ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಗಳಿಗೆ ಸಿಹಿಸುದ್ದಿ

ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ರಾಜ್ಯದಲ್ಲಿನ ಸಾರ್ವಜನಿಕರಿಗೆ ಉತ್ತಮ ಹಾಗೂ ಗುಣಮಟ್ಟದ ಸಾರಿಗೆ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಶ್ರಮಿಸುವ ಸಾರಿಗೆ ನಿಗಮಗಳ ನೌಕರರಿಗೆ ಶುಭ ಸುದ್ದಿ ಕಾದಿದೆ.

ಹೌದು!! ರಸ್ತೆ ಸಾರಿಗೆ ನಿಗಮ ಪ್ರಪ್ರಥಮ ಬಾರಿಗೆ ಹೊಸ ಯೋಜನೆ ರೂಪಿಸಿದ್ದು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ತಮ್ಮ ಸಿಬ್ಬಂದಿಗಳಿಗೆ ಅಪಘಾತ ವಿಮೆ (Accident Insurance) ನೀಡಲು ಅಣಿಯಾಗಿದೆ. ಈ ಯೋಜನೆಯ ಸಲುವಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಜೊತೆಗೆ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ.

ಈ ಅಪಘಾತ ವಿಮೆಯು ಸಂಪೂರ್ಣ ಪ್ರೀಮಿಯಂ ರಹಿತವಾಗಿರುತ್ತದೆ ಎಂದು ರಸ್ತೆ ಸಾರಿಗೆ ನಿಗಮವು ಮಾಹಿತಿ ನೀಡಿದ್ದು , ಹೀಗಾಗಿ, ರಸ್ತೆ ನಿಗಮ ಹಗಲಿರುಳು ಶ್ರಮಿಸುವ ತನ್ನ ನೌಕರರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ನಡೆದ ಒಪ್ಪಂದದ ಅನುಸಾರ ಗರಿಷ್ಟ ಮೊತ್ತದ ವಿಮೆ ಮೊತ್ತ ನೀಡಲು ಬ್ಯಾಂಕ್ ಸಮ್ಮತಿ ಸೂಚಿಸಿದೆ.

ಒಂದು ವೇಳೆ ಸಾರಿಗೆ ಇಲಾಖೆ ನೌಕರರು ಕರ್ತವ್ಯದ ವೇಳೆ ಮೃತಪಟ್ಟರೆ, ಮೃತಪಟ್ಟ ನೌಕರನ ಕುಟುಂಬಕ್ಕೆ ರೂ. 50 ಲಕ್ಷಗಳ ವಿಮಾ ಪರಿಹಾರವನ್ನು ವಿತರಣೆ ಮಾಡಲಾಗುತ್ತದೆ. ಒಂದು ವೇಳೆ ಕರ್ತವ್ಯ ಸಮಯದಲ್ಲಿ ಅಪಘಾತದಿಂದ ಅಂಗನ್ಯೂನ್ಯತೆಗೆ ಒಳಗಾದಲ್ಲಿ 20 ಲಕ್ಷ ರೂ. ಮತ್ತು ಭಾಗಶಃ ಅಂಗನ್ಯೂನ್ಯತೆಗೆ ₹10 ಲಕ್ಷ ರೂ. ಪರಿಹಾರ ಮೊತ್ತ ವಿತರಿಸಲಾಗುತ್ತದೆ.

ಈ ಪ್ರಯೋಜನ ಪಡೆದುಕೊಳ್ಳಲು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಸಿಬ್ಬಂದಿಗಳು ಕಡ್ಡಾಯವಾಗಿ ಬ್ಯಾಂಕ್ ಖಾತೆಯನ್ನು ಸ್ಟೇಟ್ ಬ್ಯಾಕ್ ಆಫ್ ಇಂಡಿಯಾದ Corporate Salary Package(CSP) ನ ಅಡಿಯಲ್ಲಿ ಬರುವಂತೆ ಗಮನ ಹರಿಸಬೇಕಾಗಿದೆ. ಈಗಾಗಲೇ SBI ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ಹೊಂದಿರುವ ಸಿಬ್ಬಂದಿಗಳು ಅದನ್ನು Corporate Salary Package (CSP)ಗೆ ಬದಲಾವಣೆ ಮಾಡಿಕೊಳ್ಳಲು ಬ್ಯಾಂಕ್​ಗೆ ಮನವಿ ಮಾಡಬೇಕಾಗಿದೆ.

ಹೀಗಾಗಿ, SBI ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿರುವ ಎಲ್ಲಾ ನೌಕರರು ಅರ್ಜಿ ಭರ್ತಿ ಮಾಡಿ ಬ್ಯಾಂಕಿಗೆ ಸಲ್ಲಿಸಬೇಕಾಗಿದೆ. ಒಂದು ವೇಳೆ CSP ಖಾತೆಯನ್ನು ಹೊಂದಿರುವ ಸಿಬ್ಬಂದಿಯು ಬೇರೆ ಬ್ಯಾಂಕುಗಳಲ್ಲಿ ತನ್ನ ವೇತನ ಖಾತೆಯನ್ನು ಹೊಂದಲು ಬಯಸಿದಲ್ಲಿ ಕಡ್ಡಾಯವಾಗಿ SBI ಬ್ಯಾಂಕಿನಿಂದ ಆಕ್ಷೇಪಣಾ ರಹಿತ ದೃಢೀಕರಣ ಪತ್ರವನ್ನು ಪಡೆಯಬೇಕಾದ ಅವಶ್ಯಕತೆ ಇದೆ.

ಆದರೆ, ಈ ಪ್ರಯೋಜನ ಪಡೆಯಲು ಸಾರಿಗೆ ಸಿಬ್ಬಂದಿ ಯು ಅಪಘಾತ ನಡೆದ ದಿನಾಂಕದ ಹಿಂದಿನ 3 ತಿಂಗಳಲ್ಲಿ ನಿರಂತರವಾಗಿ ಅವರ ವೇತನವು CSP-SBI ಬ್ಯಾಂಕ್ ಖಾತೆಗೆ ಜಮಾ ಆಗಿರಬೇಕಾಗುತ್ತದೆ. ಅಲ್ಲದೆ, ಬ್ಯಾಂಕಿನವರಿಗೆ ಅಪಘಾತ ನಡೆದ 90 ದಿನಗಳ ಒಳಗೆ ಅಪಘಾತದ ಮಾಹಿತಿಯನ್ನು ನೀಡಬೇಕಾಗಿದ್ದು, ಪೂರಕ ದಾಖಲೆಗಳನ್ನು 180 ದಿನಗಳ ಗಡುವಿನ ಒಳಗೆ ಸಲ್ಲಿಸಬೇಕಾಗುತ್ತದೆ.

ಒಂದು ವೇಳೆ ವೇತನವು ಜಮಾ ಆಗದೇ ಇದ್ದರೆ ಸಾರಿಗೆ ಸಿಬ್ಬಂದಿಯ CSP ಬ್ಯಾಂಕ್ ಖಾತೆಯು ಸಾಮಾನ್ಯ ಉಳಿತಾಯ ಖಾತೆಯಾಗಿ ಬದಲಾಗುತ್ತದೆ. ಈ ಸಂದರ್ಭದಲ್ಲಿ ಮೇಲ್ಕಂಡ ವಿಮಾ ಜೊತೆಗೆ ಇತರೇ ಸೌಲಭ್ಯ ಗಳನ್ನು ಪಡೆಯಲು ಅರ್ಹರಾಗುವುದಿಲ್ಲ ಎಂಬುದನ್ನು ಗಮನಿಸಬೇಕು.

ನೌಕರನ ಖಾತೆಗೆ ಪ್ರತಿ ತಿಂಗಳು ಜಮಾ ಆಗುವ ವೇತನದ ಆಧಾರದ ಮೇಲೆ CSP ಬ್ಯಾಂಕ್ ಖಾತೆದಾರರನ್ನು Silver (ರೂ. 10,000 ದಿಂದ 25,000). Gold (ರೂ. 25,001 ದಿಂದ 50,000). Diamond (ರೂ 50,001 ದಿಂದ 1,00,000). Platinum (ರೂ. 1,00,000 ಮೇಲ್ಪಟ್ಟು) ಎಂದು ವಿಂಗಡಿಸಲಾಗುತ್ತದೆ.

ಈ ಪ್ರಕಾರ ಪಾಲಿಸಿದಾರರು ಅಪಘಾತದಿಂದ ಮರಣ ಹೊಂದಿದ್ದಲ್ಲಿ ಹೆಚ್ಚುವರಿ ಸೌಲಭ್ಯಗಳು ದೊರೆಯುತ್ತವೆ. ಡೆಬಿಟ್ ಕಾರ್ಡ್ (Master/ Visa) ಬಳಕೆದಾರರಿಗೆ ಹೆಚ್ಚುವರಿ ವೈಯಕ್ತಿಕ ಅಪಘಾತ ವಿಮೆ ಇದರಲ್ಲಿ Platinum ಖಾತೆದಾರರಿಗೆ ರೂ. 5 ಲಕ್ಷ, Diamond & Gold ಖಾತೆದಾರರಿಗೆ ರೂ. 2 ಲಕ್ಷಗಳ ಹೆಚ್ಚುವರಿಯಾಗಿ ವೈಯಕ್ತಿಕ ಅಪಘಾತ ವಿಮಾ ಸೌಲಭ್ಯ ದೊರೆಯಲಿದೆ.

Leave A Reply

Your email address will not be published.