ಮಹಿಳಾ ಅಭ್ಯರ್ಥಿಗಳಿಗೆ ರಾಜ್ಯದಿಂದ ಗುಡ್ ನ್ಯೂಸ್ | ಪೊಲೀಸ್ ನೇಮಕಾತಿಯಲ್ಲಿ ಮೀಸಲಾತಿ | ಎಷ್ಟು? ಇಲ್ಲಿದೆ ಮಾಹಿತಿ
ಮಹಿಳಾ ಅಭ್ಯರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ. ಪೊಲೀಸ್ ನೇಮಕಾತಿಯಲ್ಲಿ ಶೇ.25 ರಷ್ಟು ಮೀಸಲಾತಿ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಬುಧವಾರ ಶಿವಮೊಗ್ಗದಲ್ಲಿ ಜಿಲ್ಲಾ ಒಕ್ಕಲಿಗ ಮಹಿಳಾ ವೇದಿಕೆ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಈ ವೇಳೆ ಮಾತನಾಡಿ, ಮಹಿಳಾ ಅಭ್ಯರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ.
ಮಹಿಳಾ ಸಬಲೀಕರಣದ ಉದ್ದೇಶದಿಂದ ಮಹಿಳಾ ಅಭ್ಯರ್ಥಿಗಳಿಗೆ ಪೊಲೀಸ್ ನೇಮಕಾತಿಯಲ್ಲಿ ಶೇ.25 ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಸದ್ಯ ಬೆಂಗಳೂರಿನಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ತಡೆಗೆ ಕೇಂದ್ರದಿಂದ ಸುಮಾರು 650 ಕೋಟಿ ರೂಪಾಯಿಯನ್ನು ಮೀಸಲಿರಿಸಿದ್ದು, ನಗರ ವ್ಯಾಪ್ತಿಯಲ್ಲಿ ಸರಿ ಸುಮಾರು 3 ಸಾವಿರ ಸ್ಥಳಗಳಲ್ಲಿ ಕಣ್ಗಾವಲಾಗಿ, ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗುತ್ತದೆ ಎಂದು ಸಚಿವರು ಹೇಳಿದರು.
ಕಳೆದ 2019 ರಲ್ಲಿ ರಾಜ್ಯ ಸಚಿವ ಸಂಪುಟ ಸಭೆ, ರಾಜ್ಯದ ಪೊಲೀಸ್ ನೇರ ನೇಮಕಾತಿಯಲ್ಲಿ ಒಂಬತ್ತು ಹುದ್ದೆಗಳಿಗೆ ಶೇ.25ರಷ್ಟು ಕಡ್ಡಾಯ ಮಹಿಳಾ ಮೀಸಲಾತಿ ಕಲ್ಪಿಸಲು ನಿರ್ಧಾರ ಮಾಡಿತ್ತು. ಈ ಹಿಂದೆ ಎರಡು ಹುದ್ದೆಗಳಿಗೆ ಮಾತ್ರ ಶೇ.20 ರಷ್ಟುಮೀಸಲಾತಿ ಕಲ್ಪಿಸಲಾಗಿತ್ತು. ಇದೀಗ ಆ ಎರಡೂ ಹುದ್ದೆಯ ಜೊತೆಗೆ ನೇರ ನೇಮಕಾತಿಯಲ್ಲಿ ಒಟ್ಟು ಒಂಬತ್ತು ಹುದ್ದೆಗಳಿಗೆ ಶೇ.25 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿತ್ತು.
ಹಾಗೇ ಈ ವೇಳೆ, ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಮಾತನಾಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಅರವಿಂದ ಲಿಂಬಾವಳಿ ಅವರನ್ನು ತನಿಖೆಗೆ ಒಳಪಡಿಸಲಾಗುವುದು. ಈ ಬಗ್ಗೆ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.