ತನಗೆ ತಾನೇ ಚಾಕುವಿನಿಂದ ಚುಚ್ಚಿಕೊಂಡ ರೋಗಿ, ಕೊನೆಗೆ ಚಿಕಿತ್ಸೆ ನೀಡಲು ಬಂದ ವೈದ್ಯರಿಗೂ ಚುಚ್ಚಿಬಿಟ್ಟ! ಯಾಕಾಗಿ?
ನಮಗೇನಾದರೂ ಆರೋಗ್ಯ ಸಮಸ್ಯೆಯಾದರೆ ನೇರವಾಗಿ ವೈದ್ಯರ ಬಳಿ ತೆರಳಿ ಅದಕ್ಕೆ ಮದ್ದು ಪಡೆಯುತ್ತೇವೆ. ಎಂತಹ ಅಪಾಯದ ಸಂದರ್ಭದಲ್ಲೂ ವೈದ್ಯರು ನಮಗೆ ಚಿಕಿತ್ಸೆಯ ಮೂಲಕವೇ ಪುನರ್ಜನ್ಮ ನೀಡುತ್ತಾರೆ. ಅವರನ್ನು ನಾವೆಲ್ಲರೂ ಕೃತಜ್ಞತೆಯ ಭಾವನೆಯಿಂದ ಕಾಣುತ್ತೇವೆ. ಆದರೆ ಇಲ್ಲೊಬ್ಬ ರೋಗಿ ತಾನೂ ಚಾಕುವಿನಿಂದ ಚುಚ್ಚಿಕೊಂಡು, ಚಿಕಿತ್ಸೆ ನೀಡಲು ಬಂದ ವೈದ್ಯರಿಗೂ ಚಾಕುವಿನಿಂದ ಚುಚ್ಚಿರುವ ಘಟನೆ ನಡೆದಿದೆ.
ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಶ್ರೀ ವಸಂತರಾವ್ ನಾಯಕ್ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ರೋಗಿಯೊಬ್ಬ ತನಗೆ ತಾನೇ ಇರಿದುಕೊಂಡು ಬುಧವಾರ ಆಸ್ಪತ್ರೆಗೆ ಬಂದು ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ದಾಖಲಾಗಿದ್ದ. ಗುರುವಾರ ರಾತ್ರಿ ವೈದ್ಯರು ಈತನನ್ನು ಪರೀಕ್ಷಿಸಲು ಬಂದಿದ್ದರು. ಆ ಸಮಯದಲ್ಲಿ ರೋಗಿ ವೈದ್ಯನಿಗೆ ಚಾಕುವಿನಿಂದ ಇರಿದಿದ್ದಾನೆ. ಅವರನ್ನು ರಕ್ಷಿಸಲು ಮುಂದಾದ ಮತ್ತೊಬ್ಬ ವೈದ್ಯರ ಮೇಲೂ ಹಲ್ಲೆ ನಡೆಸಿದ್ದಾನೆ.
ರೋಗಿಯ ಪರೀಕ್ಷಿಸಲು ಬಂದ ವೈದ್ಯರು, ಈ ವೇಳೆ ಆತನನ್ನು ಪ್ರೀತಿಯಿಂದ ಮಾತನಾಡಿಸುತ್ತ ಹಣ್ಣು ತಿನ್ನಲು ಬಯಸುತ್ತೀರಾ? ಎಂದು ಕೇಳಿದ್ದಾರೆ. ಬಳಿಕ ಅವನೇ ಇರಿದುಕೊಂಡಿರುವ ಗಾಯವನ್ನು ಪರೀಕ್ಷಿಸಲು ಮುಂದಾದಾಗ ರೋಗಿಯು ನಿರಾಕರಿಸಿದ್ದಾನೆ. ಎಷ್ಟು ಒತ್ತಾಯ ಮಾಡಿದರು ಚಿಕಿತ್ಸೆ ನೀಡಲು ಬಿಡದೆ ಕೊನೆಗೆ ಚಾಕುವಿನಿಂದ ವೈದ್ಯರಿಗೆ ಇರಿದಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ. ಹಲ್ಲೆ ನಡೆಸಿರುವ ವ್ಯಕ್ತಿ ಮಾನಸಿಕ ಅಸ್ವಸ್ಥ ಎನ್ನಲಾಗಿದೆ. ಸದ್ಯ ಹಲ್ಲೆಗೊಳಗಾದ ವೈದ್ಯರಿಬ್ಬರ ಸ್ಥಿತಿ ಸ್ಥಿರವಾಗಿದೆ, ತೀರ ಗಂಭಿರವಾದಂತಹ ಯಾವುದೇ ಗಾಯಗಳು ಆಗಿಲ್ಲ ಎಂದು ವರದಿಗಳು ತಿಳಿಸಿವೆ