ಮದುವೆಯಾಗಲು ಹೆಣ್ಣು ಹುಡುಕಿಕೊಡುವಂತೆ ಕರೆ ಮಾಡಿದ ಯುವಕ – ಡಿಟೇಲ್ಸ್ ಕಳುಹಿಸು, ಹುಡುಕೋಣ ಅಂದ ಶಾಸಕ

ಶಾಸಕ ಅಂದ ಮೇಲೆ ಶಾಸನ ರೂಪಿಸುವುದು ಮಾತ್ರ ಕೆಲಸ ಅಲ್ಲ, ಅಗತ್ಯ ಬಿದ್ರೆ ಯಾವ ಕೆಲಸ ಕೂಡ ಮಾಡಲು ರೆಡಿ ಇರಬೇಕು. ಹಾಗೆಯೇ ಇಲ್ಲೊಬ್ಬಾತ ತನ್ನ ಕ್ಷೇತ್ರದ ಶಾಸಕನಿಗೆ ಕೆಲಸ ಕೊಟ್ಟಿದ್ದಾನೆ: ” ನನಗೆ ಮದ್ವೆ ಆಗಲು ಹುಡುಗಿ ಹುಡುಕಿ ಕೊಡಿ ಸಾರ್ ” ಎಂದು ಆತ ಕರೆ ಮಾಡಿ ಹೇಳಿದ್ದಾನೆ. ಶಿವಸೇನೆಯ ಉದ್ಧವ್ ಠಾಕ್ರೆ ನೇತೃತ್ವ ಬಣದ ಕಾರ್ಯಕರ್ತನೊಬ್ಬ ಸ್ಥಳೀಯ ಶಾಸಕರಿಗೆ ಕರೆ ಮಾಡಿ, ಮದುವೆಯಾಗಲು ಹುಡುಗಿಯನ್ನು ಹುಡುಕಿ ಕೊಡುವಂತೆ ಮನವಿ ಮಾಡಿದ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಔರಂಗಾಬಾದ್ ಜಿಲ್ಲೆಯ ಸ್ಥಳೀಯ ಶಾಸಕ ಉದಯಸಿಂಗ್ ರಜಪೂತ್ ಹಾಗೂ ಪಕ್ಷದ ಕಾರ್ಯಕರ್ತನ ನಡುವೆ ನಡೆದ ಈ ಸಂಬಂಧಿತ ಸಂಭಾಷಣೆಯ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿ ಹರಿದಾಡ್ತಿದೆ.

ಔರಂಗಾಬಾದ್ ನ ನೆರೆಯ ಖಲ್ತಾಬಾದ್ ಪ್ರದೇಶದ ಕಾರ್ಯಕರ್ತನೊಬ್ಬ ಶಾಸಕನಿಗೆ ಕರೆ ಮಾಡಿ ಮಾತನಾಡುತ್ತಾ ಆ ಶಾಸಕರಿಗೆ ತನಗೆ ಮದುವೆ ಹುಡುಕಿಕೊಡಲು ಮನವಿ ಮಾಡಿದ್ದಾನೆ. ನನಗೆ 8-9 ಎಕರೆ ಜಮೀನು ಇದೆ, ಆದ್ರೂ ಯಾರು ಹೆಣ್ಣು ಕೊಡಲು ಸಿದ್ಧರಿಲ್ಲ. ನಿಮ್ಮ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳಿದ್ದರೆ ನನಗೆ ಮದುವೆಗೆ ಹುಡುಕಿಕೊಡಿ ಎಂದು ತನ್ನ ಬೇಡಿಕೆ ಇಟ್ಟಿದ್ದಾನೆ. ಆಶ್ಚರ್ಯ ಅಂದ್ರೆ ಆತನ ಮನವಿಗೆ ಶಾಸಕ ರಜಪೂತ್ ಕೂಡಾ ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದಾರೆ. ನಿಮ್ಮ ಡಿಟೇಲ್ಸ್‌ನ್ನು ನನಗೆ ಕಳುಹಿಸಿಕೊಡಿ, ಹುಡುಗಿ ಹುಡುಕೋಣ ಎಂದು ತಿಳಿಸಿದ್ದಾರೆ. ಅವರಿಬ್ಬರ ಸಂಭಾಷಣೆಯ ಆಡಿಯೋ ಈಗ ವೈರಲ್ ಆಗಿದೆ.

ಈ ಬಗ್ಗೆ ಶಾಸಕ ಮಾತನಾಡಿ, ಇಲ್ಲಿ ಪರಿಸ್ಥಿತಿ ಅಷ್ಟು ಚೆನ್ನಾಗಿಲ್ಲ. ಗ್ರಾ,ಮದಲ್ಲಿ 2,000 ನಿವಾಸಿಗಳಿದ್ದರೆ, ಅಲ್ಲಿ ಪ್ರತಿ ಗ್ರಾಮದಲ್ಲೂ ನೀವು ಸುಮಾರು 100-150 ಅವಿವಾಹಿತ ಯುವಕರನ್ನು ಕಾಣಬಹುದು. ದೊಡ್ಡ ಜಮೀನುದಾರರಾಗಿದ್ದು, 100 ಎಕರೆ ಜಮೀನು ಇದ್ದರೂ ಮದುವೆಗೆ ಹೆಣ್ಣು ಸಿಗೋದು ಕಷ್ಟ ಆಗಿದೆ. ಹುಡುಗರಿಗೆ ಹುಡುಗಿ ಸಿಗ್ತಿಲ್ಲ. ಇರೋ ಹುಡ್ಗಿರನ್ನು ಹುಡುಕುವುದು ಕಷ್ಟವಾಗಿದೆ. ಇಂತಹ ಅನೇಕ ಕರೆಗಳು ನನಗೆ ಬರುತ್ತಿವೆ ಎಂದು ಶಾಸಕರು ತಿಳಿಸಿದ್ದಾರೆ.

Leave A Reply

Your email address will not be published.