ಸ್ಟ್ಯಾಂಡ್ ಇಲ್ಲದೇ ನಿಲ್ಲೋ ಸೆಲ್ಫ್ ಬ್ಯಾಲೆನ್ಸಿಂಗ್ ಸ್ಕೂಟರ್ ಮಾರುಕಟ್ಟೆಯಲ್ಲಿ | ಇನ್ಮುಂದೆ ಬೀಳೋ ಭಯವಂತೂ ಇರಲ್ಲ
ಸಾಮಾನ್ಯವಾಗಿ ಪ್ರಯಾಣಿಕರು ಯಾವಾಗಲೂ ಸಂಚರಿಸಲು ದ್ವಿಚಕ್ರ ವಾಹನಗಳನ್ನೇ ಹೆಚ್ಚು ಇಷ್ಟ ಪಡುತ್ತಾರೆ. ಏಕೆಂದರೆ ದ್ವಿಚಕ್ರ ವಾಹನಗಳು ದಟ್ಟವಾದ ದಟ್ಟಣೆಯ ಮೂಲಕ ಚಲಿಸಲು ಅತ್ಯಂತ ಸುಲಭವಾಗಿರುತ್ತದೆ. ಆದರೆ, ಸ್ಥಿರತೆಯ ಕೊರತೆಯಿಂದಾಗಿ ಅವುಗಳನ್ನು ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಅಲ್ಲದೇ, ಕೆಲವರಿಗೆ ಬೀಳುವ ಭಯವೂ ಹೆಚ್ಚು. ಇನ್ನೂ ಈ ಚಿಂತೆ ಬೇಡ!.. ಯಾಕೆ ಗೊತ್ತಾ? ಸ್ಟ್ಯಾಂಡ್ ಇಲ್ಲದೇ ನಿಲ್ಲೋ ಸೆಲ್ಫ್ ಬ್ಯಾಲೆನ್ಸಿಂಗ್ ಸ್ಕೂಟರ್ ಮಾರುಕಟ್ಟೆಯಲ್ಲಿ ತನ್ನ ಹವಾ ಸೃಷ್ಟಿಸಲು ರೆಡಿಯಾಗಿದೆ!!
ಹೌದು, ಐಐಟಿ ಪದವೀಧರರ ಗ್ರೂಪ್, ದ್ವಿಚಕ್ರ ವಾಹನಗಳ ಸವಾರರ ಸುರಕ್ಷತೆಗಾಗಿ ಪರಿಹಾರವನ್ನು ಕಂಡುಕೊಂಡಿದೆ. ಈ ಪರಿಹಾರವು ಜನರು ದ್ವಿಚಕ್ರ ವಾಹನವನ್ನು ನೋಡುವ ಮತ್ತು ಸವಾರಿ ಮಾಡುವ ವಿಧಾನವನ್ನೇ ಬದಲಾಯಿಸುತ್ತದೆ. ಈ ಸ್ಕೂಟರ್ ಐಐಟಿ ಪದವೀಧರರ ಕನಸಿನ ಕೂಸಾಗಿದ್ದೂ, ಅವರು ದ್ವಿಚಕ್ರ ವಾಹನ ಸವಾರಿ ಅನುಭವವನ್ನು ಹೆಚ್ಚು ಸುರಕ್ಷಿತವಾಗಿಸಲು ಬಯಸಿದ್ದರು. ದ್ವಿಚಕ್ರ ವಾಹನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವುದು ಕೆಲವರಿಗೆ ಕಷ್ಟವಾಗಬಹುದು. ಅಲ್ಲದೇ ದ್ವಿಚಕ್ರ ವಾಹನದ ಮೇಲೆ ನಿಮಗೆ ಸಾಕಷ್ಟು ವಿಶ್ವಾಸವಿಲ್ಲದಿದ್ದರೆ ಅದು ಅಪಘಾತಗಳಿಗೆ ಕಾರಣವಾಗಬಹುದು ಎಂಬ ಕಾರಣದಿಂದ ಸೆಲ್ಫ್ ಬ್ಯಾಲೆನ್ಸಿಂಗ್ ಸ್ಕೂಟರ್ ಅವರ ಮನಸ್ಸಿಗೆ ಬಂದಿತು. ಸ್ಕೂಟರ್‌ನಲ್ಲಿ ಯಾವುದೇ ಸವಾರ ಇಲ್ಲದಿದ್ದರೂ ಸಹ ತನ್ನನ್ನು ತಾನೇ ಬಾಲೆನ್ಸ್ ಮಾಡಿಕೊಳ್ಳುತ್ತದೆ.
ಲೈಗರ್ ಮೊಬಿಲಿಟಿಯು 2023ರಂದು ದೆಹಲಿಯಲ್ಲಿ ನಡೆಯಲಿರುವ ಆಟೋ ಎಕ್ಸ್‌ಪೋದಲ್ಲಿ ಮೊದಲ ಸೆಲ್ಫ್ ಬ್ಯಾಲೆನ್ಸಿಂಗ್ ಮಾಡುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅನಾವರಣಗೊಳಿಸಲು ಸಿದ್ಧವಾಗಿದೆ. ಸ್ವದೇಶಿ ಎಲೆಕ್ಟ್ರಿಕ್ ಮೊಬಿಲಿಟಿ ಸ್ಟಾರ್ಟ್‌ಅಪ್ ತನ್ನ ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್ ಯಾವುದೇ ಸೈಡ್ ಅಥವಾ ಸೆಂಟರ್ ಸ್ಟ್ಯಾಂಡ್‌ನ ಸಹಾಯವಿಲ್ಲದೆ ಸ್ವತಂತ್ರವಾಗಿ ತಾನೇ ಬ್ಯಾಲೆನ್ಸಿಂಗ್ ಮಾಡಿ ನಿಂತುಕೊಳ್ಳುತ್ತದೆ. ಈ ಸ್ಕೂಟರ್’ನಲ್ಲಿ ಸವಾರರ ಸುರಕ್ಷತೆಯನ್ನು ಹೆಚ್ಚಿಸುವ ವಿಶೇಷ ತಂತ್ರಜ್ಞಾನವಿದ್ದೂ ಗಮನಾರ್ಹವಾಗಿದೆ.
ಜಾಗತಿಕವಾಗಿ ಲಭ್ಯವಿರುವ ಯಾವುದೇ ಸ್ಕೂಟರ್‌ಗಳಿಗೆ ಹೋಲಿಸಿದರೆ ಸೌಕರ್ಯ ಮತ್ತು ಹೆಚ್ಚಿನ ಅನುಕೂಲತೆಯನ್ನು ಈ ಸ್ಕೂಟರ್ ಹೊಂದಿರಲಿದೆ. ಸೆಲ್ಫ್ ಬ್ಯಾಲೆನ್ಸಿಂಗ್ ಲೈಗರ್ ಎಲೆಕ್ಟ್ರಿಕ್ ಸ್ಕೂಟರ್ ಆಧುನಿಕ ವೈಶಿಷ್ಟ್ಯಗಳೊಂದಿಗೆ ರೆಟ್ರೊ ಶೈಲಿಯನ್ನು ಸಂಯೋಜಿಸುತ್ತದೆ. ಮೊದಲ ನೋಟದಲ್ಲಿ, ಇದು ಕ್ಲಾಸಿಕ್ ವೆಸ್ಪಾ ವಿನ್ಯಾಸದಿಂದ ಪ್ರಭಾವಿತವಾಗಿರುತ್ತದೆ. ವಿಶಿಷ್ಟವಾದ ಸ್ಟೈಲಿಂಗ್ ಅಂಶಗಳು ಸ್ಪಷ್ಟವಾಗಿ ಗೋಚರಿಸುತ್ತವೆ.
ಸ್ಕೂಟರ್ ಮುಂಭಾಗದ ಏಪ್ರನ್‌ನಲ್ಲಿ ಡೆಲ್ಟಾ-ಆಕಾರದ LED ಹೆಡ್ ಲ್ಯಾಂಪ್ ಅನ್ನು ಪಡೆಯುತ್ತದೆ, ಆದರೆ ಮೇಲ್ಬಾಗದಲ್ಲಿ ನಯವಾದ ಸಮತಲವಾದ LED ಡೇಟೈಮ್ ರನ್ನಿಂಗ್ ಲೈಟ್ (DRL) ಇದೆ. ಮುಂಭಾಗದ ಕೌಲ್ ದುಂಡಗಿನ ಎಲ್‌ಇಡಿ ಟರ್ನ್ ಇಂಡಿಕೇಟರ್ಸ್ ಗಳನ್ನು ಸಹ ಹೊಂದಿದೆ. ಲೈಗರ್ ಎಲೆಕ್ಟ್ರಿಕ್ ಸ್ಕೂಟರ್ ರೆಟ್ರೊ-ಥೀಮಿನ ಶೈಲಿಯನ್ನು ಅಳವಡಿಸಿಕೊಂಡಿದ್ದೂ, ಆಧುನಿಕ ವೈಶಿಷ್ಟ್ಯಗಳನ್ನು ಪಡೆಯುತ್ತದೆ. ಆಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವಿಶಾಲ ಮತ್ತು ಆರಾಮದಾಯಕ ಸೀಟ್, ಹಿಂಭಾಗದಲ್ಲಿ ಗ್ರಾಬ್ ರೈಲ್, ಎಲ್‌ಇಡಿ ಟೈಲ್‌ಲೈಟ್, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆನ್ಸನ್ ಮತ್ತು ಇತ್ಯಾದಿಗಳನ್ನು ಒಳಗೊಂಡಿವೆ.
ಈ ಹೊಸ ಲೈಗರ್ ಎಲೆಕ್ಟ್ರಿಕ್ ಸ್ಕೂಟರ್ ಬಣ್ಣಗಳ ಆಯ್ಕೆಗಳ ಮಾಹಿತಿಗಳನ್ನು ಕಂಪನಿಯು ಇನ್ನು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಈ ಲೈಗರ್ ಎಲೆಕ್ಟ್ರಿಕ್ ಸ್ಕೂಟರ್ ಬಣ್ಣಗಳ ಆಯ್ಕೆಯಲ್ಲಿ ಒಂದು ಮ್ಯಾಟ್ ರೆಡ್ ಆಗಿರುತ್ತದೆ. ಇದರೊಂದಿಗೆ ಈ ಸ್ಕೂಟರ್ ನಲ್ಲಿ ಅಲಾಯ್ ವೀಲ್ ಗಳನ್ನು ಹೊಂದಿರುತ್ತದೆ. ಇನ್ನು ಪ್ರಮುಖವಾಗಿ ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಹೊಂದಿದ್ದು, ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ನೀಡಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಕ್ರಾಂತಿಕಾರಿ ತಂತ್ರಜ್ಞಾನವನ್ನು ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ತಯಾರಕರು ಹೇಳುತ್ತಾರೆ.
‘ಫೀಟ್ ಆಲ್ವೇಸ್’ ಆನ್‌ಬೋರ್ಡ್ ತಂತ್ರಜ್ಞಾನದಿಂದ ಸವಾರರು ತಮ್ಮ ಪಾದವನ್ನು ಸ್ಕೂಟರ್ ನಲ್ಲೇ ಇಟ್ಟಿಕೊಳ್ಳಬಹುದು. ಅಲ್ಲದೇ ಬ್ಯಾಲೆನ್ಸ್ ತಪ್ಪಿ ಕೆಳಗೆ ಬೀಳುವ ಅಪಾಯವನ್ನು ಕಡಿಮೆ ಮಾಡುತ್ತದೆ. ಸೆಲ್ಫ್ ಬ್ಯಾಲೆನ್ಸಿಂಗ್ ನಿಂದ ಈ ಸ್ಕೂಟರ್ ಸುಲಭವಾಗಿ ಓಡಿಸಬಹುದು. ಈ ತಂತ್ರಜ್ಞಾನವು ಎಲೆಕ್ಟ್ರಿಕ್ ಸ್ಕೂಟರ್‌ನೊಂದಿಗಿನ ಪ್ರಯಾಣದ ಸುರಕ್ಷತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಮತ್ತು ಯಾವುದೇ ಸಾಂಪ್ರದಾಯಿಕ ಸ್ಕೂಟರ್‌ಗೆ ಹೋಲಿಸಿದರೆ ಉತ್ತಮ ಸವಾರ ಸೌಕರ್ಯ ಮತ್ತು ಅನುಕೂಲತೆಯನ್ನು ಖಾತ್ರಿಗೊಳಿಸುತ್ತದೆ.