Cyber Crime: ಹುಡುಗರೇ ಎಚ್ಚರದಿಂದಿರಿ | ಬಳುಕುವ ಸುಂದರಿಯ ಅಂದದ ಫೋಟೋ ನೋಡಿ ಮಾರು ಹೋಗದಿರಿ | ಫೋಟೋ ನೋಡಿ ಮೆಸೇಜ್ ಮಾಡಿದ್ರೆ ಬ್ಯಾಂಕ್ನಲ್ಲಿದ್ದ ಹಣ ಸ್ವಾಹ!!
ಇಂದಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಬಳಕೆದಾರರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಪ್ರತಿಯೊಬ್ಬರ ಮೊಬೈಲಲ್ಲೂ ಒಂದಾದರೂ ಸೋಶಿಯಲ್ ಮೀಡಿಯಾ ಇದ್ದೇ ಇದೆ. ಆದರೆ ಯಾರೇ ಅಗಲಿ ಸೋಶಿಯಲ್ ಮೀಡಿಯಾಗಳನ್ನು ಅತಿಯಾಗಿ ಬಳಕೆ ಮಾಡಬಾರದು. ಇದನ್ನೇ ಲಾಭವನ್ನಾಗಿಟ್ಟುಕೊಂಡು ಸೈಬರ್ ಕಳ್ಳರು ಯಾವ ಮೂಲೆಯಲ್ಲಿ ಬೇಕಾದರೂ ಕುಳಿತುಕೊಂಡು ಹಣವನ್ನು ಲೂಟಿ ಮಾಡುತ್ತಾರೆ. ಇದರಿಂದ ಎಷ್ಟೋ ಜನರು ಮೋಸ ಹೋಗಿದ್ದಾರೆ. ಈಗ ಅಂತಹದೇ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹುಡುಗಿ ಸೂಪರ್ ಆಗಿದ್ದಾಳೆ, ಮೆಸೇಜ್ ಮಾಡಿದ್ದಾಳೆ ಅಂತ ರಿಪ್ಲೇ ಏನಾದ್ರೂ ಕೊಟ್ರೇ ನಿಮ್ಮ ಬ್ಯಾಂಕ್ನಲ್ಲಿದ್ದ ಹಣ ‘ಸ್ವಾಹ’ ಆಗೋದ್ರಲ್ಲಿ ಡೌಟೇ ಇಲ್ಲ!!!
ಹೌದು, ಮುಂಬೈ ಮೂಲದ ವ್ಯಕ್ತಿಯೊಬ್ಬನು, ಕಮಿಷನ್ ದುಡ್ಡಿನ ಆಸೆಯಲ್ಲಿ ಕಳಕೊಂಡಿದ್ದು ಮಾತ್ರ ಬರೋಬ್ಬರಿ 37.80 ಲಕ್ಷ ರೂಪಾಯಿ!!… ಮಹಿಳೆಯೊಬ್ಬಳು ವ್ಯಕ್ತಿಗೆ ಟೆಲಿಗ್ರಾಮ್ನಲ್ಲಿ ಒಂದು ಮೆಸೇಜ್ ಕಳುಹಿಸಿದ್ದಾಳೆ. ಈ ಮೆಸೇಜ್ನಲ್ಲಿ ಏನಿತ್ತೆಂದರೆ ಈ ಲಿಂಕ್ ಓಪನ್ ಮಾಡುವ ಮೂಲಕ ಸುಲಭದಲ್ಲಿ ಆನ್ಲೈನ್ನಲ್ಲಿ ಹಣ ಗಳಿಸಬಹುದು. ಆದರೆ ಇದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೇ ಲಿಂಕ್ ಓಪನ್ ಮಾಡಿ ಕಂಪನಿ ವೆಬ್ಸೈಟ್ನಲ್ಲಿರುವ ಪ್ರೊಡಕ್ಟ್ಗಳಿಗೆ ರೇಟಿಂಗ್ ಅನ್ನು ನೀಡಬೇಕು. ಉತ್ತಮ ರೇಟಿಂಗ್ ನೀಡಿದರೆ ನಿಮಗೆ ಕಂಪನಿಯಿಂದ ಕಮಿಷನ್ ಬರುತ್ತದೆ ಎಂದು ಹೇಳಿ ಹಣದ ಆಮೀಷವನ್ನು ಹುಟ್ಟಿಸಿದ್ದಾಳೆ.
ಮಹಿಳೆ ನೀಡಿದ ಕಮಿಷನ್ ಆಸೆ ಹಾಗೂ ಆಕೆಯ ಮೆಸೇಜ್ಗಳನ್ನು ನೋಡಿ ಕರಗಿಹೋದ ವ್ಯಕ್ತಿ ಆ ಕ್ಷಣದಲ್ಲೇ ಆಕೆ ಕಳುಹಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ, ಅಲ್ಲಿ ಮತ್ತೊಬ್ಬ ಮಹಿಳೆ ಅವನಿಂದ ವೆಬ್ಸೈಟ್ನಲ್ಲಿ ಕೆಲವು ಟಾಸ್ಕ್ಗಳನ್ನು ಪೂರೈಸಬೇಕೆಂದು ಹೇಳಿದ್ದಾಳೆ. ಆಕೆ ಹೇಳಿದಂತೆ ಈತನೂ ಕೂಡ ವೆಬ್ಸೈಟ್ ಲಿಂಕ್ ಕ್ಲಿಕ್ ಮಾಡಿ ಅಲ್ಲಿ ಕೇಳಿರುವ ಎಲ್ಲಾ ಡೀಟೇಲ್ಸ್ ಅನ್ನು ಫಿಲ್ ಮಾಡಿ, ಆಕೆಯ ವೆಬ್ಸೈಟ್ಗೆ ಲಾಗಿನ್ ಕೂಡ ಆಗಿದ್ದಾನೆ. ಲಾಗಿನ್ ಆದ ಬಳಿಕ ನೀವು ಈ ವೆಬ್ಸೈಟ್ನಲ್ಲಿರುವ ಉತ್ಪನ್ನಗಳಿಗೆ ಉತ್ತಮ ರೇಟಿಂಗ್ ನೀಡಬೇಕು ಕೊನೆಗೆ ನಿಮ್ಮ ವ್ಯಾಲೆಟ್ಗೆ ಹಣ ಬರುತ್ತದೆ ಎಂದು ಹೇಳಿದ್ದಳು.
ಅದರಂತೆ ಮುಂಬೈನ ವ್ಯಕ್ತಿ ಆಕೆಯ ವೆಬ್ಸೈಟ್ನಲ್ಲಿ ನೀಡಲಾದ ಕಾರ್ಯಗಳನ್ನು ನಿರ್ವಹಿಸಲು ಪ್ರಾರಂಭಿಸಿದ್ದಾನೆ. ಇದರಲ್ಲಿ ಮಹಿಳೆ ತನ್ನದೆಂದು ಹೇಳಿದ ಕೆಲವು ಪ್ರೊಡಕ್ಟ್ಗಳಿಗೆ ಫೈವ್ ಸ್ಟಾರ್ ರೇಟಿಂಗ್ ನೀಡುವುದು ಈತನ ಕೆಲಸವಾಗಿತ್ತು. ಪ್ರತಿ ಬಾರಿಯೂ ಅವನು ರೇಟಿಂಗ್ ನೀಡಿದ ನಂತರ ಅದಕ್ಕಾಗಿ ಅವನು ಕೆಲವು ಪ್ರೀಮಿಯಂ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಲಾಗಿದೆ. ಅಲ್ಲದೆ ಈ ಶುಲ್ಕ ಇ-ವ್ಯಾಲೆಟ್ನಲ್ಲಿ ಮತ್ತೆ ವಾಪಾಸ್ ಬರಲಿದೆ ಎಂದು ಸೂಚನೆ ಕೂಡ ನೀಡಲಾಗಿದೆ.
ಹೀಗೆ ಪಾವತಿಸಿದ ವ್ಯಕ್ತಿ ಟಾಸ್ಕ್ ಕಂಪ್ಲೀಟ್ ಆಗುವ ಹೊತ್ತಿಗೆ ಕಳಕೊಂಡಿದ್ದು ಬರೋಬ್ಬರಿ 37.80 ಲಕ್ಷ ರೂಪಾಯಿ. ಆದರೆ ಮೊದಲೇ ಹೇಳಿದಂತೆ ಆತನ ವ್ಯಾಲೆಟ್ಗೆ ಯಾವುದೇ ರೀತಿಯ ವಾಪಸ್ ಹಣ ಬರಲಿಲ್ಲ. ಕೇವಲ 41 ರೂಪಾಯಿ ಮಾತ್ರ ಬಂದಿದೆ. ನಂತರ ತಾನು ಮೋಸ ಹೋಗಿರುವದನ್ನು ಅರಿತ ವ್ಯಕ್ತಿ ಎಷ್ಟು ರಿಕ್ವೆಸ್ಟ್ ಮಾಡಿದ್ರೂ ಆ ಮೆಸೇಜ್ಗೆ ಅವರಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಕೂಡಲೇ ಈ ವಿಷಯದ ಕುರಿತು ಪೊಲೀಸ್ ಠಾಣೆಗೆ ಹೋಗಿ ದೂರನ್ನೂ ನೀಡಿದ್ದಾನೆ.
ಇತ್ತೀಚೆಗೆ ಹ್ಯಾಕರ್ಸ್ಗಳ ಸಂಖ್ಯೆ ಹೆಚ್ಚಾಗಿದ್ದೂ, ಈ ಹ್ಯಾಕರ್ಸ್ಗಳ ಮುಖ್ಯ ಉದ್ದೇಶವೇ ಬಳಕೆದಾರರ ಬ್ಯಾಂಕ್ನಲ್ಲಿದ್ದ ಹಣವನ್ನು ಖಾಲಿ ಮಾಡುವುದು. ಇದಕ್ಕಾಗಿ ವಂಚಕರು ಹಗಲಿರುಳು ಕಾದು ಬೇಕಾದರೂ ವಂಚನೆ ಮಾಡಿ, ನಿಮ್ಮನ್ನು ಬಲೆಗೆ ಬೀಳಿಸೋ ಮಾಸ್ಟರ್ ಸ್ಕೆಚ್ ಹಾಕಿರುತ್ತಾರೆ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಒಂದು ಲಿಂಕ್ ಬಂದಾಗ ಅದನ್ನು ಓಪನ್ ಮಾಡಬೇಕಾದ್ರೆ ಜಾಗೃತವಹಿಸಿ. ಇಲ್ಲದಿದ್ದರೆ ನೀವು ಮೋಸ ಹೋಗುವುದಂತೂ ಗ್ಯಾರಂಟಿ.