UIDAIನಿಂದ ಹೊಸ ಸಂವಾದಾತ್ಮಕ ಧ್ವನಿ ಪ್ರತಿಕ್ರಿಯೆ ತಂತ್ರಜ್ಞಾನ ಪ್ರಾರಂಭ | ಈ ಟೋಲ್ ಫ್ರೀ ನಂಬರ್ ಗೆ ಕಾಲ್ ಮಾಡಿ ಪಡೆದುಕೊಳ್ಳಿ ಮಾಹಿತಿ
ಆಧಾರ್ ಕಾರ್ಡ್ ಎಂಬುದು ವ್ಯಕ್ತಿಯ ಗುರುತಾಗಿದ್ದು, ಇದು ಭಾರತದ ಪ್ರತಿಯೊಬ್ಬ ನಾಯಕನಿಗೂ ಕಡ್ಡಾಯವಾಗಿದೆ. ಸರ್ಕಾರಿ ಕೆಲಸದಿಂದ ಹಿಡಿದು ಬ್ಯಾಂಕ್ ವಹಿವಾಟುಗಳ ವರೆಗೂ ಇದರ ಕಾರ್ಯ ಮಹತ್ವದ್ದಾಗಿದೆ. ನಮ್ಮ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿರುತ್ತದೆ ಆಧಾರ್. ಸರ್ಕಾರಿ ಹಾಗೂ ಸರ್ಕಾರೇತರ ಸೌಲಭ್ಯ ಸೇರಿದಂತೆ ಬ್ಯಾಂಕ್ ಖಾತೆ ತೆರೆಯಲೂ ಸಹ ಆಧಾರ್ ಕಡ್ಡಾಯವಾಗಿದೆ. ಹೀಗಾಗಿ ಆಧಾರ್ ಕಾರ್ಡ್ ಒಂದಿದ್ದರೆ ಸಾಕು, ಎಲ್ಲ ದಾಖಲೆಗಳು ಇದ್ದಂತೆಯೇ.
ಇತ್ತೀಚೆಗೆ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಹೊಸ ಸಂವಾದಾತ್ಮಕ ಧ್ವನಿ ಪ್ರತಿಕ್ರಿಯೆ (ಐವಿಆರ್) ತಂತ್ರಜ್ಞಾನ ಪ್ರಾರಂಭಿಸಿದೆ. ಈ ಹೊಸ ಸೇವೆ ಬಗ್ಗೆ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಇದು ಗ್ರಾಹಕರಿಗೆ ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಯಾವುದೇ ಮಾಹಿತಿ ಪಡೆಯಲು ಇರುವ ಉಚಿತ ಸೇವೆಯಾಗಿದ್ದು, ದಿನದ 24 ಗಂಟೆಯೂ ಲಭ್ಯವಿರಲಿದೆ.
ಈ ಐವಿಆರ್ (IVR) ಆಧಾರಿತ ಸೇವೆಗಳನ್ನು ಬಳಸಲು ಗ್ರಾಹಕರು 1947 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಬೇಕು. ಪಿವಿಸಿ ಕಾರ್ಡ್ಗಳು ಹಾಗೂ ಆಧಾರ್ ಕಾರ್ಡ್ ನವೀಕರಣಕ್ಕೆ ಸಂಬಂಧಿಸಿದ ಅಪ್ಡೇಟ್ ಚೆಕ್ ಮಾಡಲು ಅಥವಾ ಎಸ್ ಎಂಎಸ್ ಮೂಲಕ ಯಾವುದೇ ಮಾಹಿತಿ ಪಡೆಯಲು ಕೂಡ ಈ ಸೇವೆ ಬಳಸಿಕೊಳ್ಳಬಹುದು.
ಅಂಚೆ ಮೂಲಕ ಕೂಡ ನೀವು ಆಧಾರ್ ಕಾರ್ಡ್ ಗೆ ಸಂಬಂಧಿಸಿದ ದೂರುಗಳನ್ನು ಯುಐಡಿಎಐ ರಾಷ್ಟ್ರೀಯ ಕಚೇರಿ ಹಾಗೂ ದೇಶಾದ್ಯಂತ ಇರುವ ವಿವಿಧ ಪ್ರಾದೇಶಿಕ ಶಾಖೆಗಳಿಗೆ ಸಲ್ಲಿಕೆ ಮಾಡಬಹುದು. ಹಾಗೆಯೇ ಯುಐಡಿಎಐ AI/ML ಆಧಾರಿತ ಹೊಸ ಚಾಟ್ ವ್ಯವಸ್ಥೆಯನ್ನು ಕೂಡ ಪರಿಚಯಿಸಿದ್ದು, ಇದರ ಮೂಲಕ ನಾಗರಿಕರು ಪಿವಿಸಿ ಕಾರ್ಡ್ ಗಳ ಸ್ಟೇಟಸ್ ಚೆಕ್ ಮಾಡಬಹುದು. ಇನ್ನು help@uidai.gov.in ಸಂಪರ್ಕಿಸುವ ಮೂಲಕ ಮಾಹಿತಿ ಪಡೆಯಬಹುದು ಅಥವಾ ದೂರು ದಾಖಲಿಸಬಹುದಾಗಿದೆ.