ಸಾರ್ವಜನಿಕರೇ ಗಮನಿಸಿ : ಬಿಎಫ್7 ರೋಗ ಲಕ್ಷಣಗಳು, ಮುನ್ನೆಚ್ಚರಿಕೆ ಕ್ರಮದ ಕುರಿತು ಇಲ್ಲಿದೆ ಮಾಹಿತಿ
ಕೋರೋನಾ ಮಹಾಮಾರಿಯ ಅಟ್ಟಹಾಸ ಕೊಂಚ ತಗ್ಗಿದೆ ಎಂಬ ನಿಟ್ಟುಸಿರು ಬಿಡುತ್ತಿದ್ದ ಜನತೆಗೆ ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಮತ್ತೊಮ್ಮೆ ಕೋರೋನಾ ತಾಂಡವವಾಡುವ ಲಕ್ಷಣಗಳು ಕಂಡು ಬರುತ್ತಿರುವ ಹಿನ್ನೆಲೆ ಸರ್ಕಾರ ಮುಂಜಾಗ್ರತ ಕ್ರಮ ಕೈಗೊಳ್ಳಲು ಮುಂದಾಗಿದೆ.
ಚೀನಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಕಾರಣ ಭಾರತದಲ್ಲಿ ಕೂಡ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಅಣಿಯಾಗಿದೆ. ಬಿಎಫ್7 ಓಮಿಕ್ರಾನ್ ರೂಪಾಂತರದ ಬಿಎ5ನ ಉಪ-ವಂಶ ಎನ್ನಲಾಗುತ್ತಿದೆ.
ಪಿಟಿಐ ಮಾಹಿತಿ ಅನುಸಾರ ಇದು ಕಡಿಮೆ ಅವಧಿಯಲ್ಲಿ ಹೆಚ್ಚು ಹರಡುವ ರೂಪಾಂತರವಾಗಿದ್ದು, ಮರು-ಸೋಂಕನ್ನು ಹುಟ್ಟಿಸುವ ಹೆಚ್ಚಿನ ಸಾಮರ್ಥ್ಯವನ್ನು ಒಳಗೊಂಡಿವೆ. ಇದಲ್ಲದೆ, ಲಸಿಕೆ ಹಾಕಿದ ವ್ಯಕ್ತಿಗಳಿಗೆ ಕೂಡ ಸೋಂಕು ಬರುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.
ಚೀನಾ ಮತ್ತೊಂದು ಕೋವಿಡ್-19 ಅಲೆಗೆ ಸಿಲುಕಿದ್ದು, ಚೀನಾದಲ್ಲಿ ಪ್ರಸ್ತುತ ಓಮಿಕ್ರಾನ್ ರೂಪಾಂತರಿ ಬಿಎಫ್7 ವೇಗವಾಗಿ ಹರಡುತ್ತಿದೆ. ಭಾರತದಲ್ಲಿ ಇದುವರೆಗೆ ಬಿಎಫ್7 ರೂಪಾಂತರದ ನಾಲ್ಕು ಪ್ರಕರಣಗಳು ಪತ್ತೆಯಾಗಿದ್ದು, ಗುಜರಾತ್‌ನಲ್ಲಿ ಎರಡು ಹಾಗೆಯೇ ಒಡಿಶಾದಿಂದ ಎರಡು ಪ್ರಕರಣಗಳು ವರದಿಯಾಗಿವೆ.
ಜರ್ಮನಿ, ಬೆಲ್ಜಿಯಂ, ಫ್ರಾನ್ಸ್, ಡೆನ್ಮಾರ್ಕ್, ಯುಎಸ್ ಮತ್ತು ಯುಕೆ ಸೇರಿದಂತೆ ವಿಶ್ವದ ವಿವಿಧ ದೇಶಗಳಲ್ಲಿ ಬಿಎಫ್7 ವೈರಸ್ ವೇಗವಾಗಿ ಹರಡಿ ಹೆಚ್ಚುತ್ತಿರುವ ಹಿನ್ನೆಲೆ ಕೇಂದ್ರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.
ಓಮಿಕ್ರಾನ್ ಬಿಎಫ್ 7 ರೂಪಾಂತರದ ಲಕ್ಷಣಗಳು
ಓಮಿಕ್ರಾನ್ ಬಿಎಫ್ 7 ರೂಪಾಂತರದ ಮೂಲಕ ಜ್ವರ, ಗಂಟಲು ನೋವು, ಮೂಗು ಸೋರುವಿಕೆ ಮತ್ತು ಕೆಮ್ಮು ಸೇರಿದಂತೆ ಉಸಿರಾಟದ ಸೋಂಕಿನ ಲಕ್ಷಣಗಳು ಕಂಡು ಬರುತ್ತವೆ. ಕೆಲವು ರೋಗಿಗಳಿಗೆ ಅತಿಸಾರ ಮತ್ತು ವಾಂತಿ ಸೇರಿದಂತೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕೂಡ ಕಾಡಬಹುದು.
ಈ ರೀತಿಯ ರೋಗಲಕ್ಷಣಗಳನ್ನು ಕಂಡು ಬಂದರೆ, ತಕ್ಷಣ ವೈದ್ಯರ ಸಲಹೆ ಜೊತೆಗೆ ಪರೀಕ್ಷೆಗೆ ಒಳಗಾಗಲು ತಜ್ಞರು ಸಲಹೆ ನೀಡಿದ್ದಾರೆ. ಈ ರೂಪಾಂತರದಿಂದ ಯಾವುದೇ ಗಂಭೀರ ಪರಿಣಾಮ ಬೀರದು ಎನ್ನಲಾಗುತ್ತಿದೆ. ಆದರೆ ಇದು ವೇಗವಾಗಿ ಹರಡುವ ಸಾಧ್ಯತೆಗಳು ದಟ್ಟವಾಗಿವೆ. ಹೀಗಾಗಿ, ಆರಂಭಿಕ ಪತ್ತೆ ಮಾಡುವುದು ಉತ್ತಮ.
ಭಾರತದಲ್ಲಿ ಇಲ್ಲಿಯವರೆಗೆ ಬಿಎಫ್7 ರೂಪಾಂತರದ ನಾಲ್ಕು ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಜನರು ಕೋವಿಡ್-ಸೂಕ್ತ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಒತ್ತಾಯಿಸಿದ್ದಾರೆ. ‘COVID ಇನ್ನೂ ಮುಗಿದಿಲ್ಲ. ಸಂಬಂಧಪಟ್ಟ ಎಲ್ಲರಿಗೂ ಎಚ್ಚರಿಕೆ ವಹಿಸಲು ಮತ್ತು ಕಣ್ಗಾವಲು ಬಲಪಡಿಸಲು ಸೂಚಿಸಿದ್ದಾರೆ.
ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮನೋಜ್ ಅಗರ್ವಾಲ್ ಸುದ್ದಿ ಸಂಸ್ಥೆ ಎಎನ್‌ಐಗೆ ಮಾತನಾಡಿ, ಕೇಂದ್ರ ಸರ್ಕಾರವು ಮಂಗಳವಾರ ಅಂತರರಾಷ್ಟ್ರೀಯ ಪ್ರಯಾಣಿಕರನ್ನು ಸರಿಯಾಗಿ ಪರೀಕ್ಷಿಸಲು ಜೊತೆಗೆ ಜೀನೋಮ್ ಅನುಕ್ರಮವನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ರಾಜ್ಯಗಳಿಗೆ ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಚೀನಾ, ಜಪಾನ್, ದಕ್ಷಿಣ ಕೊರಿಯಾ, ಫ್ರಾನ್ಸ್ ಮತ್ತು ಯುನೈಟೆಡ್ ಸ್ಟೇಟ್ಸ್ ನಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿದೆ.
‘ಸೆಲ್ ಹೋಸ್ಟ್ ಮತ್ತು ಮೈಕ್ರೋಬ್’ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಬಿಎಫ್ 7 ರೂಪಾಂತರವು ಮೂಲ ವುಹಾನ್ ವೈರಸ್‌ಗಿಂತ 4.4 ಪಟ್ಟು ಹೆಚ್ಚಿನ ತಟಸ್ಥೀಕರಣ ಪ್ರತಿರೋಧವನ್ನು ಹೊಂದಿರಲಿದೆ ಎನ್ನಲಾಗಿದ್ದು, ವ್ಯಾಕ್ಸಿನೇಷನ್‌ನಿಂದ ಪ್ರತಿಕಾಯಗಳು ವೈರಸ್ ವಿರುದ್ಧ ಸಾಕಷ್ಟು ಪರಿಣಾಮ ಬೀರದು ಎನ್ನಲಾಗುತ್ತಿದೆ.
ಮುನ್ನೆಚ್ಚರಿಕೆ ಕ್ರಮಗಳು
ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಆಚರಣೆಗಳು ಸನಿಹದಲ್ಲಿರುವುದರಿಂದ ಕೋವಿಡ್ ನಡವಳಿಕೆಯನ್ನು ಅನುಸರಿಸುವುದು ಎಂದಿಗಿಂತಲೂ ಹೆಚ್ಚು ಮಾಸ್ಕ್ ಧರಿಸುವುದು. ಸಾಮಾಜಿಕ ಅಂತರ ಜೊತೆಗೆ ಸ್ಯಾನಿಟೈಸರ್ ಬಳಕೆ ಸಂಭವನೀಯ ಹರಡುವಿಕೆಯನ್ನು ತಡೆಯಲು ಸಹಾಯ ಮಾಡುವ ಮೂಲ ಹಂತಗಳಾಗಿವೆ.
ಹಿಂದಿನ ಸೋಂಕುಗಳಿಂದಾಗಿ ಕಡಿಮೆ ಮಟ್ಟದ ರೋಗನಿರೋಧಕ ಶಕ್ತಿಯು ಚೀನಾದಲ್ಲಿ ಉಲ್ಬಣಗೊಳ್ಳಲು ಪ್ರಮುಖ ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ.
ಇದೀಗ ಬಹುತೇಕ ಎಲ್ಲಾ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು, ಕೋರೋನಾ ವಿರುದ್ಧ ಹೋರಾಡಲು ಮಾಸ್ಕ್‌ಗಳನ್ನು ಧರಿಸುವುದನ್ನು ಸರ್ಕಾರ ಕಡ್ಡಾಯ ಗೊಳಿಸಲಾಗಿದೆ. ನಮ್ಮ ಕೈಗಳನ್ನು ತೊಳೆಯುವ ಬಗ್ಗೆ ಶ್ರದ್ಧೆಯಿಂದ ಇರುವುದರ ಜೊತೆಗೆ, ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಹೆಚ್ಚು ಗಮನ ಹರಿಸುವುದು ಉತ್ತಮ.