ವಿದ್ಯಾರ್ಥಿನಿಯ ಮೇಲೆ ಬಲತ್ಕಾರ ಪ್ರಕರಣ | ಶಿಕ್ಷೆಯಿಂದ ಪಾರಾಗಲು ಶಿಕ್ಷಕ ಮಾಡಿದ ಮಾಸ್ಟರ್ ಪ್ಲ್ಯಾನ್ , ತನ್ನ ಚಟ್ಟದ ಫೋಟೋ ಕಳುಹಿಸಿ ಸಿಕ್ಕಿ ಬಿದ್ದ ಚಾಲಾಕಿ, ಕೋರ್ಟ್ ನೀಡಿದ ಶಿಕ್ಷೆ ಎಷ್ಟು ಗೊತ್ತೇ ?
ದಿನಂಪ್ರತಿ ಒಂದಲ್ಲ ಒಂದು ಅಪರಾಧ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಅದರಲ್ಲಿಯೂ ಅಪರಾಧ ಎಸಗಿದ ಬಳಿಕ ಆರೋಪಿಗಳು ಪ್ರಕರಣವನ್ನು ಮುಚ್ಚಿ ಹಾಕುವ ಸಲುವಾಗಿ ಖಾಕಿ ಪಡೆಯ ದಿಕ್ಕು ತಪ್ಪಿಸುವ ಜೊತೆಗೆ ಶಿಕ್ಷೆಯಿಂದ ಪಾರಾಗುವ ನಿಟ್ಟಿನಲ್ಲಿ ತಮ್ಮ ಬತ್ತಳಿಕೆಯಿಂದ ನಡೆಸುವ ಪ್ರಯೋಗಗಳು ನೋಡುಗರನ್ನು ಕೌತುಕಕ್ಕೆ ತಳ್ಳಿದರು ಅಚ್ಚರಿಯಿಲ್ಲ. ಅಷ್ಟೆ ಅಲ್ಲ, ಈ ರೀತಿ ಹೀನ ಕೃತ್ಯ ಎಸಗಲು ಸಾಧ್ಯವೇ?? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಇದೇ ರೀತಿ ಆರೋಪಿಯೊಬ್ಬ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ದೆಸೆಯಿಂದ ಚಟ್ಟದ ಮೇಲೆ ಸತ್ತಂತೆ ನಟಿಸಿ ಆ ಫೋಟೋವನ್ನೂ ಕೋರ್ಟ್‌ಗೆ ರವಾನೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ವೃತ್ತಿಯಲ್ಲಿ ಶಿಕ್ಷಕನಾಗಿದ್ದ ನೀರಜ್ ಮೋದಿ ಮಧುರಾ ಸಿಮಾನ್‌ಪುರ ಗ್ರಾಮದವನಾಗಿದ್ದು, 2018ರ ಅಕ್ಟೋಬರ್ 14 ರಂದು ವಿದ್ಯಾರ್ಥಿನಿಯ ಮೇಲೆ ದೌರ್ಜನ್ಯ ಎಸಗಿದ ಹಿನ್ನೆಲೆ ತಾಯಿ ನೀರಜ್ ಮೋದಿ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲು ಮಾಡಿದ್ದು, ತನ್ನ ವಿರುದ್ಧ ಕೇಸ್ ದಾಖಲಾಗಿದ್ದನ್ನು ತಿಳಿದ ಕೂಡಲೇ ಶಿಕ್ಷೆಯಿಂದ ಪಾರಾಗುವ ಸಲುವಾಗಿ ತಾನು ಸತ್ತಂತೆ ಬಿಂಬಿಸಿದ್ದಲ್ಲದೆ, ತನ್ನ ಅಂತ್ಯಸಂಸ್ಕಾರವಾಗಿರುವ ಬಗ್ಗೆಯೂ ಸುಳ್ಳು ಮಾಹಿತಿಯನ್ನು ಕೋರ್ಟ್‌ಗೆ ತಂದೆಯ ಮೂಲಕ ಸಲ್ಲಿಕೆ ಮಾಡಿದ್ದಾನೆ ಎನ್ನಲಾಗಿದೆ. ಚಟ್ಟದ ಮೇಲೆ ಶವದಂತೆ ಇರಿಸಿದ ತನ್ನ ಚಿತ್ರವನ್ನು ತೆಗೆದು ಅದನ್ನು ತಂದೆಯ ಸಹಾಯದಿಂದ ಕೋರ್ಟ್‌ಗೆ ಸಲ್ಲಿಕೆ ಮಾಡಿದ್ದು ಆ ಮೂಲಕ ಕೋರ್ಟ್ ಆರೋಪಿ ಮೃತಪಟ್ಟಿದ್ದಾನೆ ಎಂದುಕೊಳ್ಳಬೇಕು ಎನ್ನುವ ಉದ್ದೇಶ ಹೊಂದಿದ್ದ ಎನ್ನಲಾಗಿದೆ.
ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನೀರಜ್ ತಾನು ಸತ್ತಿರುವುದಾಗಿ ಸಾಬೀತುಪಡಿಸಲು ಮುಂದಾಗಿರುವ ವಿಚಾರ ಸಂತ್ತಸ್ಥ ವಿದ್ಯಾರ್ಥಿನಿಯ ತಾಯಿಗೆ ತಿಳಿದುಬಂದಿದ್ದು, ಹೀಗಾಗಿ ಪಿರಪೇಂಟಿನ ಬಿಡಿಒಗೆ ಅರ್ಜಿ ನೀಡಿ ತಮ್ಮ ಕಚೇರಿಯಿಂದ ತಪ್ಪಾದ ಮರಣ ಪ್ರಮಾಣ ಪತ್ರ ನೀಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಬಿಡಿಒ ತನಿಖೆ ನಡೆಸಿದ ಸಂದರ್ಭ, ನಕಲಿ ಮರಣ ಪ್ರಮಾಣಪತ್ರ ತಯಾರಿಸಿರುವ ವಿಚಾರ ಬಹಿರಂಗವಾಗಿದೆ ಎನ್ನಲಾಗಿದೆ.
2022ರ ಮೇ 21ರಂದು, ಬಿಡಿಓ ಅವರ ಸೂಚನೆಯ ಅನುಸಾರ, ನೀರಜ್ ಮೋದಿ ಅವರ ತಂದೆ ರಾಜಾರಾಂ ಮೋದಿ ವಿರುದ್ಧ ವಂಚನೆ ಪ್ರಕರಣ ದಾಖಲು ಮಾಡಿದ್ದು, ಮರಣ ಪ್ರಮಾಣಪತ್ರವನ್ನು ರದ್ದು ಮಾಡಲಾಗಿದೆ. ಈ ಬಳಿಕ ಪೋಕ್ಸೋ ವಿಶೇಷ ನ್ಯಾಯಾಧೀಶ ಲವಕುಶ್ ಕುಮಾರ್ ಅವರು ಇಡೀ ಪ್ರಕರಣದ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.
ಮರಣ ಪ್ರಮಾಣಪತ್ರವನ್ನು ರದ್ದುಪಡಿಸಿದ ಬಗ್ಗೆ ಮಾಹಿತಿ ಪಡೆದ ಬಳಿಕ, ವಿಶೇಷ ಪೋಕ್ಸೋ ನ್ಯಾಯಾಧೀಶ ಲವ್‌ಕುಶ್ ಕುಮಾರ್ ಅವರು ಇಶಿಪುರ್ ಬರಾಹತ್ ಪೊಲೀಸ್ ಠಾಣೆಗೆ ಸಮನ್ಸ್ ನೀಡಿದ್ದಾರೆ. ಅತ್ಯಾಚಾರದ ಆರೋಪಿಯು ಜೀವಂತವಿದ್ದರು ಕೂಡ ಮರಣ ಪ್ರಮಾಣಪತ್ರ ನೀಡಿರುವ ಬಗ್ಗೆ 2022ರ ಜುಲೈ 23 ರಂದು ಅವರಿಂದ ವರದಿಯನ್ನು ಕೇಳಲಾಗಿದ್ದು, ಪೊಲೀಸ್ ಠಾಣೆಯ ಮುಖ್ಯಾಧಿಕಾರಿ ವರದಿ ನೀಡುವ ಬದಲಿಗೆ ಮೌನ ವಹಿಸಿ ಜಾಣ ಕುರುಡು ನಡೆ ತೋರಿದ್ದಾರೆ. ಇದರಿಂದ ವಿಶೇಷ ನ್ಯಾಯಾಧೀಶರು ನ್ಯಾಯಾಲಯದ ಆದೇಶವನ್ನು ಅವಹೇಳನ ಮಾಡಿದ್ದಕ್ಕಾಗಿ ಠಾಣೆಯ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಆರೋಪಿ ಎಸಗಿದ ಕೃತ್ಯಗಳಿಗೆ ಆತನ ತಂದೆ ಸಾಥ್ ನೀಡಿದ್ದು ಜೊತೆಗೆ ಶವಸಂಸ್ಕಾರದ ಚಿತ್ರವನ್ನು ಕೋರ್ಟ್‌ಗೆ ಸಲ್ಲಿಕೆ ಮಾಡಿದ್ದಾರೆ. ಆ ಬಳಿಕ ನೀರಜ್ ಮೋದಿ ನಾಪತ್ತೆಯಾಗಿದ್ದು , ಇದರ ನಡುವೆ ಪೊಲೀಸರು ಕೂಡ ನೀರಜ್ ಮೋದಿ ಎನ್ನುವ ವ್ಯಕ್ತಿ ಸತ್ತಿದ್ದಾನೆ ಎಂದು ನಂಬಿದ್ದ ಹಿನ್ನೆಲೆ ಅದರ ಅಫಡವಿಟ್ ಅನ್ನು ಕೋರ್ಟ್‌ಗೆ ಸಲ್ಲಿಕೆ ಮಾಡಲಾಗಿತ್ತು ಎನ್ನಲಾಗಿದೆ. ಅಪರಾಧಿಯೇ ಸತ್ತ ಕಾರಣದಿಂದ ಕೋರ್ಟ್ ಈ ಕೇಸ್ ಅನ್ನು ಮುಕ್ತಾಯ ಕೂಡ ಮಾಡಿತ್ತು.
ಈ ಬಳಿಕ ಸತ್ಯ ಬಹಿರಂಗವಾಗಿದ್ದು, ಅಪರಾಧಿ ನೀರಜ್ ಮೋದಿ ಅಕ್ಟೋಬರ್‌ನಲ್ಲಿ ನ್ಯಾಯಾಲಯಕ್ಕೆ ಶರಣಾಗಿದ್ದು, ಹೀಗಾಗಿ ನ್ಯಾಯಾಲಯ ಆರೋಪಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದ್ದು, ದಂಡ ಕಟ್ಟಲು ವಿಫಲರಾದರೆ ಮತ್ತೆ ಇನ್ನೂ ಆರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ತೀರ್ಪು ನೀಡಿದ್ದು, ಇನ್ನು ದಲ್ಸಾ ಮೂಲದ ವಿದ್ಯಾರ್ಥಿನಿಗೆ 3 ಲಕ್ಷ ರೂಪಾಯಿಯ ಪರಿಹಾರವನ್ನೂ ನೀಡವಂತೆ ಕೋರ್ಟ್ ಸೂಚನೆ ನೀಡಿದೆ ಎನ್ನಲಾಗಿದೆ.
ಸರ್ಕಾರದ ಪರವಾಗಿ ಪೋಕ್ಸೋ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನರೇಶ್ ಪ್ರಸಾದ್ ರಾಮ್ ಮತ್ತು ಜೈಕರನ್ ಗುಪ್ತಾ ವಾದ ಮಂಡಿಸಿದ್ದಾರೆ ಎಂದು ತಿಳಿದು ಬಂದಿದೆ.ಪಾಟ್ನಾದಲ್ಲಿ ನಾಲ್ಕು ವರ್ಷದ ಹಿಂದೆ ತನ್ನ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರೆಸಗಿದ್ದು ಸಾಲದೆಂಬಂತೆ ಆ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ದೆಸೆಯಿಂದ ತಾನು ಸತ್ತಂತೆ ಬಿಂಬಿಸುವ ಸಾಕ್ಷ್ಯ ಸೃಷ್ಟಿಸಲು ಯತ್ನಿಸಿದ್ದ ಶಿಕ್ಷಕ ನೀರಜ್ ಮೋದಿಗೆ ಸ್ಥಳೀಯ ಕೋರ್ಟ್ ಸೋಮವಾರ 14 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಪೋಕ್ಸೋ ವಿಶೇಷ ನ್ಯಾಯಾಧೀಶ ಎಡಿಜೆ ಲವಕುಶ್ ಕುಮಾರ್ ಅವರು ಸೋಮವಾರ ಈ ತೀರ್ಪು ನೀಡಿದ್ದಾರೆ ಎನ್ನಲಾಗಿದೆ.