಶದ ಜನ ಕರೆಯುತ್ತಾರೆ. ಅರಣ್ಯ ಇಲಾಖೆ ಬಳಿಯೂ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲವಂತೆ. ಆದ್ರೆ ಹಳ್ಳಿಯ ಜನರಿಗೆ ಮಾತ್ರ ಭೀತಿ ಹುಟ್ಟಿಸಿದೆ. ಮೇಲಾಗಿ ಅಮಾಯಕ ಜೀವಗಳು ಬಲಿಯಾಗುತ್ತಿರುವುದು ಜಮೀನು ಹಾಗೂ ತೋಟಗಳಿಗೆ ಹೋಗುವುದು ಕಷ್ಟವಾಗಿದೆ.

ಕೆಲ ಕಡೆ ವಿದ್ಯುತ್ ಕಂಬಕ್ಕೂ ಇಂತಹ ಗೂಡುಗಳು ನೇತುಹಾಕಿಕೊಂಡಿವೆ. ಆದರೆ ಜನ ಅವುಗಳನ್ನ ಸುಟ್ಟು ಹಾಕಿದ್ದಾರೆ. ಅಲ್ಲದೆ ಇದು ರಾತ್ರಿ ವೇಳೆ ಹೆಚ್ಚು ಜಾಗರೂಕವಾಗಿರುತ್ತದಂತೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಅರಣ್ಯದಲ್ಲಿ ಇರುವ ಈ ಹುಳು, ಕಾಡು ಪ್ರಾಣಿಗಳಂತೆ ನಾಡಿನ ಕಡೆ ಲಗ್ಗೆ ಇಟ್ಟಿರುವುದು ನಿಜಕ್ಕೂ ಆತಂಕದ ವಿಚಾರ. ಇದರ ಬಗ್ಗೆ ಅರಣ್ಯ ಹಾಗೂ ಕಂದಾಯ ಇಲಾಖೆ ಜನ ಜಾಗೃತಿ ಮಾಡಬೇಕಿದೆ.

Leave A Reply

Your email address will not be published.