ಸದ್ಯದಲ್ಲೇ ಕಾಂಗ್ರೆಸ್ ನಿಂದ 150 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಬಿಡುಗಡೆ! ಅಭ್ಯರ್ಥಿಗಳ ಆಯ್ಕೆ ಹೇಗಿದೆ ನೋಡಿ
ಇನ್ನೇನು ಕರ್ನಾಟಕದಲ್ಲಿ ಕೆಲವೇ ತಿಂಗಳಲ್ಲಿ ವಿಧಾನಸಭೆಯ ಚುನಾವಣೆ ನಡೆಯಲಿದೆ. ಚುನಾವಣೆಯ ಕಾವು ರಂಗೇರಿದೆ. ಈಗಾಗಲೇ ರಾಜಕೀಯ ಪಕ್ಷಗಳು ಅಬ್ಬರದಿಂದ ಪ್ರಚಾರವನ್ನು ನಡೆಸುತ್ತಿವೆ. ಹಲವಾರು ಚುನಾವಣಾ ಯಾತ್ರೆಗಳು, ರಾಲಿಗಳು ನಡೆಯುತ್ತಿವೆ. ಪಕ್ಷಗಳು ಕೂಡ ಕ್ಷೇತ್ರವಾರು ತಮ್ಮ ಅಭ್ಯರ್ಥಿಗಳನ್ನು ಹಂಚಿಕೆ ಮಾಡುವ ಕಾರ್ಯದಲ್ಲಿ ಬ್ಯುಸಿಯಾಗಿವೆ.
ಕಾಂಗ್ರೆಸ್ ಈಗಾಗಲೇ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ರೆಡಿಮಾಡಿದ್ದು ಘೋಷಣೆ ಮಾಡಲು ತಯಾರಾಗಿದೆರಾಯಚೂರಿನ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ನಡೆದ ಕಾಂಗ್ರೆಸ್ ಪ್ರಮುಖರ ಸಭೆ ಬಳಿಕ ಮಾತನಾಡಿದ ಕಾಂಗ್ರೆಸ್ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಈ ಕುರಿತು ಮಾಹಿತಿ ನೀಡಿದ್ದು ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜ್ಯದ ಎಲ್ಲೆಡೆ ಪ್ರಮುಖರ ಸಭೆಗಳನ್ನ ನಡೆಸುತ್ತಿದ್ದೇವೆ. ಜನವರಿ 15 ರೊಳಗೆ ಕನಿಷ್ಠ 150 ಕ್ಷೇತ್ರಗಳ ಅಭ್ಯರ್ಥಿ ಹೆಸರು ಘೋಷಣೆ ಮಾಡಲು ತಿರ್ಮಾನಿಸಿದ್ದೇವೆ ಎಂದು ತಿಳಿಸಿದರು.ನಮ್ಮ ಪಕ್ಷದ ಶಿಸ್ತು, ಬದ್ಧತೆ ಒಪ್ಪಿಕೊಂಡು ಬೇರೆ ಪಕ್ಷದಿಂದ ನಮ್ಮ ಪಕ್ಷಕ್ಕೆ ಬಂದರೆ ಯಾರನ್ನು ಬೇಕಾದರೂ ಸೇರಿಸಿಕೊಳ್ಳಲಾಗುತ್ತೆ.
ನಮ್ಮ ಪಕ್ಷ ಸದಾ ತೆರೆದಿರುತ್ತದೆ. ಕೆಪಿಸಿಸಿ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರು ಟಿಕೆಟ್ ಕೊಡುವ ಬಗ್ಗೆ ತೀರ್ಮಾನ ಮಾಡುತ್ತಾರೆ. ಬೇರೆ ಪಕ್ಷದಿಂದ ಬರುವವರನ್ನು ಪರಿಶೀಲನೆ ಮಾಡಲು ವೀರಭದ್ರಪ್ಪ ಅವರ ನೇತೃತ್ವದ ಸಮಿತಿ ಮಾಡಲಾಗಿದೆ. ಕಾಂಗ್ರೆಸ್ ತತ್ವ ಸಿದ್ಧಾಂತ, ನಾಯಕತ್ವ ಒಪ್ಪಿಕೊಂಡು ಬರುವವರನ್ನ ಖಂಡಿತಾ ಸೇರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.ರಾಜ್ಯ ಚುನಾವಣಾ ಸಮಿತಿ ಸಭೆಯ ಮಾರ್ಗಸೂಚಿ ಎಲ್ಲರಿಗೆ ಕೊಡಲಾಗಿದೆ. ಕಲ್ಯಾಣ ಕರ್ನಾಟಕದ 41 ಕ್ಷೇತ್ರಗಳಿಗೆ ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಎಲ್ಲಾ ಮುಖಂಡರ ಅಭಿಪ್ರಾಯ ಪಡೆದು ಅಂತಿಮವಾಗಿ ಮೂವರ ಪಟ್ಟಿ ಸಲ್ಲಿಸಲಾಗುವುದು. ಒಂದೊಂದು ಕ್ಷೇತ್ರದಿಂದ ಮೂವರು ಆಕಾಂಕ್ಷಿಗಳ ಹೆಸರನ್ನ ರಾಜ್ಯ ಚುನಾವಣಾ ಸಮಿತಿ ಹಾಗೂ ಎಐಸಿಸಿಗೆ (AICC) ಕಳುಹಿಸುತ್ತೇವೆ ನಂತರ ಅದರಲ್ಲಿ ಒಬ್ಬರನ್ನು ಆಯ್ಕೆಮಾಡಲಾಗುವುದು ಎಂದಿದ್ದಾರೆ.
ಮಸ್ಕಿ ಕ್ಷೇತ್ರದಲ್ಲಿ ಬಸನಗೌಡ ತುರವಿಹಾಳ ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಉಳಿದ ಕ್ಷೇತ್ರದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಆಕಾಂಕ್ಷಿಗಳಿದ್ದಾರೆ. ಅರ್ಹ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಿದೆ. ಬಿ ಫಾರಂ ಒಬ್ಬರಿಗೆ ಮಾತ್ರ ಕೊಡಬೇಕಾಗುತ್ತದೆ. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ, ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಲು ಒಪ್ಪಿದ್ದಾರೆ. ಭ್ರಷ್ಟ ಬಿಜೆಪಿ ಸರ್ಕಾರವನ್ನ ಕಿತ್ತೊಗೆಯುವ ಸಂಕಲ್ಪವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಿದ್ದಾರೆ. ಹೀಗಾಗಿ ಪಕ್ಷಕ್ಕೆ ಯಾವುದೇ ಪರಿಣಾಮ ಆಗುವುದಿಲ್ಲ. ಪಕ್ಷ ಅಧಿಕಾರಕ್ಕೆ ಬಂದಾಗ ಸಂಘಟನೆ ಮಾಡಿದವರಿಗೆ ಅರ್ಹತೆಗೆ ತಕ್ಕ ಸ್ಥಾನಮಾನ ನೀಡುತ್ತೇವೆ ಎಂದು ತಿಳಿಸಿದ್ದಾರೆ.